ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು-65
ಜೋಗಿಮಟ್ಟಿಯಿಂದ ಪೂರ್ವಕ್ಕೆ,ಕುರುಮರಡಿಕೆರೆ ಅರಣ್ಯ ಪ್ರದೇಶದ ಗುಡ್ಡಗಾಡುಗಳಲ್ಲಿ, ಜೀವವೈವಿಧ್ಯಮಯದ ಮತ್ತೊಂದು ಪರಿಸರ ತಾಣವಿದೆ. ಇಂಗಳದಾಳು ಕಣಿವೆಯ ಮೂಲಕ, ವಾಹನಗಳಲ್ಲಿ ಸಂಚರಿಸಿ, ಜೋಗಿಮಟ್ಟಿ ದಟ್ಟಾರಣ್ಯಧಾಮಕ್ಕೆ ಹಾಸುಹೊಕ್ಕಾಗ, ಹಚ್ಚ ಹಸಿರಿನ ಗುಡ್ಡಗಾಡುಗಳ ತಪ್ಪಲಿಂದ, ಚಾರಣಕ್ಕಿಳಿದು, ಕಾಡನ್ನು ಪ್ರವೇಶಿಸಿ ನಿರ್ಜನ ಸೀಳಾದಿಗಳಲ್ಲಿ ಸಂಚರಿಸಿದರೆ, ಅರಣ್ಯ ಲೋಕದ ಅನನ್ಯ ಅನುಭವ ಅನಾವರಣಗೊಳ್ಳುತ್ತದೆ. ದೂರದ ವಾಣಿವಿಲಾಸ(ಮಾರಿಕಣಿವೆ) ಸಾಗರದ ಗುಡ್ಡ ಪ್ರದೇಶಗಳು, ಇಲ್ಲಿನ ಗುಡ್ಡಗಳಿಗೂ ಬೆಸೆದು, ಬೆಟ್ಟ ಸರಪಳಿಯಂತೆ ಸಾಲಾಗಿ, ಸುತ್ತಲೂ ಆವರಿಸಿ ಕಣ್ಮನ ಮುದಗೊಳಿಸುತ್ತವೆ.
ಈ ಭೂ ಭಾಗದ ಪ್ರದೇಶವನ್ನ, ಜನಪದ ಧ್ವನಿ ಶಾಸನಗಳಲ್ಲಿ, ಓಬಳದೇವರು ಗುಡ್ಡವೆಂದು ಭಕ್ತಿಯಿಂದ ಗೌರವಿಸಿ ಕರೆಯುವುದುಂಟು. ಸಾಹಸಕ್ಕೆ ಕೈ ಹಾಕುವ ಬಹುತೇಕ ಚಾರಣ ತಂಡಗಳು,ಜೋಗಿಮಟ್ಟಿಯ ಬ್ರಿಟಿಷ್ ಬಂಗ್ಲೆಯಿಂದಲೂ ಸಾಗಿ,ಗುಡ್ಡಗಳನ್ನು ಹತ್ತಿ ಇಳಿಯುತ್ತಾ,ಓಬಳದೇವರ ಗುಡ್ಡವನ್ನ ತಲುಪುತ್ತಾರೆ.ಹೇಳಿಕೊಂಡಷ್ಟು ಇದು ಸುಲಭವೇನಲ್ಲ,ಅಲ್ಲಿಗೆ ಸಾಗುವ ಹಾದಿಯೇ ಇಲ್ಲಾ,ಹೆಜ್ಜೆಗಳು ನಡೆದದ್ದೇ ಹಾದಿ,ಮುಳ್ಳು ಕಂಟೆಗಳ ಸರಿಸುತ್ತಲೇ ಸಾಗಬೇಕು,ಎತ್ತರದಮರಗಳು,ಗಾಳಿಗೆ ಜೀಕುಟ್ಟುತ್ತವೆ,ದುರ್ಗಮ ಹಾದಿ,ಚಿರತೆ,ಕರಡಿಗಳ ದರ್ಶನವಾದರೂ ಆಶ್ಚರ್ಯ ಪಡಬೇಕಿಲ್ಲ,ಅತೀ ಪ್ರಯಾಸದ ಹೆಜ್ಜೆಗಳೆಂದರೂ ತಪ್ಪಾಗಲಾರದು. ಗುಂಪುಗಳಿರಬೇಕು,ಜೋಗಿಜಾಡಿಗೆ ಈ ಭಾಗಕ್ಕೆ ಹೋಗಬೇಕೆಂದರೆ,ಬಹು ಖುಷಿಯ ಚಾರಣ. ದುರ್ಗದಿಂದ ದೂರದ ಹಾದಿಯಾಗಿರುವುದರಿಂದ, ಏನಾದರೂ ಬೆಳಗಿನ ತಿಂಡಿ ವ್ಯವಸ್ಥೆಯಲ್ಲಿ ತೆರಳಿ,ತಾವೇ ತಯಾರಿಸಿ,ಎಲ್ಲರೂ ಸವಿದು ಹಿಂದಿರುಗುತ್ತಾರೆ.ಒಂದು ದಿನದ ಹೊರ ಪ್ರವಾಸದ ಅನುಭವ,
ದಟ್ಟ ಹಸಿರಿನ ಪರಿಸರದ ನಡುವೆ,ಎತ್ತರದ ಬೆಟ್ಟ ತುದಿಯ ಮೇಲೆ,ಅಹೋಬಲ ನರಸಿಂಹ ಸ್ವಾಮಿಯ ದೇವಸ್ಥಾನವಿದೆ.ಆ ಗುಡಿಯ ಭಕ್ತರು ಹೇಳುವ ಪ್ರಕಾರ, ಓಬಳದೇವರ ಗರ್ಭಗುಡಿಯನ್ನ,ಹಾಲು ಬಳಸಿ ಗಾರೆಯಿಂದ ನಿರ್ಮಿಸಿರುವುದೆಂದು.ಕಟ್ಟಡಕ್ಕೆ ನೀರು ಬಳಸುವ ಸಂದರ್ಭಗಳಲ್ಲೆಲ್ಲಾ, ಹಾಲನ್ನು ಬಳಸಿ,ನಮ್ಮ ಪೂರ್ವಿಕರು ನಿರ್ಮಿಸಿದ್ದಾರೆಂದು ಹೇಳುವ ಬುಡಕಟ್ಟು ಮಾತುಗಳಿವೆ.
ಈ ಅಹೋಬಲ ಕಂಚೋಬಳನಾಗಿ, ಓಬಳನಾಗಿ,ದುರ್ಗದ ಜಿಲ್ಲೆಯ ಬಹುತೇಕ ಹಳ್ಳಿಗಾಡಿನ ಆರಾಧ್ಯ ದೈವ. ನರಸಿಂಹದೇವರ ಮತ್ತೊಂದು ಹೆಸರೇ ಈ ಅಹೋಬಲ.ಮ್ಯಾಸರ ಅನೇಕ ಬುಡುಕಟ್ಟು ದೇವರುಗಳಲ್ಲಿ,ಈ ದೈವವೂ ಒಂದಾಗಿ,ಮಳೆಲೆಯರ ಬೆಡಗಿನ ದೈವವಾಗಿ ಪೂಜಿಸಲ್ಪಡುತ್ತದೆ.ನಾಮ ಧರಿಸುವುದರಿಂದ ವೈಷ್ಣವ ಪಂತಕ್ಕೆ ಸೇರುವ ಪೆಟ್ಟಿಗೆ ದೇವರಿದು.ಮೇಲ್ವರ್ಗದ ಹಿಂದು ಸಮುದಾಯಗಳಲ್ಲಿ,ಶೈವರಿಗೆ ಶೈವರಿಲ್ಲೇ,ವೈಷ್ಣವರಿಗೆ ವೈಷ್ಣವರಲ್ಲೇ, ನೆಂಟರುಗಳಾಗಿ ವಿವಾಹಗಳು ಜರುಗುತ್ತವೆ.
