ಕುಕ್ಕುಟ ಸಂಸ್ಕರಣಾ ಘಟಕಗಳ ಜೈವಿಕ ಭದ್ರತಾ ಶಿಷ್ಟಾಚಾರಗಳ ಪ್ರಾಮುಖ್ಯತೆ

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುಕ್ಕಟ ಉದ್ಯಮ ಆರಂಭಿಸಲು ಮತ್ತು ಕೋಳಿ ಮಾಂಸ ಮತ್ತು ಮೊಟ್ಟೆ ಸಂಸ್ಕರಣೆ ಕುರಿತು ಖ್ಯಾತ ಪಶುವೈದ್ಯರಾದ ಡಾ.ನರಹರಿ ಅವರು ರೈತರಿಗಾಗಿ ಮುಂದುವರೆದ ಉತ್ತಮ ಲೇಖನ…
ಕುಕ್ಕುಟ ಸಂಸ್ಕರಣಾ ಘಟಕಗಳ ಜೈವಿಕ ಭದ್ರತಾ ಶಿಷ್ಟಾಚಾರಗಳ ಪ್ರಾಮುಖ್ಯತೆ

ಜೈವಿಕ ಸುರಕ್ಷತಾ ಕ್ರಮಗಳು ಸಾರ್ವಜನಿಕ ಆರೋಗ್ಯವನ್ನು ಸುರಕ್ಷಿತವಾಗಿಡಲು, ರೋಗಾಣುಗಳ ಹರಡುವಿಕೆಯನ್ನು ತಡೆಗಟ್ಟಲು ಮತ್ತು ಆಹಾರ ಸುರಕ್ಷತೆಯನ್ನು ಹೊಂದುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಕಠಿಣವಾದ ಈ ಕ್ರಮಗಳಿಂದ ಸಾಲ್ಮೊನೆಲ್ಲಾ ಮತ್ತು ಕ್ಯಾಂಪಿಲೋಬ್ಯಾಕ್ಟರ್ ಸೇರಿದಂತೆ ಹಲವು ರೋಗಾಣುಗಳಿಂದ ಕೋಳಿ ಉತ್ಪನ್ನಗಳನ್ನು ರಕ್ಷಿಸುತ್ತದೆ.

- Advertisement - 

ಈ ತರಹದ ಉತ್ಪಾದನಾ ನಿಮಿತ್ತ ಕ್ರಮಗಳು ಗ್ರಾಹಕರ ನಂಬಿಕೆಯನ್ನು ಕಾಪಾಡಿಕೊಳ್ಳುವಲ್ಲಿ ಹಾಗು ಮಾರುಕಟ್ಟೆ ಬೇಡಿಕೆಯನ್ನು ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಕುಕ್ಕುಟ ಉದ್ಯಮದ ಆರ್ಥಿಕ ಸ್ಥಿರತೆ ಮತ್ತು ವ್ಯಾಪಾರ ಸಂಬಂಧಗಳು ಗಮನಾರ್ಹವಾಗಿ ಉಳಿಯುತ್ತದೆ. ಹಲವಾರು ಆಮದು ಮಾಡಿಕೊಳ್ಳುವ ರಾಷ್ಟ್ರಗಳು ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಮಾನದಂಡಗಳ ಮೇಲೆ ಕಠಿಣ ನಿಯಮಗಳನ್ನು ಜಾರಿಗೊಳಿಸಿರುತ್ತವೆ . ಈ ಮಾನದಂಡಗಳ ಅನುಸರಣೆ ಮಾಡಿದ್ದಲ್ಲಿ ಮಾತ್ರ ಉತ್ಪನ್ನಗಳನ್ನು ರಫ್ತು ಮಾಡಲು ಮತ್ತು ಸಮೃದ್ಧ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶವನ್ನು ಪಡೆಯಲು ಸಹಾಯವಾಗುತ್ತದೆ.

