ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಒಳಮೀಸಲಾತಿ ಗಣತಿಯಲ್ಲಿ ಪರಿಶಿಷ್ಟಜಾತಿಯ ಹೊಲೆಯ ಸಂಬಂದಿತ ಉಪ-ಜಾತಿಗಳನ್ನು “ಛಲವಾದಿ” ಎಂದು ನಮೂದಿಸುವಂತೆ ಛಲವಾದಿ ಮಹಾಸಭಾ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಗುರುರಾಜಪ್ಪ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು ಸರ್ವೋಚ್ಚ ನ್ಯಾಯಾಲಯವು 2024ರ ಆಗಸ್ಟ್ 1 ರಲ್ಲಿ ಆಯಾ ರಾಜ್ಯಗಳಿಗೆ ದತ್ತಾಂಶದ ಮಾನದಂಡದ ಆಧಾರದ ಮೇಲೆ ಒಳಮೀಸಲು ಜಾರಿ ಮಾಡುವ ಅಧಿಕಾರವನ್ನು ನೀಡಿ, ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ.
ಸಮಾಜದಲ್ಲಿ ರಾಜಕೀಯವಾಗಿ,ಆರ್ಥಿಕವಾಗಿ , ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ನಮ್ಮ ಸ್ಥಾನ-ಮಾನ ಯಾವ ಹಂತದಲ್ಲಿದೆ ಎಂದು ತಿಳಿಯಲು ಈ ಸಮೀಕ್ಷೆ ಬಹುಮುಖ್ಯವಾಗುತ್ತದೆ, ಇದೆ ತಿಂಗಳ ಮೇ 5 ರಿಂದ 21ರವರೆಗೆ ಮೂರು ಹಂತಗಳಲ್ಲಿ ನಡೆಯುವ ಜಾತಿಗಣತಿ ಅವಕಾಶವನ್ನು ಬಳಸಿಕೊಂಡು ಅಭಿವೃದ್ಧಿಯಾಗಲು ದಾರಿ ಸುಗಮಗೊಳಿಸಿಕೊಳ್ಳಬೇಕಾಗಿದೆ.
ಆದ್ದರಿಂದ “ಛಲವಾದಿ” ಬಂಧುಗಳು ದಿನಾಂಕ:05-05-2025ರಂದು ಪ್ರಾರಂಭವಾಗುವ ಜಾತಿಗಣತಿಯ ಸಮಯದಲ್ಲಿ ಪರಿಶಿಷ್ಟಜಾತಿಯ ಹೊಲೆಯ, ಬಲಗೈ, ಛಲವಾದಿ ಸಂಬಂದಿತ 37 ಉಪ-ಜಾತಿಗಳಲ್ಲಿ ಪ್ರಮುಖವಾದ “ಛಲವಾದಿ” ಎಂದು ಬರೆಸುವುದರ ಮೂಲಕ ಗಣತಿದಾರ ಜೊತೆಯಲ್ಲಿಯೇ ಇದ್ದು, “ಛಲವಾದಿ” ಎಂದು ಬರೆಸುವ ಮೂಲಕ ನಮ್ಮ ಛಲವಾದಿ ಸಮುದಾಯದವರಿಗೆ ಮತ್ತು ಗಣತಿದಾರರಿಗೆ ಸಹಕರಿಸಲು ವಿನಂತಿ ಮಾಡುತ್ತೇನೆ ಎಂದು ತಿಳಿಸಿದರು.