Ad imageAd image

ಉದ್ಘಾಟನೆಯಾಗಿದ್ದರೂ ಬಳಕೆಯಾಗದ ಬಿಇಒ ಕಚೇರಿ

News Desk

ಎಂ.ಎಲ್.ಗಿರಿಧರ್, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಉದ್ಘಾಟನೆಯಾಗಿ ಐದು ತಿಂಗಳಾಗುತ್ತಾ ಬಂದರೂ ಸಹ ನಗರದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕಟ್ಟಡ ಬಳಕೆಗೆ ದೊರಕದಿರುವುದು ಶಿಕ್ಷಕರ ಬೇಸರಕ್ಕೆ ಕಾರಣವಾಗಿದೆ.

ನಗರದ ನೆಹರೂ ಸರ್ಕಲ್ ಬಳಿಯಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ತುಂಬಾ ಹಳೆಯದಾಗಿದ್ದು ಮತ್ತು ಬಹಳಷ್ಟು ಚಿಕ್ಕದು ಇದ್ದದ್ದರಿಂದ ಗುರುಭವನದ ಪಕ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಮಾರು 1.60 ಕೋಟಿ ವೆಚ್ಚದಲ್ಲಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನಿರ್ಮಾಣ ಮಾಡಲಾಗಿದೆ. ಸುಸಜ್ಜಿತವಾಗಿ ನಿರ್ಮಾಣಗೊಂಡ ನೂತನ ಕಚೇರಿಯ ಕಟ್ಟಡದಲ್ಲಿ

ಇದೀಗ ವಿದ್ಯುತ್ ಸರಬರಾಜಿನ ಪಾಯಿಂಟ್ ಗಳ ಕೊರತೆ ಮತ್ತು ಲಿಫ್ಟ್ ಕಾಮಗಾರಿಯ ಕಾರಣಕ್ಕಾಗಿ ಐದು ತಿಂಗಳಿನಿಂದ ಕಛೇರಿ ಉಪಯೋಗಕ್ಕೆ ಕಟ್ಟಡವನ್ನು ಬಳಸದಂತಾಗಿದೆ.

ಬಾಕಿ ಉಳಿದಿರುವ ವಿದ್ಯುತ್ ಕಾಮಗಾರಿ ಪೂರ್ಣ ಮಾಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಸಂಬಂಧಪಟ್ಟ ಶಿವಮೊಗ್ಗ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವರಿಗೆ ಪತ್ರದ ಮೇಲೆ ಪತ್ರ ಬರೆಯಲಾಗಿದೆ. ಆದರೂ ಅರ್ಧ ವರ್ಷ ಕಳೆಯುತ್ತಾ ಬಂದರೂ ಸಹ ಸಮರ್ಪಕ ವಿದ್ಯುತ್ ಪಾಯಿಂಟ್ ಅಳವಡಿಸುವ ಗೋಜಿಗೆ ಅವರು ಹೋಗಿಲ್ಲ. ಲಿಫ್ಟ್ ಕಾಮಗಾರಿ ತಡವಾದರೂ ಚಿಂತೆಯಿಲ್ಲ ಆದರೆ ವಿದ್ಯುತ್ ಸೌಲಭ್ಯ ಸಮರ್ಪಕವಾಗಿರಬೇಕು ಎಂದು ಗುತ್ತಿಗೆದಾರರಿಗೆ ಐದಾರು ಬಾರಿ ಪತ್ರ ಮುಖೇನ ತಿಳಿಸಲಾಗಿದ್ದರು ಸಹ ಎಸ್ಟಿಮೇಟ್ ನಲ್ಲಿನ ಕೆಲಸ ಮಾಡಿದ್ದೇವೆ ಎಂಬ ಉತ್ತರ ಬರುತ್ತಲಿದೆ. ಇನ್ನಷ್ಟು ಅನುದಾನದ ಬೇಡಿಕೆ ಇಟ್ಟಿದ್ದು ಅದರ ಪೂರೈಕೆಗಾಗಿ ಕಾಯಲಾಗುತ್ತಿದೆ.

ನೂತನ ಕಚೇರಿ ಕಟ್ಟಡದ ಉಳಿದಿರುವ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಕಚೇರಿಯನ್ನು ತಮಗೆ ಹಸ್ತಾಂತರ ಮಾಡಿ ಎಂದು ಇದೇ ವರ್ಷದ ಮಾರ್ಚ್, ಮೇ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.

ಜೊತೆಗೆ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗುತ್ತಿಗೆದಾರನಿಗೆ ಕರೆ ಮಾಡಿ ಉಳಿದ ಕೆಲಸ ಮುಗಿಸುವಂತೆ ತಾಕೀತು ಮಾಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಶಿವಮೊಗ್ಗಕ್ಕೆ ಕಳಿಸಿರುವ ಎಲ್ಲಾ ಪತ್ರಗಳನ್ನು ಉಲ್ಲೇಖಿಸಿ ಎಲೆಕ್ಟ್ರಾನಿಕ್ ಗುತ್ತಿಗೆದಾರನಿಗೆ ನೋಟಿಸ್ ಸಹ ನೀಡಲಾಗಿದೆ ಎಂಬ ಮಾಹಿತಿ ಇದೆ. ಆದರೂ ಸಹ ಕಚೇರಿ ಕಾಮಗಾರಿ ಸಂಪೂರ್ಣಗೊಳಿಸಿ ಶಿಕ್ಷಕರ ಅನುಕೂಲಕ್ಕೆ ಬಿಟ್ಟುಕೊಡದೆ ಅರ್ಧ ವರ್ಷ ಮುಗಿಸಲಾಗಿದೆ.
ಯುಪಿಎಸ್ ಸೌಲಭ್ಯ ಸಹ ಇಲ್ಲದ ಕಚೇರಿಯಲ್ಲಿ ಕೆಲಸ ಮಾಡುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.

