ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ಜಾತಿ ಗಣತಿ ವರದಿ ಜಾರಿಗೊಳಿಸುವುದು ಪ್ರಸ್ತುತ ಹಾಗೂ ಸಮಾಜದ ಸರ್ವ ಜಾತಿಗಳ ಅಭ್ಯುದಯಕ್ಕೆ ಪೂರಕ. ಈ ವರದಿ ಜಾರಿಯಿಂದ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ವರವಾಗಲಿದೆ ಎಂದು ಲೇಖಕ ಹಾಗೂ ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಯೋಗೀಶ್ ಸಹ್ಯಾದ್ರಿ ಅವರು, ಕಾಂತರಾಜ್ ಆಯೋಗವು 2015 ರಿಂದ ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ಜಾತಿಗಣತಿ ವರದಿಯು ಮೇಲ್ನೋಟಕ್ಕೆ ಅತ್ಯಂತ ಸ್ಪಷ್ಟ ಹಾಗೂ ವೈಜ್ಞಾನಿಕವಾದುದಾಗಿದ್ದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದ ಹಲವಾರು ಜಾತಿ-ವರ್ಗಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಸುಮಾರು 170 ಕೋಟಿಗಳಷ್ಟು ಖರ್ಚು ಮಾಡಿ ವೈಜ್ಞಾನಿಕ ದತ್ತಾಂಶಗಳೊಂದಿಗೆ ಸಿದ್ಧಪಡಿಸಿರುವ ವರದಿಯಿಂದ ಹಿಂದುಳಿದ ವರ್ಗಗಳ ಮತ್ತು ಶೋಷಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದಲ್ಲಿ ಪಿ.ಹೆಚ್.ಡಿ ಪದವಿ, ಮೆಡಿಕಲ್, ಇಂಜಿನಿಯರಿಂಗ್, ಸಿಇಟಿ, ಎನ್ಇಟಿ ಹಾಗು ಅನೇಕ ತರಹದ ಉದ್ಯೋಗವಕಾಶಗಳಲ್ಲಿ ಅತ್ಯಂತ ಪ್ರಯೋಜನಕಾರಿಯಾಗಲಿದೆ.
ಆದ್ದರಿಂದ, ಹಿಂದುಳಿದ ವರ್ಗಗಳ ಅಹಿಂದ ನಾಯಕರೆಂದೇ ಗುರುತಿಸಿಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಎಲ್ಲ ಜಾತಿಗಳ ಜನರ ಹಿತದೃಷ್ಠಿಯಿಂದ ಈಗಾಗಲೇ ಸ್ವೀಕರಿಸಿರುವ ಕಾಂತರಾಜ್ ಆಯೋಗದ ವರದಿ ಹಾಗೂ ನ್ಯಾಯಮೂರ್ತಿ ಸದಾಶಿವ ಆಯೋಗದ ಒಳಮೀಸಲಾತಿ ವರದಿಯನ್ನು ಈ ವರ್ಷದಿಂದಲೇ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ನೆಲೆಸಿರುವ ಎಲ್ಲ ಜಾತಿಗಳ ಜನರು ಕನ್ನಡಿಗರೇ ಆಗಿದ್ದು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಹಾಗು ಇನ್ನಿತರ ಶೋಷಿತ ಸಮುದಾಯಗಳ ಅಭಿವೃದ್ಧಿ ಯಾವುದೇ ಸರ್ಕಾರಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ.
1921 ರಲ್ಲಿ ಮಿಲ್ಲರ್ ಆಯೋಗದ ವರದಿಯಿಂದ ಅನೇಕ ಜಾತಿಗಳ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯನ್ನು ಗಮನಿಸಬಹುದು. ಆದ್ದರಿಂದ ಆಗಸ್ಟ್ 01, 2024 ರಂದು ಸುಪ್ರೀಂಕೋರ್ಟ್ ಪೂರ್ಣಪೀಠ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಸದಾಶಿವ ಆಯೋಗದ ಒಳಮೀಸಲಾತಿ ಜಾರಿ ಹಾಗು 2018 ರಲ್ಲಿ ಪೂರ್ಣಗೊಂಡಿರುವ ಕಾಂತರಾಜ್ ಆಯೋಗದ ವರದಿಯನ್ನು ಸರ್ಕಾರ ಅಕ್ಟೋಬರ್ 25 ರಿಂದ ಜರುಗುವ ಸದನದಲ್ಲಿ ಚರ್ಚಿಸಿ ಶೀಘ್ರವಾಗಿ ಅನುಷ್ಠಾನಗೊಳಿಸುವುದು ಸೂಕ್ತವಾದುದು.
ಇಂಥಹ ವಿಷಯಗಳಲ್ಲಿ ಸಾಹಿತಿಗಳು, ಬುದ್ಧಿಜೀವಿಗಳು, ವಿದ್ಯಾವಂತರು ಸರ್ಕಾರಕ್ಕೆ ಸಲಹೆ ನೀಡದೆ ಹೋದರೆ ರಾಜ್ಯದ ಬೆಳವಣಿಗೆಗೆ ಮಾರಕವಾಗಬಹುದು ಎಂದು ತಮ್ಮ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.