ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರೇಟರ್ ಬೆಂಗಳೂರು ಸಭೆಯ ಬಳಿಕ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿದರು.
ಚರ್ಚಿತ ವಿಷಯಗಳು ಹೀಗಿವೆ:
ಸೆಪ್ಟೆಂಬರ್ 15ರ ಒಳಗಾಗಿ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣಗೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ.
ಬೆಂಗಳೂರಿನ ಫುಟ್‌ಪಾತ್ ಅಂಗಡಿಗಳನ್ನು ತೆರವು ಮಾಡಲಾಗುವುದು. 27,665 ಬೀದಿ ಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ಅವರಿಗೆ ತಳ್ಳುವ ವಾಹನ ನೀಡಲು ತೀರ್ಮಾನ.
ಕಾನೂನು ಬಾಹಿರವಾಗಿ ಹಾಕಿರುವ ಆಪ್ಟಿಕಲ್ ಕೇಬಲ್‌ಗಳನ್ನು ಕತ್ತರಿಸಲು ಸೂಚನೆ. ರಸ್ತೆ ಅಗಲೀಕರಣಕ್ಕೆ ಶಾಸಕರು ಶಿಫಾರಸ್ಸು ಮಾಡಿದರೆ ಟಿಡಿಆರ್ ನೀಡಲು ಸಿದ್ಧ. ಮಳೆಯಿಂದ ಮನೆಯೊಳಗೆ ನೀರು ನುಗ್ಗಿರುವವರಿಗೆ 10 ಸಾವಿರ ರೂ. ಪರಿಹಾರ. ಕೆಂಪೇಗೌಡ ಬಡಾವಣೆಯ ಬಿಡಿಎ ಜಾಗದಲ್ಲಿ ಸ್ಕೈಡೆಕ್ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಯಿತು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಮಳೆ ಪೀಡಿತ ಪ್ರದೇಶಗಳ ಶಾಸಕರ ಜತೆ ಚರ್ಚೆ ಮಾಡಿ ತುರ್ತು ಕೆಲಸ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಇದಕ್ಕೆ ಅಗತ್ಯವಿರುವ ಬಜೆಟ್‌ನ್ನು ಸರ್ಕಾರದಿಂದ ಒದಗಿಸಲಾಗುತ್ತದೆ.
ಟ್ಯಾಂಕರ್ ನೀರಿನ ವಿಚಾರವಾಗಿ ದೂರು ಬಂದಿರುವ ಪ್ರದೇಶಗಳಲ್ಲಿ ಆಯಾ ಋತುವಿಗೆ ತಕ್ಕಂತೆ ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನ.
ರಾಜಕಾಲುವೆ ಅಕ್ಕಪಕ್ಕದ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಚರ್ಚಿಸಿದ್ದು, ಈಗಾಗಲೇ 300 ಕಿ.ಮೀ. ಉದ್ದದ ರಸ್ತೆ ಗುರುತಿಸಿದ್ದು, ಶಾಸಕರು ಕೂಡ ಸುಮಾರು 300 ಕಿ.ಮೀ ಉದ್ದದಷ್ಟು ರಸ್ತೆ ನಿರ್ಮಾಣಕ್ಕೆ ಶಿಫಾರಸ್ಸು ನೀಡಬಹುದು ಎಂದು ಶಿವಕುಮಾರ್ ಹೇಳಿದರು.
ಇನ್ನು ಮುಂದೆ ತಗ್ಗು ಪ್ರದೇಶಗಳಲ್ಲಿ ಬೇಸ್‌ಮೆಂಟ್ ಪಾರ್ಕಿಂಗ್‌ಗೆ ಅವಕಾಶ ಇರುವುದಿಲ್ಲ.
ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಒಳಚರಂಡಿ ಹಾಗೂ ನೀರುಗಾಲುವೆಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂದು ಕೆಲವು ಶಾಸಕರು ಹೇಳಿದ್ದಾರೆ. ಈ ರೀತಿ ಎಳೆದಿರುವ ಕೇಬಲ್‌ಗಳನ್ನು ಕತ್ತರಿಸಿ ಹಾಕಲು ಸೂಚನೆ. ಚರಂಡಿಗಳಲ್ಲಿ ಹೂಳೆತ್ತಲು ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.
ನಗರದ 25 ಲಕ್ಷ ಆಸ್ತಿಗಳನ್ನು ಈ ಖಾತಾ ಮಾಡಲು ಹೇಳಿದ್ದು, ಎಲ್ಲಾ ಆಸ್ತಿಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡುತ್ತಿದ್ದು, ಈಗಾಗಲೇ 5 ಲಕ್ಷ ಆಸ್ತಿಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಇದನ್ನು ದೊಡ್ಡ ಅಭಿಯಾನವಾಗಿ ಮಾಡುತ್ತಿದ್ದೇವೆ. ಆ ಮೂಲಕ ತೆರಿಗೆ ಹಾಗೂ ಆಸ್ತಿ ದಾಖಲಾತಿಯಲ್ಲಿ ಪಾರದರ್ಶಕತೆ ತರಲಾಗುತ್ತಿದೆ. ಇದಕ್ಕಾಗಿ ನ್ಯಾಷನಲ್ ಇ – ಗವರ್ನೆನ್ಸ್ ಅವಾರ್ಡ್ ಕೂಡ ಸಿಕ್ಕಿದೆ ಎಂದು ಅವರು ತಿಳಿಸಿದರು.
ರಸ್ತೆಗಳಲ್ಲಿ ಹಳೆ ವಾಹನಗಳನ್ನು ನಿಲ್ಲಿಸಿ ಹೋಗುತ್ತಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆಯಿಂದ 100 ಎಕರೆ ಜಾಗ ಒದಗಿಸಿ, ಆ ಎಲ್ಲಾ ವಾಹನಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಸಂಚಾರಿ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಪಾಲಿಕೆ ಕಾನೂನಿನ ಪ್ರಕಾರ 21 ದಿನಗಳ ಕಾಲ ರಸ್ತೆಯಲ್ಲಿ ನಿಲ್ಲಿಸಿರುವ ವಾಹನ ತೆಗೆಯದಿದ್ದರೆ ಅದನ್ನು ಅನಾಥ ವಾಹನ ಎಂದು ಪರಿಗಣಿಸಿ ಹರಾಜು ಹಾಕಲು ಅವಕಾಶವಿದೆ. ಇನ್ನು ಪೊಲೀಸರು ನಿಗದಿ ಮಾಡುವ ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ.
ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ ಸರ್ವೀಸ್ ರಸ್ತೆಗಳನ್ನು ಮುಖ್ಯ ರಸ್ತೆ ಜತೆ ವಿಲೀನ ಮಾಡಿ ಸುಗಮವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಡಿಸಿಎಂ ಶಿವಕುಮಾರ್ ಹೇಳಿದರು.