ಚಂದ್ರವಳ್ಳಿ ನ್ಯೂಸ್, ವಿಜಯಪುರ:
ಬೇಲಿಮಠದ ಪರಮಪೂಜ್ಯ ಡಾ. ಶ್ರೀ ಶಿವರುದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜುಲೈ 27 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹೈಟೆಕ್ ಆಯುರ್ವೇದ ಆಸ್ಪತ್ರೆ ಉದ್ಘಾಟನೆ ಆಗಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ BLDE ಸಂಸ್ಥೆಯ ಸಾಧನೆಗಳು, ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು.
ವಿಜಯಪುರದ ಗಡಿಗಳನ್ನು ಮೀರಿ ರಾಷ್ಟ್ರದ ಮಟ್ಟದಲ್ಲಿಯೂ ಗಮನಸೆಳೆದಿರುವ BLDE ಸಂಸ್ಥೆ, ಈಗ ಆಯುರ್ವೇದ ಕ್ಷೇತ್ರದ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜುಲೈ 27ರಂದು ಬೇಲಿಮಠದ ಡಾ. ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ AICCಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೈಟೆಕ್ ಆಯುರ್ವೇದ ಆಸ್ಪತ್ರೆ ಉದ್ಘಾಟಿಸಲಿದ್ದಾರೆ.
BLDE ಸಂಸ್ಥೆ ಜನರ ಶ್ರೇಯೋಭಿವೃದ್ದಿಯನ್ನೇ ಧ್ಯೇಯವಾಗಿಸಿಕೊಂಡಿದೆ. ಪುರಾತನ ವೈದ್ಯ ಪದ್ಧತಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯ ಯೋಜನೆಗಳನ್ನು ರೂಪಿಸಿದೆ. ನೂತನ ಆಯುರ್ವೇದದ ಆಸ್ಪತ್ರೆಯಲ್ಲಿ ಹಲವು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಹೈಟೆಕ್ ಸ್ಪರ್ಶ ನೀಡಲಾಗಿದೆ.
ಆಯುರ್ವೇದ ಪದ್ಧತಿಯ ಜೊತೆಗೆ ಆಧುನಿಕ ವೈದ್ಯಕೀಯ ಸೌಲಭ್ಯವೂ ಲಭ್ಯವಾಗಲಿದೆ. ಮೆಡಿಸನ್, ಪೆಡಿಯಾರ್ಟಿಕ್, ಗೈನಕಾಲಜಿ, ಆರ್ಥೊಪೊಡಿಕ್ಸ್, ಸುಸಜ್ಜಿತ ಪ್ರಯೋಗಾಲಯ, ಸ್ಕ್ಯಾನಿಂಗ್ ಸೆಂಟರ್ ಗಳನ್ನು ಆರಂಭಿಸಲಾಗುವುದು. ಬಿ.ಎಂ. ಪಾಟೀಲ ಫೌಂಡೇಶನ್ ವತಿಯಿಂದ ಇನೋವೇಶನ್ ಹಾಗೂ ಇನ್’ಕ್ಯೂಬಿಷನ್ ಕೇಂದ್ರ ಆರಂಭಿಸಲಾಗುವುದು.
ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು, ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ ಕಲ್ಪಿಸಲು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಬಸವನಬಾಗೇವಾಡಿ, ದೇವರಹಿಪ್ಪರಗಿ ಮತ್ತು ವಿಜಯಪುರ ನಗರದ ಆಲ್ ಅಮೀನ್ ಮುಂಭಾಗದ ಲಿಂಗರಾಜ ಸಂಸ್ಥೆ ಜಾಗದಲ್ಲಿ ಸಿಬಿಎಸ್ಇ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
ಬಸವನಬಾಗೇವಾಡಿಯಲ್ಲಿ ಬಿಸಿಎ ಮತ್ತು ಬಿ.ಫಾರ್ಮಾ ಕಾಲೇಜುಗಳನ್ನು ಆರಂಭಿಸುವ ಸಂಗತಿಯೂ ಸೇರಿದಂತೆ ಹಲವು ಮಾಹಿತಿಗಳನ್ನು ಮಾಧ್ಯಮದ ಪ್ರತಿನಿಧಿಗಳೊಂದಿಗೆ ಸಚಿವ ಎಂ.ಬಿ ಪಾಟೀಲ್ ಹಂಚಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಡಾ. ವೈ. ಎಂ. ದೇವರಾಜ, ಉಪಕುಲಪತಿ ಡಾ. ಅರುಣಾ ಇನಾಮದಾರ, ರಿಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಪ್ರಾಚಾರ್ಯ ಡಾ. ಮಂಜುನಾಥ, ಮೊದಲಾದವರು ಉಪಸ್ಥಿತರಿದ್ದರು.