ಶ್ವಾಸ ಇರುವವರಿಗೂ ವಿಶ್ವಾಸ ಕಳೆದುಕೊಳ್ಳಬೇಡಿ- ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

News Desk

ಚಂದ್ರವಳ್ಳಿ ನ್ಯೂಸ್, ಮಾಲ್ಡೀವ್ಸ್:
ಶ್ವಾಸ ಇರುವವರಿಗೂ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

 ಮಾಲ್ಡೀವ್ಸ್ ದೇಶದ ವಿಲ್ಲಾ ನೌಟೀಕ ಪ್ಯಾರಡೇಸ್ ದ್ವೀಪದಲ್ಲಿ ಶುಕ್ರವಾರ ನಡೆದ ವಿಶ್ವ ಸಾಧಕರ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಾಸವೇ ವಿಶ್ವ. ಮನುಜ ಮತ ವಿಶ್ವಪಥ, ದಯೆ ಎಲ್ಲಾ ಧರ್ಮಗಳ ಮೂಲ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ವಿಶ್ವಸಾಧಕರು ಶ್ವಾಸ ಇರುವವರಿಗೂ ವಿಶ್ವಾಸ ಉಳಿಸಿಕೊಂಡಾಗ ಅಜರಾಮರ ದೃವತಾರೆಯಾಗುತ್ತಾರೆ ಎಂದು ತಿಳಿಸಿದರು.

 ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣೋತೆ ಇರಲಿ. ಎಲೆಮರಿಕಾಯಿಗಳಂತಹ ಸಾಧಕರನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯ ಜಗತ್ತಿಗೆ ಮಾದರಿ. ಸಂಸ್ಕೃತಿ, ಸಂಸ್ಕರ ಭಾರತದ ಹೆಮ್ಮೆ ಹಾಗೂ ಗಟ್ಟಿತನದಿಂದ ಕೂಡಿದೆ. ಹಾಗಾಗಿ ಭಾರತ ಜಗತ್ತಿಗೆ ಸಂಸ್ಕಾರದ ರಾಯಭಾರಿಯಾಗಿದೆ ಎಂದು ಹೇಳಿದರು.

 ನಾಡಿನ ಆದಿಬೀದಿಗಳಲ್ಲಿ ಆಗುವ ಸಂಘರ್ಷ, ರಾಷ್ಟ್ರದ ಗಡಿ ರೇಖೆಗಳ ತನಕ ನಡೆಯುತ್ತದೆ. ಕೆಲವು ಸಂಘರ್ಷಗಳು ನಕಾರಾತ್ಮಕದಿಂದ ಕೂಡಿರುತ್ತವೆ. ಇನ್ನೂ ಕೆಲವು ಸಂಘರ್ಷಗಳು ಸಕಾರಾತ್ಮಕದಿಂದ ಕೂಡಿರುತ್ತವೆ. ಸಂಸ್ಕಾರವಂತ ಸಾಧಕರ ಸಂಘರ್ಷ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾಗಿದೆ. ಅಂತಹ ಸಾಧಕರು, ಸಂತರು, ಮಹಾಂತರು ದಾರ್ಶನಿಕರಾಗುತ್ತಾರೆ.

 ಕನ್ನಡ ನಾಡಿನ ಬಸವ. ಸಿದ್ದರಾಮ. ಹಾಗೂ ಶರಣರು ಮತ್ತು ಕನಕದಾಸ, ಪುರಂದರದಾಸರು ನಾಡಿನ ಅಪ ಮೌಲ್ಯಗಳ ವಿರುದ್ಧ ಸಂಘರ್ಷ ಮಾಡುತ್ತಾ ಸಂಸ್ಕಾರದ ಸಧ್ಬಾವನೆ ನೀಡಿದ್ದಕ್ಕಾಗಿ ಅವರು ಎಂದಿಗೂ  ಧ್ರುವತಾರೆಗಳಾಗಿದ್ದಾರೆ. ಭಾರತದ ಮಟ್ಟಿಗೆ ನಾರಾಯಣ ಗುರು, ಗೌತಮ ಬುದ್ಧ, ಅಂಬೇಡ್ಕರ್ ಹಾಗೂ ಜೈನ ತೀರ್ಥಂಕರು, ಸಿಖ್ಖ ಗುರುಗಳು ಸಮಾಜೋದ್ಧಾರ್ಮಿಕ ದಾರ್ಶನಿಕರಾಗಿದ್ದಾರೆ.

ಜಗತ್ತಿನ ನೂತನ ಧರ್ಮಗಳಿಂದ ಹಿಡಿದು ಪ್ರಾಚೀನ ಧರ್ಮಗಳ ತನಕ ಮೂಲ ಸಂದೇಶ ದಯೆ ಮತ್ತು ಶಾಂತಿ. ಯಾವ ಧರ್ಮಗಳು ಅಶಾಂತಿಯನ್ನು ಬಯಸುವುದಿಲ್ಲ. ನಕಾರಾತ್ಮಕ ಸಂಘರ್ಷದ ಪ್ರಚೋದನೆ ನೀಡುವುದಿಲ್ಲ. ಹೀಗಾಗಿ ಎಲ್ಲಾ ಧರ್ಮಗಳು ಸರ್ವ ಶ್ರೇಷ್ಠ. ಜಗತ್ತಿನ ಏಳು  ಪ್ರಾಚೀನ ನಾಗರಿಕತೆಯ ಸಂಸ್ಕೃತಿಗಳಲ್ಲಿ ಭಾರತೀಯ ನಾಗರಿಕತೆ ಮಾತ್ರ ಉಳಿದಿದೆ. ಕಾರಣ ಭಾರತ ದೇಶದಲ್ಲಿ ಜನ್ಮಿಸಿದಂತಹ ಧರ್ಮ ಅನೇಕ ಕಾಲಘಟ್ಟಗಳಲ್ಲಿ ಉದಯಿಸಿದ ಧಾರ್ಮಿಕರು  ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಗಟ್ಟಿಗೊಳಿಸುತ್ತಾ ಬಂದರು. ಆಧುನಿಕ ಕಾಲದಲ್ಲಿ ಪ್ರತಿ ಮನೆಯ ಸ್ತ್ರೀ ಅದನ್ನು ಕಾಪಾಡುತ್ತಿದ್ದಾಳೆ. ಹಾಗಾಗಿ ಆಧುನಿಕ ನಾಗರಿಕತೆಯ ಸಂಸ್ಕಾರದ ರಾಯಭಾರಿ ಮಹಿಳೆ. ಸಂಸ್ಕೃತಿಯ ರಾಯಭಾರಿ ಈಗಿನ ಯುವ ಪೀಳಿಗೆ ಎಂದು ತಿಳಿಸಿದರು.

ವೇದಿಕೆಯಲ್ಲಿ ವಿಶ್ವವಾಣಿ ಪತ್ರಿಕೆಯ ಮುಖ್ಯ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅಧ್ಯಕ್ಷತೆವಹಿಸಿದ್ದರು.

 ಮಾಜಿ ಸಚಿವೆ, ನಟಿ ಡಾ.ಜಯಮಾಲ ಹಾಗೂ ನಟಿ ಸೌಂದರ್ಯ, ಮಾಲ್ಡೀವ್ಸ್ ಅಮಿಯದ್ ಅಬ್ದುಲ್ ಉಪಸ್ಥಿತರಿದ್ದರು. 13 ಜನ ಸಾಧಕರನ್ನು ಗೌರವಿಸಲಾಯಿತು.

 

- Advertisement -  - Advertisement - 
Share This Article
error: Content is protected !!
";