ಭಾರತದ ಉದಯೋನ್ಮುಖ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಅವುಗಳ ಕುಕ್ಕುಟ ಉದ್ಯಮದ  ಬೆಳವಣಿಗೆಯಲ್ಲಿನ  ಪರಿಣಾಮ-
ಕೋಳಿ ಸಂಸ್ಕರಣಾ ವಲಯದಲ್ಲಿ, ಉದಯೋನ್ಮುಖ ಮಾರುಕಟ್ಟೆ ಪರಿಸ್ಥಿತಿಗಳಿಂದ ಗಣನೀಯ ವಿಸ್ತರಣೆಗೆ ಉತ್ತೇಜನ ನೀಡಲಾಗಿದೆ. ಈ ಹಿಂದೆ ಉಲ್ಲೇಖಿಸಿದಂತೆ ಭಾರತದಲ್ಲಿ ಹೆಚ್ಚುತ್ತಿರುವ ಖರ್ಚು ಸಾಧ್ಯತೆಯ ಆದಾಯಗಳು ಮತ್ತು ವೇಗವಾಗಿ ನಡೆಯುತ್ತಿರುವ ನಗರೀಕರಣ ಪ್ರೋಟೀನ್-ಭರಿತ ಆಹಾರಗಳ ಬೇಡಿಕೆಯನ್ನು ಹೆಚ್ಚಿಸುತ್ತಿವೆ. ಈ ನಡುವೆ ಹೆಚ್ಚುತ್ತಿರುವ ಆರೋಗ್ಯದ ಕಾಳಜಿಯನ್ನು ಪರಿಗಣಿಸಿದರೆ ಕುಕ್ಕುಟ ಉತ್ಪನ್ನಗಳು ಬಹುಬೇಡಿಕೆಯ ಉತ್ಪನ್ನಗಳಾಗಿವೆ ಏಕೆಂದರೆ ಇವುಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಹಾಗು ಎಲ್ಲರ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ.

- Advertisement - 

ಇದು ಉದ್ಯಮದ ಬೆಳವಣಿಗೆಗೆ ಮಾರ್ಗ ಕಲ್ಪಿಸುತ್ತಿದೆ. ಆದರೆ ಸಂಸ್ಕರಣಾ ಉದ್ಯಮವು ಕಚ್ಚಾ ವಸ್ತುಗಳ ಬೆಲೆಗಳಲ್ಲಿನ ಏರಿಳಿತಗಳು, ಜೈವಿಕ ಭದ್ರತೆಯಲ್ಲಿ ಉಲ್ಲಂಘನೆಗಳು ಮತ್ತು ಅಸ್ಥಿರ ಬೆಲೆಗಳು ಸಂಸ್ಕರಿಸಿದ ಉತ್ಪನ್ನಗಳಿಗೆ ಸವಾಲುಗಳ್ನ್ನು ಎಸೆಯುತ್ತಿದೆ. ಈ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದರೆ, ಕುಕ್ಕುಟ ಉದ್ಯಮವು ಇನ್ನಷ್ಟು ವೇಗವಾಗಿ ಬೆಳೆಯಬಲ್ಲದು ಮತ್ತು ಜಾಗತಿಕ ಮಟ್ಟದಲ್ಲಿ ಭಾರತೀಯ ಕುಕ್ಕುಟ ಉತ್ಪನ್ನಗಳ ಮಾನ್ಯತೆಯನ್ನು ವಿಸ್ತರಿಸಬಲ್ಲದು.

