ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಡಿನ ರೈತರ ನ್ಯಾಯಯುತ, ಪೂರ್ವಜರ ಆಸ್ತಿ ಹಕ್ಕುಗಳನ್ನು ಕಾಂಗ್ರೆಸ್ ಪಕ್ಷ ಕಸಿದುಕೊಳ್ಳುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ಆತಂಕ ವ್ಯಕ್ತ ಪಡಿಸಿದೆ.
ತಮ್ಮ ರಾಜಕೀಯ ದುರಾಸೆಗೆ ರಾಜ್ಯವನ್ನೇ ವಕ್ಫ್ ಗೆ ಮಾರಲು ಕಾಂಗ್ರೆಸ್ ಮುಂದಾಗಿದೆ. ರಾಜ್ಯದ ವಕ್ಫ್ ವ್ಯವಹಾರಗಳ ಸಚಿವ ಜಮೀರ್ ಅಹಮ್ಮದ್ ಖಾನ್ ವಿವಿಧ ಉದ್ದೇಶಿತ ಭೂಮಿಯನ್ನು ವಕ್ಫ್ ಗೆ ನೋಂದಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದರೆ.
ಅತ್ತ ರೈತರ ಜಮೀನಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿದೆ ಅಂತ ಸರ್ಕಾರದ ಇನ್ನೋರ್ವ ಸಚಿವರು ಟ್ವೀಟ್ ಮೂಲಕ ಸ್ಪಷ್ಟಪಡಿಸುತ್ತಿದ್ದಾರೆ. 4-5 ತಲೆಮಾರಿನಿಂದ ವ್ಯವಸಾಯ ಮಾಡುತ್ತಾ ಬಂದಿದ್ದ ಸಾವಿರಾರು ಎಕರೆ ಪ್ರದೇಶವನ್ನು ವಕ್ಫ್ ತನ್ನ ಆಸ್ತಿ ಎಂದು ಹೇಳಿ ನೋಟಿಸ್ ನೀಡಿದೆ ಎಂದು ಬಿಜೆಪಿ ಆತಂಕ ವ್ಯಕ್ತ ಪಡಿಸಿದೆ.
ವಿಜಯಪುರ ಜಿಲ್ಲೆಯೊಂದರಲ್ಲೇ 15 ಸಾವಿರ ಎಕರೆಗಳಿಗೂ ಅಧಿಕ ಭೂಮಿ ಅತಿಕ್ರಮಣವಾಗಿದ್ದು, ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವರ ಒತ್ತಡದ ಮೇರೆಗೆ ಎಷ್ಟೋ ಕುಟುಂಬಗಳಿಗೆ ತರಾತುರಿಯಲ್ಲಿ ನೋಟಿಸ್ ನೀಡಲಾಗಿದೆ.
2013-14ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಮುನ್ನ ದೆಹಲಿಯ 100 ಪ್ರಮುಖ ಆಸ್ತಿಗಳನ್ನು ವಕ್ಫ್ ಬೋರ್ಡ್‌ಗೆ ನೀಡಿದಂತೆಯೇ ಇಂದು ರಾಜ್ಯದಲ್ಲಿ ಮಾಡುತ್ತಿದೆ. ವಕ್ಫ್ ತಿದ್ದುಪಡಿ ಕಾಯಿದೆ ಇಂದಿನ ತುರ್ತು ಅಗತ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ –2024 ಮಸೂದೆ ಜಾರಿಗೆ ಬರುವ ಮೊದಲು ವಕ್ಫ್ ಹೆಸರಿನಲ್ಲಿ ನಾಡಿನ ರೈತರ, ಜನಸಾಮಾನ್ಯರ ಆಸ್ತಿ ಕಬಳಿಸುವ ಹುನ್ನಾರವನ್ನು ಕಾಂಗ್ರೆಸ್ ನಡೆಸಿದಂತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಸರ್ಕಾರ ಈ ನೋಟಿಸ್ ವಾಪಸ್ ಪಡೆಯದಿದ್ದರೆ ಈ ನಿರ್ಧಾರದ ವಿರುದ್ದ ರಾಜ್ಯದಾದ್ಯಂತ ಬಿಜೆಪಿ ಹೋರಾಟ ಮಾಡುವುದು ನಿಶ್ಚಿತ. ರಾಜ್ಯದ ಅನ್ನದಾತರ ಪರ ಬಿಜೆಪಿ ಎಂದಿಗೂ ಜೊತೆಯಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದೆ.
ಇದೇ ವಿಷಯ ಕುರಿತು ಮಾಜಿ ಸಚಿವ ಬಸವನಗೌಡ ಯತ್ನಾಳ್ ಟ್ವೀಟ್ ಮಾಡಿ ವಕ್ಫ್ ನ ನಿರಂಕುಶ ನಡೆಯ ಬಗ್ಗೆ ಪ್ರತಿಭಟನೆಯ ಜೊತೆ ರೈತರ ಜೊತೆ ಕೈಜೋಡಿಸಲು ನಮ್ಮ ಕಡೆಯಿಂದ ಕಾನೂನು ಹೋರಾಟ ಮಾಡಲು ನಿಶ್ಚಯಿಸಿದ್ದೇನೆ ಎಂದು ಅವರು ಗುಡುಗಿದ್ದಾರೆ.
ವಕ್ಫ್ ಇಲಾಖೆಯಿಂದ ನೋಟಿಸು ಪಡೆದ ರೈತರು, ನೋಟಿಸಿನ ಕಾಪಿ ಹಾಗೂ ಸಂಬಂಧಿತ ಕಾಗದ-ಪತ್ರಗಳನ್ನು ಟ್ವಿಟ್ಟರ್ ಮೂಲಕ ನೀಡಿ ಅಥವಾ ವಿಜಯಪುರದ ನಮ್ಮ ಶಾಸಕರ ಕಚೇರಿಗೆ ನೀಡಬೇಕಾಗಿ ಅವರು ಮನವಿ ಮಾಡಿದ್ದಾರೆ.
ನಮ್ಮ ಕಾನೂನು ತಜ್ಞರು ಹಾಗೂ ವಕೀಲರ ತಂಡ ಲಭ್ಯವಿರುವ ಮಾಹಿತಿ ಹಾಗೂ ಕಾಗದ-ಪತ್ರಗಳನ್ನು ಕೂಲಂಕುಷವಾಗಿ ಪರಾಮರ್ಶಿಸಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲು ಸಜ್ಜಾಗಿರುತ್ತಾರೆ.
ವಿಜಯಪುರದ ರೈತ ಬಾಂಧವರಿಗೆ ಈ ಮಾಹಿತಿಯನ್ನು ತಪ್ಪದೆ ತಿಳಿಸುವುದು, ಹಾಗೆಯೇ ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡು ಇದ್ದ ಕುಟುಂಬಗಳಿಗೆ/ ಮಾಲೀಕರಿಗೆ ವಕ್ಫ್ ನಿಂದ ನೋಟಿಸು ಬಂದರೂ ಅದರ ಕಾಪಿಯನ್ನು ಕಳಿಸಿಕೊಡುವುದು ಎಂದು ಯತ್ನಾಳ್ ಮನವಿ ಮಾಡಿದ್ದಾರೆ.