ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾನ್ಯ ಗೌರವಾನ್ವಿತ ಮಲ್ಲಿಕಾರ್ಜುನ ಖರ್ಗೆ ಅವರೇ, ಬಿಜೆಪಿ ಹಾಗೂ ಆರ್.ಎಸ್.ಎಸ್ ಸಂಘಟನೆಗಳ ಕುರಿತು ನೀವು ವಾರ್ನಿಂಗ್ ನೀಡಿರುವ ಪರಿ ಗಮನಿಸಿದರೆ ಸರ್ವಾಧಿಕಾರಿ ಸಂಸ್ಕೃತಿಯ ಭಾಗವೆಂಬಂತೆ ಭಾಸವಾಗುತ್ತಿದೆ. ನಿಮ್ಮ ಮಾತಿನ ದಾಟಿ, ನಿಮ್ಮ ಹಿರಿತನ ಹಾಗೂ ಅನುಭವದ ಘನತೆಯನ್ನು ಕುಗ್ಗಿಸಿದೆ.
ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ರೀತಿಯಲ್ಲಿ ಹೇಳಿಕೆ ನೀಡಿರುವ ರೀತಿ ಅತ್ಯಂತ ವಿಪರ್ಯಾಸವೇ ಸರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಚ್ಚರಿ ವ್ಯಕ್ತಪಡಿಸಿ ಖರ್ಗೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಷ್ಪ್ರಭಕ್ತರ ಸಂಘಟನೆ, ಭಾರತೀಯ ಜನತಾ ಪಾರ್ಟಿಯು ರಾಷ್ಟ್ರ ಕಟ್ಟುವುದಕ್ಕಾಗಿ ಸಂಕಲ್ಪಿಸಿ ಜನ್ಮತಾಳಿದ ರಾಜಕೀಯ ಪಕ್ಷ, ಕಾಂಗ್ರೆಸ್ ನಂತೆ ವ್ಯಕ್ತಿ ಪೂಜೆ, ಕುಟುಂಬ ಪೂಜೆಗೆ ತನ್ನನ್ನು ತೊಡಗಿಸಿಕೊಂಡ ಪಕ್ಷವಲ್ಲ, ಭಟ್ಟಂಗಿತನ ನಿಮ್ಮ ಪಕ್ಷದ ಧ್ಯೇಯಘೋಷ, ಎಂದೂ ರಾಷ್ಟ್ರದ ಬಗ್ಗೆ ಚಿಂತನೆ ನಡೆಸದೇ, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯದೇ ಬಡವರನ್ನು ಬಡವರನ್ನಾಗಿಯೇ ಇರಿಸಿದ ಪಾಪದ ಫಲ ಇಂದಿನ ನಿಮ್ಮ ಕಾಂಗ್ರೆಸ್ ನ ಹೀನಾಯ ಸ್ಥಿತಿಗೆ ಕಾರಣವಾಗಿದೆ.
ಇಷ್ಟಾಗಿಯೂ ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದರ ಬದಲು ಬಿಜೆಪಿ, ಆರ್.ಎಸ್.ಎಸ್ ಗೆ ‘ನಾವು ತಿರುಗಿ ಬಿದ್ದರೆ ನಿಮ್ಮ ಅಡ್ರೆಸ್ಸೇ ಸಿಗುವುದಿಲ್ಲ‘ ಎಂಬ ನಿಮ್ಮ ಹೇಳಿಕೆ ‘ನವಿಲು ಕುಣಿಯುವುದನ್ನು ನೋಡಿ ಕೆಂಬೂತ ಪುಕ್ಕ ತೆರೆಯಿತು‘ ಎಂಬಂತಾಗಿದೆ ಎಂದು ವಿಜಯೇಂದ್ರ ತಿರುಗೇಟು ನೀಡಿದರು.
ನಿಮ್ಮ ಪಕ್ಷದ ಒಬ್ಬರು, ಬಿಜೆಪಿ-ಆರ್.ಎಸ್.ಎಸ್ ಬಾಲ ಬಿಚ್ಚಲು ಬಿಡುವುದಿಲ್ಲ ಎಂದು ಆರ್ಭಟಿಸಿದರೆ, ಮತ್ತೊಬ್ಬರು ರಾಜ್ಯದ ಯಾವುದೇ ಭಾಗದಲ್ಲಿ ಬಿಜೆಪಿ ತನ್ನ ಚಟುವಟಿಕೆ ನಡೆಸಲು ಎಲ್ಲಿಯೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡುತ್ತಾರೆ. ಕರ್ನಾಟಕದಲ್ಲಿ ಪಾಳೆಗಾರಿಕೆ ರಾಜಕಾರಣಕ್ಕೆ, ಸರ್ವಾಧಿಕಾರಿ ಆಡಳಿತಕ್ಕೆ ಅವಕಾಶ ಇಲ್ಲ ಎಂಬುದರ ಇತಿಹಾಸ ನಿಮಗೆ ಹಾಗೂ ನಿಮ್ಮ ಪಕ್ಷದವರಿಗೆ ನೆನಪಿರಲಿ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.