ಆದರೆ ಬುಡಕಟ್ಟು ಹಾಗೂ ತಳ ಸಮುದಾಯಗಳಲ್ಲಿ, ಶೈವ, ವೈಷ್ಣವ ದೇವರುಗಳೇ ಬೆಡಗುಗಳಾಗಿ, ನೆಂಟರ ಅನುಪಾತದಲ್ಲಿ ವಿವಾಹಗಳು ಜರಗುತ್ತವೆ. ಮ್ಯಾಸಬೇಡರಲ್ಲಿ ಈ ಓಬಳ ದೇವರ ಬೆಡಗಿನವರನ್ನು,ಏಳು ಮನೆ ಬೀಗರು ಅಂತಲೂ ಕರೆಯುತ್ತಾರೆ.ಈ ಬುಡಕಟ್ಟು ದೈವನಿಗೆ ವಿಶೇಷವಾಗಿ, ಶನಿವಾರಗಳಂದೇ ಪೂಜೆ ಪ್ರಾರ್ಥನೆಗಳು ಜರಗುವುದು. ಇಲ್ಲಿನ ಸುತ್ತ ಮುತ್ತಲ,ನೂರಾರು ಹಳ್ಳಿಗಳ ಆರಾಧ್ಯ ದೈವವಿದು.
ವರ್ಷಕ್ಕೊಮ್ಮೆ ಜಾತ್ರೆಯೂ ಜರುಗಿ,ಹರಕೆ ಪೂಜೆಗಳು,ಪಲ್ಲಕ್ಕಿ ಉತ್ಸವ, ಅಗ್ನಿ ಗೆಂಡ,ಓಬಳದೇವರ ಹೇಳಿಕೆಗಳು ಜರುಗಿ,ಕಷ್ಟ ಕಾರ್ಪಣ್ಯಗಳು ದೂರಾಗುತ್ತವೆಂಬ ನಂಬಿಕೆಗಳು, ಜನಮಾನಸದಲ್ಲಿ ನೆಲೆಸಿವೆ.ಇತ್ತೀಚೆಗೆ ಅರಣ್ಯ ಇಲಾಖೆಯವರೇ, ಜಾನುಕೊಂಡ ಭಾಗದಿಂದ ಓಬಳದೇವರ ಗುಡ್ಡದ ಗುಡಿಯವರೆಗೂ,ವಾಹನ ರಸ್ತೆ ನಿರ್ಮಾಣವಾಗಿಸಿ, ಭಕ್ತರು ಹೋಗಿ ಬರಲು ವ್ಯವಸ್ಥೆಯಾಗಿಸಿದ್ದಾರೆ.
ಪ್ರತಿ ಶನಿವಾರದಂದು ಏನಾದ್ರೂ ಪೂಜೆ,ಪರುವುಗಳು ನಡೆಯುತ್ತಿರುತ್ತವೆ, ಜಿಲ್ಲಾಡಳಿತದಿಂದ ನೀರಿನ ಸೌಕರ್ಯವೂ ಒದಗಿದೆ.ಈ ಭಾಗದ ಗುಡ್ಡ ಸಾಲುಗಳ ಕಣಿವೆಯಿಂದ,ಜಿನಗಿ ಹಳ್ಳವೊಂದು ಹುಟ್ಟಿ,ಅನೇಕ ಸಣ್ಣ ಸಣ್ಣ ತೊರೆಗಳನ್ನು ತನ್ನ ಸೆಳವಿಗೆ ಬಳಸಿಕೊಂಡು,ದೊಡ್ಡ ಹಳ್ಳವಾಗಿ,ಜಿಲ್ಲೆಯ ನೂರಾರು ಹಳ್ಳಿಗಳ ಕೆರೆ,ಕಟ್ಟೆ,ಹೊಂಡಗಳ ಒಡಲನ್ನು ತುಂಬಿಸಿ,ಜನ ಜಾನುವಾರುಗಳ ಜೀವನಾಡಿಯಾಗಿದೆ.