ಇದರ ಜೊತೆ ಪಕ್ಷಿ ಜ್ವರ (avian influenza) ಒಂದು ಸವಾಲಾಗಿ ಉಳಿದಿದೆ. ಇದರಿಂದ ಕೋಳಿ ಸಾಕಾಣಿಕೆಯಲ್ಲಿ ಭಾರಿ ತೊಂದರೆಯಾಗುತ್ತಿದೆ ಮತ್ತು ಆರ್ಥಿಕವಾಗಿ ಬಹಳ ನಷ್ಟವನ್ನುಂಟುಮಾಡುತ್ತಿದೆ. ಈ ರೀತಿಯ ಸಾವುಗಳಿಂದ ಪೂರೈಕೆ ಜಾಲಗಳು ಸ್ಥಗಿತಗೊಳ್ಳುತ್ತವೆ. ಹಾಗಾಗಿ ಕಟ್ಟುನಿಟ್ಟಾದ ಜೈವಿಕ ಸುರಕ್ಷತಾ ನಿಯಂತ್ರಣಗಳು, ಸ್ವಚ್ಛತಾ ಕ್ರಮಗಳ ಮೇಲೆ ಹೆಚ್ಚಿನ ಗಮನ, ಕಳಪೆ ತ್ಯಾಜ್ಯ ನಿರ್ವಹಣೆ ಮೇಲೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಇದರಜೊತೆ ಸಂಸ್ಕರಣಾ ಘಟಕಗಳಿಂದ ಬರುವ ನೀರು ಆಗಾಗ್ಗೆ ಪರಿಸರ ಸುಸ್ಥಿರತೆಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಆದ್ದರಿಂದ ಪರಿಸರ ಮತ್ತು ಆರೋಗ್ಯ ಸಂಬಂಧಿತ ಸವಾಲುಗಳನ್ನು ಪರಿಹರಿಸಲು ನವೀನ ತಂತ್ರಜ್ಞಾನ, ಕಟ್ಟುನಿಟ್ಟಾದ ನಿಯಂತ್ರಣ ಕ್ರಮಗಳು ಮತ್ತು ಸುಧಾರಿತ ನಿರ್ವಹಣಾ ನೀತಿಗಳನ್ನು ಅಳವಡಿಸುವುದು ಅಗತ್ಯವಾಗಿರುತ್ತದೆ.

ಮುಂದಿನ ದಿನಗಳಲ್ಲಿ ಸಸ್ಯ ಆಧಾರಿತ ಮಾಂಸ ಪರ್ಯಾಯಗಳ ಅಭಿವೃದ್ಧಿ, ಪ್ರಯೋಗಾಲಯದಲ್ಲಿ ಬೆಳೆದ ಮಾಂಸ ಮತ್ತು ಸಂಸ್ಕರಿಸಿದ ಕೋಳಿಯ ಆಮದು ಭಾರತೀಯ ಸಂಸ್ಕರಣಾ ಉದ್ಯಮಕ್ಕೆ ಸವಾಲಾಗಿ ಪರಿಣಮಿಸಬಹುದು. ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರಸ್ತುತ ಪರ್ಯಾಯಗಳನ್ನು ಭಾರತದಲ್ಲಿ ಮಹತ್ವದ ಅಪಾಯಗಳಾಗಿ ಪರಿಗಣಿಸಲಾಗುತ್ತಿಲ್ಲ ಏಕೆಂದೆರೆ ಈ ಉತ್ಪನ್ನಗಳು ಇನ್ನೂ ಅಭಿವೃದ್ಧಿ ಹಂತದಲ್ಲಿವೆ, ಸೀಮಿತ ಪ್ರಮಾಣದಲ್ಲಿ ಲಭ್ಯವಿದೆ ಮತ್ತು ಮುಖ್ಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಸೇವಿಸಲಾಗುತ್ತದೆ.

ಆದರೆ ನೂತನ ಪರ್ಯಾಯ ಉತ್ಪನ್ನಗಳು ಹೊರದಶಕ್ಕೆ ಕಳುಹಿಸಬಹುದಾದ ಉತ್ಪನ್ನಗಳ ಮೇಲೆ ಪ್ರಭಾವಬೀರಬಹುದು. ಭಾರತದಲ್ಲಿ ಪಾರಂಪರಿಕ ಆಹಾರ ಅಭಿರುಚಿಗಳು ಮತ್ತು ಸಾಂಸ್ಕೃತಿಕ-ಧಾರ್ಮಿಕ ಭಾವನೆಗಳು ಹೆಚ್ಚಾಗಿ ತಾಜಾ ಮಾಂಸಕ್ಕೆ ಒಲವು ತೋರಿಸುತ್ತವೆ.  ಆದರೂ ಈ ವಿಕಸಿಸುತ್ತಿರುವ ಪರ್ಯಾಯ ಪ್ರೋಟೀನ್ ಮೂಲಗಳು ಭವಿಷ್ಯದಲ್ಲಿ ಸ್ಪರ್ಧಾತ್ಮಕ ಸವಾಲುಗಳನ್ನು ಉಂಟುಮಾಡಬಹುದಾದ ಸಾಧ್ಯತೆಯಿರುವುದರಿಂದ, ಈ ಅಭಿವೃದ್ಧಿಗಳಿಗೆ ಸಜ್ಜಾಗಿ ತಯಾರಾಗುವುದು ಅಗತ್ಯವಾಗಿದೆ.

