ಚಂದ್ರವಳ್ಳಿ ನ್ಯೂಸ್, ವಿಜಯಪುರ:
ಬಸವನಬಾಗೇವಾಡಿಯಲ್ಲಿ ಫೆಬ್ರವರಿ 4 ರಂದು ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಮುಹೂರ್ತ ಫಿಕ್ಸ್ ಆಗಿದ್ದು, ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಲು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮುಂದಾಗಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1008 ಸಾಧು ಸಂತರ ಪಾದ ಪೂಜೆ ಮೂಲಕ ಬ್ರಿಗೇಡ್ ಉದ್ಘಾಟನೆ ನಡೆಯಲಿದೆ. 1 ಲಕ್ಷ ಜನ ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ ಎಂದು ಈಶ್ವರಪ್ಪ ತಿಳಿಸಿದರು.
ಕ್ರಾಂತಿವೀರ ಬ್ರಿಗೇಡ್ ಅನ್ನು ಕನ್ಹೇರಿ ಮಠದ ಶ್ರೀಗಳು ಹಾಗೂ ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠದ ತಿಂಥಣಿ ಶಾಖಾ ಮಠದ ಸಿದ್ದರಾಮಾನಂದಪುರಿಸ್ವಾಮೀಜಿ ಉದ್ಘಾಟನೆ ಮಾಡುತ್ತಾರೆ ಎಂದು ತಿಳಿಸಿದರು.
ಇದೇ ಜನವರಿ 12 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ಪ್ರವಾಸದ ಮೂಲಕ ಬ್ರಿಗೇಡ್ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ಈಶ್ವರಪ್ಪ ತಿಳಿಸಿದರು. ಹಿಂದೂ ಸಮಾಜದ ಪರ, ಹಿಂದುಳಿದ ವರ್ಗದ ಸ್ವಾಮೀಜಿಗಳ ಪರ ಬ್ರಿಗೇಡ್ ಕೆಲಸ ಮಾಡಲಿದೆ. ಬ್ರಿಗೇಡ್ ಸ್ಥಾಪನೆ ಮಾಡುವುದಕ್ಕೆ ಮುಖ್ಯ ಉದ್ದೇಶ ಹಿಂದುಳಿದ ಮಠಗಳ ಅಭಿವೃದ್ಧಿ. ಹಿಂದೂಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ರಾಜಕಾರಣದ ಜೊತೆ ಜೊತೆಗೆ ನಾನು ಸಾಧು ಸಂತರ ಸೇವೆ, ಧಾರ್ಮಿಕ ಕಾರ್ಯ ಮಾಡುತ್ತಿದ್ದೇನೆ. ಈಹಿಂದೆ ಮಠ ಮಂದಿರಗಳಿಗೆ ಹಣ ನೀಡುವಂತೆ ಮಾಡಿದ್ದು ನಾನೇ. ಹೀಗಾಗಿ ನಾನು ಧಾರ್ಮಿಕ ಕೆಲಸ ಮಾಡುತ್ತಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು.
ಆರೋಪಬಂದಾಗ ರಾಜೀನಾಮೆ ನೀಡಿದ್ದೆ-
ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಹೋರಾಟ ವಿಚಾರವಾಗಿ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪಬಂದಾಗ ಕೂಡಲೇ ರಾಜೀನಾಮೆ ನೀಡಿದ್ದೆ. ಆರ್‌ಎಸ್‌ಎಸ್‌ನಿಂದ ಬೆಳೆದು ಬಂದವನು ನಾನು. ಅಂದು ಕೆಲವರು ನನ್ನ ವಿರುದ್ಧ ರಾಜಕೀಯ ಮಾಡಿದರು. ಅವರು ಈಗ ಅನುಭವಿಸುತ್ತಿದ್ದಾರೆ. ನನ್ನ ವಿರುದ್ಧ ಕೆಲಸ ಮಾಡಿದವರು ಯಾರೆಂದು ಸಮಯ ಬಂದಾಗ ಗೊತ್ತಾಗುತ್ತೆ ಎಂದು ಮಾರ್ಮಿಕವಾಗಿ ಈಶ್ವರಪ್ಪ ತಿಳಿಸಿದರು.
ನನ್ನವಿರುದ್ಧ ಕೆಲಸ ಮಾಡಿದವರಿಗೆ ದೇವರೇ ಉತ್ತರ ನೀಡುತ್ತಿದ್ದಾನೆ. ನನ್ನ ವಿರುದ್ಧ ಕೆಲಸ ಮಾಡಿದವರು ಯಾರು, ಯಾವ ಪಕ್ಷದವರು ಅನ್ನೋದು ಸಮಯ ಬಂದಾಗ ಗೊತ್ತಾಗುತ್ತೆ ಎಂದು ಈಶ್ವರಪ್ಪ ತಿಳಿಸಿದರು.