ಕಚೇರಿಯ ಕೆಳಭಾಗದಲ್ಲಿ ಐದು ಮತ್ತು ಮೇಲ್ಭಾಗದಲ್ಲಿ ಎರಡು ರೂಮ್ ಸೇರಿದಂತೆ ಒಟ್ಟು 7 ರೂಂ ಗಳಿದ್ದು ಒಂದು ದೊಡ್ಡ ದಾಸ್ತಾನು ಗೋಡೌನ್ ಒಳಗೊಂಡಿರುವ ನೂತನ ಕಟ್ಟಡ ಬಾಗಿಲು ತೆಗೆಯುವುದು ಎಂದು ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಆರಂಭದಲ್ಲಿ ಶಾಲಾ ಆವರಣದಲ್ಲಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಟ್ಟಡ ಕಟ್ಟಲು ಜಾಗ ಗುರುತು ಮಾಡಿದಾಗ ಶಾಲೆಗೆ ಆಟದ ಮೈದಾನಕ್ಕೆ ಕೊರತೆ ಉಂಟಾಗುತ್ತದೆ ಎಂದು ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದವು.

ಕೊನೆಗೆ ಎಲ್ಲಾ ತೊಡಕುಗಳನ್ನು ಬಗೆಹರಿಸಿಕೊಂಡು ಕಟ್ಟಿದ ಕಟ್ಟಡ ಉದ್ಘಾಟನೆಯಾದರು ಸಹ ಕಚೇರಿ ಬಳಕೆಗೆ 5 ತಿಂಗಳಾದರೂ ಸಿಗದಿರುವುದು ದುರಂತದ ಸಂಗತಿ. ತಾಲೂಕಿನಲ್ಲಿ ಸರ್ಕಾರಿ, ಅನುದಾನಿತ, ಪ್ರೌಢಶಾಲೆ ಹಾಗೂ ಅತಿಥಿ ಶಿಕ್ಷಕರು ಸೇರಿದಂತೆ ಸಾವಿರಾರು ಶಿಕ್ಷಕರಿದ್ದು ಕಚೇರಿ ಕೆಲಸಕ್ಕೆಂದು ಬರುವವರಿಗೆ ಈಗಿನ ಹಳೆಯ ಬಿಇಓ ಕಚೇರಿಯಿಂದ ಹೊಸ ಕಟ್ಟಡಕ್ಕೆ ಸ್ಥಳಾತರವಾಗುವುದು ಎಂದು ಎಂಬ ಪ್ರಶ್ನೆ ಹಾಗೇ ಉಳಿದಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ ಮಾತನಾಡಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಸಚಿವರ ಕಡೆಯಿಂದ ಉದ್ಘಾಟನೆಯೂ ಆಗಿದೆ. ಆದರೆ ವಿದ್ಯುತ್ ಪಾಯಿಂಟ್ ಮತ್ತು ಲಿಫ್ಟ್ ಸಮಸ್ಯೆಯಿಂದ ನೂತನ ಕಚೇರಿಗೆ ಸ್ಥಳಾಂತರವಾಗಲು ಸಾಧ್ಯವಾಗಿಲ್ಲ. ಈಗಾಗಲೇ ನಮ್ಮ ಇಲಾಖೆ ವತಿಯಿಂದ ಸಂಬಂಧಪಟ್ಟ ವಿದ್ಯುತ್ ಇಲಾಖೆಗೆ ಮತ್ತು ಕಟ್ಟಡ ನಿರ್ಮಾಣದ ಹೊಣೆ ಹೊತ್ತ ಇಲಾಖೆಗೆ ಪತ್ರ ಮುಖೇನ ಹಲವು ಬಾರಿ ಮನವಿ ಮಾಡಿ ಸಣ್ಣಪುಟ್ಟ ಸಮಸ್ಯೆಗಳ ನಿವಾರಣೆ ಮಾಡಿಕೊಡಿ ಎಂದು ಮನವಿ ಮಾಡಿದ್ದೇವೆ.

ಇನ್ನೂ ಆರು ಲಕ್ಷ ರೂಗಳ ವಿದ್ಯುತ್ ಕಾಮಗಾರಿ ಕೆಲಸವಿದೆ. ಲಿಫ್ಟ್ ಕಾಮಗಾರಿ ತಡವಾದರೂ ನಡೆಯುತ್ತದೆ. ಆದರೆ ಕಚೇರಿ ಕೆಲಸಕ್ಕೆ ಹೆಚ್ಚಿನ ವಿದ್ಯುತ್ ಪಾಯಿಂಟ್ ಬೇಕಾಗುತ್ತದೆ. ನೂತನ ಕಚೇರಿಗೆ ಈಗಿನ ಹಳೆಯ ಕಚೇರಿಯ ಉಪಕರಣಗಳನ್ನೇ ಬಳಸಿಕೊಂಡು ಕಾರ್ಯ ನಿರ್ವಹಿಸಲಾಗುತ್ತದೆ. ಆದರೆ ವಿದ್ಯುತ್ ಪಾಯಿಂಟ್ ಗಳ ಕಾಮಗಾರಿ ಆಗಬೇಕಾಗಿದ್ದು ಸಚಿವರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";