ಚಂದ್ರವಳ್ಳಿ ನ್ಯೂಸ್, ತುಮಕೂರು:
ರಾಜ್ಯ ಒಕ್ಕಲಿಗರ ಸಂಘ, ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಮತ್ತು ನಾಡಪ್ರಭು ಕೆಂಪೇಗೌಡ ವೇದಿಕೆ ವತಿಯಿಂದ ತುಮಕೂರಿನಲ್ಲಿ ಆಯೋಜಿಸಿದ್ದ 15ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸಂಸದ ಡಾ.ಸಿ.ಎನ್ ಮಂಜುನಾಥ್ ಅವರು ಭಾಗಿವಹಿಸಿದ್ದರು.
ತುಮಕೂರು ಜಿಲ್ಲೆಯಾದ್ಯಂತ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೀರ್ತಿ ಪಡೆದ ಸಾಧಕರಿಗೆ ಪುರಸ್ಕಾರ ನೀಡುವ ಸಂಘದ ಈ ಪ್ರಯತ್ನ ಶ್ಲಾಘನೀಯ ಎಂದು ಸಂಸದರು ತಿಳಿಸಿದರು.
“ಈಗಿನ ಡಿಜಿಟಲ್ ಕ್ರಾಂತಿಯ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಶ್ರಮ ಹಾಗೂ ಕೌಶಲ್ಯಗಳನ್ನು ಸರಿಯಾದ ಮಾರ್ಗದಲ್ಲಿ ಉಪಯೋಗಿಸಿ ತಮ್ಮ ತಂದೆ-ತಾಯಿಗಳಿಗೆ ಮಾತ್ರವಲ್ಲ, ಇಡೀ ರಾಜ್ಯ ಮತ್ತು ದೇಶಕ್ಕೂ ಹೆಮ್ಮೆ ತರುವ ಸಾಧನೆ ಮಾಡಬೇಕು ಎಂದು ಡಾ.ಮಂಜುನಾಥ್ ಅವರು ತಿಳಿ ಹೇಳಿದರು.
ಈ ವೇಳೆ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಡಾ. ನಿಶ್ಚಲಾನಂದನಾಥ ಮಹಾಸ್ವಾಮೀಜಿ, ಶ್ರೀ ಮಂಗಳನಾಥ ಸ್ವಾಮೀಜಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ತುಮಕೂರು ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್.ಪಿ. ಮುದ್ದಹನಮೇಗೌಡ, ಶಾಸಕ ಬಿ. ಸುರೇಶ್ ಗೌಡ, ಮಾಜಿ ಶಾಸಕ ಹೆಚ್. ನಿಂಗಪ್ಪ, ಮುಖಂಡರಾದ ಹನುಮಂತರಾಯಪ್ಪ, ಮುರುಳೀಧರ ಹಾಲಪ್ಪ ಸೇರಿದಂತೆ ಸಮುದಾಯದ ಗಣ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