ಈ ಬೆಳವಣಿಗೆಗಳಿಗೆ ಪರಿಣಾಮಕಾರಿಯಾಗಿ ಪ್ರತಿಸ್ಪಂದಿಸಲು 1) ಸರ್ಕಾರಿ ಸಂಸ್ಥೆಗಳು, ಉದ್ಯಮದಲ್ಲಿ ಇರುವವರು, ಮತ್ತು ಉದ್ಯಮ ತಜ್ಞರು ಪರಸ್ಪರ ಸಹಯೋಗದಲ್ಲಿ ಕಾರ್ಯನಿರ್ವಹಿಸಬೇಕು. 2) ಸದೃಢ ರೋಗ ತಡೆ ನಿಯಮಾವಳಿಗಳನ್ನು ಸ್ಥಾಪಿಸಬೇಕು. 3) ಆಹಾರ ಸುರಕ್ಷತಾ ಮಾನದಂಡಗಳನ್ನು ಉನ್ನತ ಮಟ್ಟಕ್ಕೆ ಕೊಂಡಯ್ಯಬೇಕು. 4) ಪರಿಸರ ಸ್ನೇಹಿ ತಂತ್ರಗಳನ್ನು ಉತ್ತೇಜಿಸಬೇಕು. 5) ಅಪಾಯ ನಿರ್ವಹಣೆ ಮತ್ತು ಮಾರುಕಟ್ಟೆ ಸ್ಥಿರತೆಗೆ ಬೆಂಬಲ ನೀಡಬೇಕು. ಈ ಎಲ್ಲ ಕ್ರಮಗಳಲ್ಲಿ ತಜ್ಞರು ಉತ್ತಮ ಅಭ್ಯಾಸಗಳು, ತಾಂತ್ರಿಕ ಆವಿಷ್ಕಾರಗಳು, ನಿಯಂತ್ರಣ ಚಟುವಟಿಕೆ, ನಿಯಮಾನುಸಾರತೆ ಮತ್ತು ಗುಣಮಟ್ಟದಲ್ಲಿ ಅಭಿವೃದ್ಧಿಯನ್ನು ಕಾಯ್ದುಕೊಳ್ಳಲು ಸಹಾಯಮಾಡಬೇಕು. ಈ ರೀತಿಯಾದ ಪರಸ್ಪರ ಸಹಯೋಗ ಕುಕ್ಕುಟ ಉದ್ಯಮವನ್ನು ಭವಿಷ್ಯದ ಸವಾಲುಗಳನ್ನು ಎದುರಿಸಲು ಶಕ್ತಿಯನ್ನು ತುಂಬುತ್ತದೆ ಮತ್ತು ಕ್ಷೇತ್ರದಲ್ಲಿ ಸ್ಥಿರತೆ, ಪರಿಪೂರ್ಣತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಎತ್ತಿಹಿಡಿಯುತ್ತದೆ.

ಚಿತ್ರ 2.  ಕೋಳಿ ಸಾಕಣೆ ಮತ್ತು ಸಂಸ್ಕರಣೆಯಲ್ಲಿ ಏಕೀಕರಣದ ಪ್ರಾಮುಖ್ಯತೆಯನ್ನು ಸಾರುವ ಚಿತ್ರಾತ್ಮಕ ವಿವರಣೆ
ಕೋಳಿ ಸಾಕಣೆ ಮತ್ತು ಸಂಸ್ಕರಣೆಯಲ್ಲಿ ಏಕೀಕರಣದ ಪ್ರಾಮುಖ್ಯತೆ:

ಕೋಳಿ ಸಾಕಣೆ ಮತ್ತು ಸಂಸ್ಕರಣೆಯಲ್ಲಿ ನಾಯಕ (Forward integration) ಮತ್ತು ಹಿತ್ತಲು (backward integration) ಏಕೀಕರಣದಲ್ಲಿ ಕೋಳಿ ಸಾಕಣೆ, ಸಂಸ್ಕರಣೆ, ವಿತರಣೆ ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ಉತ್ಪಾದನಾ ಪ್ರಕ್ರಿಯೆಯ ಹಲವಾರು ಹಂತಗಳನ್ನು ಸಂಯೋಜಿಸುವುದನ್ನು ಒಳಗೊಂಡಿದೆ. ನಾಯಕ ಏಕೀಕರಣದಲ್ಲಿ ಉತ್ಪನ್ನಗಳನ್ನು ವರ್ಧಿಸುವುದು ಮತ್ತು ಗ್ರಾಹಕರಿಗೆ ಹತ್ತಿರವಾಗಲು ವಿತರಣಾ ಮಾರ್ಗಗಳಾದ  ಉತ್ಪನ್ನದ ಗುರುತು ಮತ್ತು ಚಿಲ್ಲರೆ ಅಂಗಡಿಗಳ ಜೊತೆ ಸಂಭಂದಗಳನ್ನೂ ನಿರ್ವಹಿಸುವುದು. 

ಹಿತ್ತಲು ಏಕೀಕರಣದಲ್ಲಿ ಉತ್ಪಾದನೆಯ ಪ್ರಾರಂಭದ ಹಂತಗಳಾದ ಕಚ್ಚಾ ವಸ್ತುಗಳ ಸರಬರಾಜು (ಕೋಳಿ ಆಹಾರ ತಯಾರಿಸಲು ಬೇಕಾದ ಸಾಮಗ್ರಿಗಳು, ಉಪಕರಣಗಳು, ಉತ್ತಮ ತಳಿಗಳು) ಮೇಲೆ ನಿಯಂತ್ರಣ ಪಡೆಯುವುದು. ಈ ರೀತಿಯಾಗಿ ಎರಡೂ ಏಕೀಕರಣದಲ್ಲಿ ನಿಯಂತ್ರಣ ಸಾಧಿಸಿದಲ್ಲಿ ಉತ್ಪಾದನಾ ವೆಚ್ಚಗಳನ್ನು ತಗ್ಗಿಸಲು ಮತ್ತು ಗುಣಮಟ್ಟದ ಮೇಲಿನ ಹಿಡಿತವನ್ನು ಸಾಧಿಸಲು ಉಪಯೋಗವಾಗುತ್ತದೆ. ಆದ್ದರಿಂದ ಕುಕ್ಕುಟ ಉದ್ಯಮದ ಆರ್ಥಿಕ ಬೆಳವಣಿಗೆಗೆ ಏಕೀಕರಣ ವಿಧಾನಗಳು ಅತ್ಯಗತ್ಯ. ಬಹುಮುಖ್ಯವಾಗಿ ಏಕೀಕರಣವು ಹೂಡಿಕೆ, ಉತ್ಪನ್ನ ಅಭಿವೃದ್ಧಿ, ನೂತನ  ತಂತ್ರಜ್ಞಾನ ಹಾಗು ಉದ್ಯೋಗ ಸೃಷ್ಟಿ ಅಂತಹ ಮುಖ್ಯ ಅಂಶಗಳ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುತ್ತದೆ. ಒಟ್ಟಿನಲ್ಲಿ ಈ ಎರಡೂ ರೀತಿಯ ಏಕೀಕರಣಗಳು ಕುಕ್ಕುಟ ಉದ್ಯಮದ ಆರ್ಥಿಕ ಬೆಳವಣಿಗೆಯ ದಿಕ್ಕನ್ನು ಬದಲಿಸುವ ಹಾಗು ದೀರ್ಘಕಾಲಿಕ ಸುಸ್ಥಿರತೆ ತರಲು ಸಹಾಯ ಮಾಡುತ್ತವೆ.
ಲೇಖನ: ಡಾ.ಆರ್.ನರಹರಿ, ಬಿದರೆಕೆರೆ, ಹಿರಿಯೂರು ತಾಲೂಕು, ಚಿತ್ರದುರ್ಗ.
ಲೇಖನ ಮುಂದುವರೆಯಲಿದೆ

Share This Article
error: Content is protected !!
";