ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಂಗಳದಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವರ್ಕ್ ಅರ್ಡರ್ ಇಲ್ಲದೇ ಒಂದು ಕೋಟಿ ವೆಚ್ಚದ ಸೋಲಾರ್ ದೀಪ ಅಳವಡಿಸಿದ್ದು ಸಂಪೂರ್ಣ ಕಳಪೆ ಲೈಟ್ ಗಳಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಬಾರದು ಮತ್ತು ಸೂಕ್ತ ತನಿಖೆಗೆ ಕ್ರಮ ವಹಿಸಿಬೇಕು ಎಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಾಘವೇಂದ್ರ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಳೆದ ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ವೈ.ಎ.ನಾರಾಯಣಸ್ವಾಮಿ ಅವರು ಪರಿಶಿಷ್ಟ ಜಾತಿ ಕಾಲೋನಿಗಳ ಮೂಲಭೂತ ಸೌಕರ್ಯಕ್ಕೆ ಒಂದು ಕೋಟಿ ನೀಡಿದ್ದು ಆ ಅನುದಾನ ಸಂಪೂರ್ಣ ದುರ್ಬಳಕೆ ಆಗಿದೆ ಎಂದು ಆರೋಪಿದರು.
ಇಂಗಳದಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆರು ಹಳ್ಳಿಗಳ ಎಸ್ಇಪಿ ಹಣ ನೀಡಿದ್ದರು. ಆ ಹಣ ಸಮಾಜ ಕಲ್ಯಾಣ ಇಲಾಖೆಯಿಂದ ಚಿತ್ರದುರ್ಗ ಕಾರ್ಯಪಾಲಕ ಪಂಚಾಯತ್ ರಾಜ್ ವಿಭಾಗದಿಂದ ೧ ಕೋಟಿ ವೆಚ್ಚದ ಸೋಲರ್ ಲೈಟ್ ಅಳವಡಿಕೆಗೆ ತುಂಡು ಗುತ್ತಿಗೆ ಕರೆದಿದ್ದರು. ಪ್ರತಿ ೫ ಲಕ್ಷ ಮೀರದಂತೆ ತುಂಡು ಗುತ್ತಿಗೆ ನೀಡಿದ್ದಾರೆ.
ಇದರ ಭಾಗವಾಗಿ ಅನುಮೋದನೆಗಾಗಿ ಪಂಚಾತ್ ರಾಜ್ ಇಲಾಖೆ ಅವರು ಶಿವಮೊಗ್ಗ ಮುಖ್ಯ ಕಚೇರಿಗೆ ಕಳಸಿದ್ದರು. ಆದರೆ ಕಾಮಗಾರಿ ಅನುಮೋದನೆ ಪ್ರತಿ ಮತ್ತು ಸ್ಥಳ ಪರಿಶೀಲನೆ ನಡೆಸುವುದಕ್ಕಿಂತ ಮೊದಲೇ ರಾತ್ರೋ ರಾತ್ರಿ ಯಾವುದೇ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡದೇ ಕಳಪೆ ಮಟ್ಟದ ಸೋಲರ್ ಲೈಟ್ ಹಾಕಿದ್ದಾರೆ ಎಂದು ಗುತ್ತಿಗೆದಾರನ ವಿರುದ್ದ ಗುಡುಗಿದರು.
ಸೋಲರ್ ಲೈಟ್ ಮೇಲೆ ಯಾವುದೇ ಕಂಪನಿಯ ಹೆಸರಿಲ್ಲ, ಐಎಸ್ಒ ಮಾರ್ಕ್ ಇಲ್ಲ, ಗುಣಮಟ್ಟ ಸಹ ಇಲ್ಲ, ದಲಿತ ಕಾಲೋನಿ ಇಲ್ಲದ ಕಡೆ ಸಹ ಸೋಲರ್ ಲೈಟ್ ಅಳವಡಿಸಿದ್ದು ಹಣ ದುರುಪಯೋಗವಾಗಿದೆ. ಸೋಲರ್ ಲೈಟ್ ಗಳು ನೋಡಿದರೆ ಇದು ಹಣ ಲೂಟಿ ಮಾಡುವ ಸ್ಕೀಂ ನಂತೆ ಕಾಣುತ್ತಿದ್ದು ಎಲ್ಲಾ ಕಡೆಗಳಲ್ಲಿ ಹಾಕಿರುವ ಸೋಲರ್ ಲೈಟ್ ಅನುದಾನದ ಮೊತ್ತವನ್ನು ರದ್ದುಗೊಳಿಸಿ ಹೊಸ ಟೆಂಡರ್ ಕರೆಯಬೇಕು. ಈಗ ಅನುಮೋದನೆ ನೀಡುತ್ತಿರುವ ಗುತ್ತಿಗೆದಾರನ ಲೈಸನ್ಸ್ ರದ್ದು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸಾಮಾಜಿಕ ಹೋರಟಗಾರ ನಾಗಭೂಷಣ್ ಮಾತನಾಡಿ ಇಂಗಳದಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ. ಕಾಮಗಾರಿ ಮಾಡಿರುವ ಕಡೆಗಳಲ್ಲಿ ಬಣ್ಣ ಮತ್ತು ಸುಣ್ಣ ಬಳಿದು ಮನಸ್ಸಿಗೆ ಬಂದಂತೆ ಹಣ ಬರೆದುಕೊಳ್ಳುತ್ತಿದ್ದು ಅಧಿಕಾರಿಗಳು ಯಾವುದೇ ಪರಿಶೀಲನೆ ಮಾಡದೇ ಅನುದಾನ ಒದಗಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ರಾತ್ರೋ ರಾತ್ರಿ ಜೆಸಿಬಿ ಮೂಲಕ ಕಾಮಗಾರಿ ಮಾಡಿ ಬಿಲ್ ಬರೆದುಕೊಳ್ಳುತ್ತಿದ್ದು ಜೊತೆ ಜಿಪಿಎಸ್ ಫೋಟೋ ಗೆ ಮಾತ್ರ ಜನರನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ನೇರವಾಗಿ ಅಧಿಕಾರಿಗಳ ಮೇಲೆ ಆರೋಪಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮಹೇಶ್, ಮುಖಂಡರಾದ ಸಂತೋಷ್, ಬಾಬು, ಮಹಲಿಂಗಪ್ಪ ಇದ್ದರು.