ಐಐಎಂ ಸ್ನಾತಕೋತ್ತರ ವಿದ್ಯಾರ್ಥಿ ಮಹಡಿಯಿಂದ ಬಿದ್ದು ಸಾವು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಸ್ನಾತಕೋತ್ತರ ವಿದ್ಯಾರ್ಥಿಯೋರ್ವ ಹಾಸ್ಟೆಲ್ ಕಟ್ಟಡದ 3ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.

ಮೃತನನ್ನು ಎಂಬಿಎ ಎರಡನೇ ವರ್ಷದ ವಿದ್ಯಾರ್ಥಿ ಗುಜರಾತ್ ಮೂಲದ ನಿಲಯ್ ಕೈಲಾಶ್‌ಭಾಯ್ ಪಟೇಲ್ (28) ಎಂದು ಗುರುತಿಸಲಾಗಿದೆ.

ಶನಿವಾರ ನಿಲಯ್ ತನ್ನ ಹುಟ್ಟುಹಬ್ಬವಿದ್ದ ಕಾರಣ ಸ್ನೇಹಿತರೊಂದಿಗೆ ಹೊರಗಡೆ ತೆರಳಿದ್ದ. ನಂತರ ಹಾಸ್ಟೆಲ್​ನಲ್ಲಿರುವ ಸ್ನೇಹಿತನ‌ಕೊಠಡಿಯಲ್ಲಿ ನಿಲಯ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಎನ್ನಲಾಗಿದೆ. ಬಳಿಕ ತನ್ನ ಕೋಣೆಗೆ ಹಿಂತಿರುಗುತ್ತಿದ್ದಾಗ ಅವಘಡ ಸಂಭವಿಸಿದೆ. ಭಾನುವಾರ ಬೆಳಗ್ಗೆ ಹಾಸ್ಟೆಲ್ ಭದ್ರತಾ ಸಿಬ್ಬಂದಿ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಂಪಸ್‌ಆವರಣದ ಹಾಸ್ಟೆಲ್‌ನ ಬೇರೆ ಬ್ಲಾಕ್‌ನಲ್ಲಿರುವ ಸ್ನೇಹಿತರ ಕೋಣೆಯಲ್ಲಿ ಹುಟ್ಟುಹಬ್ಬ ಆಚರಿಸಲು ನಿಲಯ್ ತೆರಳಿದ್ದ. ರಾತ್ರಿ 11.30ರ ಸುಮಾರಿಗೆ ಸ್ನೇಹಿತನ ಕೊಠಡಿಯಿಂದ ಹೊರಟು ಎಫ್ಬ್ಲಾಕ್​​ನಲ್ಲಿರುವ ತನ್ನ ಕೋಣೆಗೆ ವಾಪಸಾಗುವಾಗ ಘಟನೆ ಸಂಭವಿಸಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಹಾಸ್ಟೆಲ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರಿಗೆ ಭಾನುವಾರ ಸಂಜೆ ಆಗಮಿಸಿದ ನಿಲಯ್ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ನಿಲಯ್ ಸಾವಿನ ಕುರಿತು ಸ್ಪಷ್ಟನೆ ನೀಡುವಂತೆ ಅಖಿಲ ಭಾರತ ಒಬಿಸಿ ವಿದ್ಯಾರ್ಥಿಗಳ ಸಂಘ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್​​ಗೆ ಒತ್ತಾಯಿಸಿದೆ.

- Advertisement -  - Advertisement - 
Share This Article
error: Content is protected !!
";