ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಪ್ಪು ಮೆಲೋಡಿಸ್ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಕರ್ನಾಟಕ ರತ್ನ ಡಾ ಪುನೀತ್ ರಾಜಕುಮಾರ್ (ಅಪ್ಪು) ರವರ ಪುಣ್ಯ ಸ್ಮರಣೆ ಹಾಗೂ ಕೊಡುಗೆಗಳು ಕಾರ್ಯಕ್ರಮ ಜರುಗಿತು.
ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಮಹದೇವಸ್ವಾಮಿ ಉದ್ಘಾಟಿಸಿ ಮಾತನಾಡಿ ಅಪೂರ್ವವರು ಆದರ್ಶ ವ್ಯಕ್ತಿ. ಅವರ ಸೇವೆ ಸದಾ ಕಾಲ ಮಾದರಿಯಾದದ್ದು. ಚಲನಚಿತ್ರ, ಸಮಾಜ ಸೇವೆ ,ಅನಾಥ ಮಕ್ಕಳ ರಕ್ಷಣೆ , ದಾನಿಯಾಗಿ ಸೇವೆ ಸಲ್ಲಿಸಿ ಮರೆಯಾದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿರ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಮಾತನಾಡಿ ಪುನೀತ್ ರಾಜಕುಮಾರ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಅಪಾರ ಸೇವೆ ಸಲ್ಲಿಸಿ ಕೋಟ್ಯಾಂತರ ಜನರ ಭಾವನೆಗಳಲ್ಲಿ ಸದಾ ಹಸಿರಾಗಿ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿದ್ದಾರೆ. ಸಮಾಜಕ್ಕಾಗಿ ದುಡಿದ ವ್ಯಕ್ತಿಗಳಿಗೆ ಸಾವಿಲ್ಲ ಎಂಬ ಮಾತು ಪುನೀತ್ ರಾಜಕುಮಾರ್ ಅವರಿಂದ ನಿಜವಾಗಿದೆ. ಕನ್ನಡ ಚಲನಚಿತ್ರ, ಸಮಾಜ ಸೇವೆ ಹಾಗೂ ಯಾರಿಗೂ ತಿಳಿಯದ ಹಾಗೆ ನೂರಾರು ಸೇವೆ ಸಲ್ಲಿಸಿದ ಅಪ್ಪು ಹಲವರ ಸಮಸ್ಯೆಗಳಿಗೆ ಸ್ಪಂದಿಸಿ ಸಹಾಯ ನೀಡಿದ ಮಹಾನ್ ಆತ್ಮ ಎಂದರು.
ಕನ್ನಡ ಹೋರಾಟಗಾರ ಶ್ರೀನಿವಾಸಗೌಡ ಅಪ್ಪು ನಗರದವರು ಎನ್ನುವುದು ನಮಗೆ ಗೌರವ. ಚಾಮರಾಜನಗರದ ಮೇಲೆ ಅಪಾರ ಪ್ರೀತಿ ಇತ್ತು. ಅಪ್ಪು ಸ್ಮರಣೆ ಮೂಲಕ ಅವರ ಸೇವಾಗುಣ, ನಮಗೆ ಆದರ್ಶವಾಗಲಿ ಎಂದರು.
ಅಪ್ಪು ಮೆಲೋಡಿಸ್ ಸಂಸ್ಥೆಯ ರಂಗಸ್ವಾಮಿ, ನಾಗರಾಜು, ಮಹಮದ್ ಗೌಸ್, ಚಾ ವೆಂ ರಾಜಗೋಪಾಲ್, ಪಣ್ಯದ ಹುಂಡಿ ರಾಜು, ಗೌರಿಶಂಕರ್, ಮಹೇಶ್ ಇದ್ದರು.