ಓಬಳದೇವರು ಗುಡ್ಡದ,ಜಿನಗಿಹಳ್ಳ ಹರಿವು ಪ್ರಾರಂಭವಾದರೆ,ಜನರ ಜೀವಜಲದ ಭವಣೆಯ ನಿಟ್ಟುಸಿರು ಸಹ ಕೊನೆಗೊಳ್ಳುತ್ತದೆ.ಗೊತ್ತಿರುವ ಚಾರಣಿಗರು,ಹಾಗೂ ದೈವದ ಭಕ್ತರು ಬಿಟ್ರೆ,ಈ ಸ್ಥಳ ಅಷ್ಟಾಗಿ ಯಾರಿಗೂ ಪರಿಚಯವಿಲ್ಲ. ಜೋಗಿಮಟ್ಟಿಯ ಚೆಂದಕ್ಕಿಂತಲೂ ಮಹಾಚೆಂದ ಈ ಗುಡ್ಡದ ಸಾಲುಗಳು.ಇಲ್ಲಿ ಹೆಜ್ಜೆಗಳಾಕುವವರಿಗೆ ಇದು ದುರ್ಗದ ಒಡಲೇ, ಅನ್ನುವಷ್ಟು ವಿಸ್ಮಯ ತರಿಸುತ್ತದೆ ಈ ಸ್ಥಳ.
ಈ ಗುಡ್ಡದಿಂದ ಇಳಿಜಾರಿನ ಪ್ರಪಾತದ ಕಣಿವೆಗಳಿಗೆ ಸರಿದರೆ,ಅದೊಂದು ಅದ್ಭುತ,ರಮ್ಯ, ಮನಮೋಹಕ ಲೋಕ, ವಿಶಾಲ ಹಸಿರ ಉಬ್ಬು ತಗ್ಗುಗಳ ಬಯಲಿಗೆ,ಬಹು ಎತ್ತರದ ಗೋಡೆಯಂತಹ ಗಗನಚುಂಬಿ ಗುಡ್ಡಗಳು, ನಮ್ಮನ್ನು ಮತ್ಯಾವುದೋ ಲೋಕಕ್ಕೆ ಕರೆದೊಯ್ದುಬಿಡುತ್ತವೆ.ದಟ್ಟಾರಣ್ಯದ ವನದೇವಿಯ ಮಡಿಲಲ್ಲಿ,ಅಹೋಬಲ ಎಲ್ಲರಿಗೂ ಆಶೀರ್ವದಿಸುತ್ತಲೇ ಪ್ರಸನ್ನನಾಗಿ ನೆಲೆಸಿದ್ದಾನೆ.
ಇಲ್ಲಿನ ಸುತ್ತಲ ಪರಿಸರದಲ್ಲಿ, ರಸಸಿದ್ದರಲ್ಲೊಬ್ಬರಾದ ವಜ್ರಸಿದ್ದಪ್ಪನ ತಾಣವೂ ಇದೆ.ಮಳೆಗಾಲದ ಸಂದರ್ಭಗಳಲ್ಲಿ ವಜ್ರದ ಕಿರು ಜಲಪಾತ ಸೃಷ್ಟಿಯಾಗಿ ಚಾರಣಿಗರನ್ನ ಮನತಣಿಸುತ್ತದೆ.ಅರಣ್ಯ ಇಲಾಖೆ ಜೋಗಿಮಟ್ಟಿಗೆ, ಪ್ರವಾಸಿಗರನ್ನು ಕರೆತಂದಿರುವ ಹಾಗೆ, ಓಬಳದೇವರ ಗುಡ್ಡ ಹಾಗೂ ವಜ್ರಕ್ಕೂ, ಬರಮಾಡಿಕೊಂಡರೆ ದಟ್ಟಾರಣ್ಯದ ಮತ್ತೊಂದು ಭಾಗದ ಪ್ರಕೃತಿಯ ಚೆಂದದ ಸೊಬಗನ್ನ ನಾಡಿಗೆ ಪರಿಚಯಿಸಿದಂತೆ.
ಮುಂದುವರೆಯುವುದು……
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.