ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ್ದೆನ್ನಲಾದ ಹೆಬ್ಬಾಳ ವಿಸ್ತರಿತ ಫ್ಲೈಓವರ್ ಉದ್ಘಾಟನೆ ಸೋಮವಾರ ನೆರವೇರಿತು.
ವಿಸ್ತರಿತ ಮೇಲ್ಸೇತುವೆಯಿಂದ ಈ ಭಾಗದಲ್ಲಿ ಟ್ರಾಫಿಕ್ ಶೇ 30 ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಟ್ರಾಫಿಕ್ ಜಾಮ್- ಹೆಬ್ಬಾಳ ಫ್ಲೈಓವರ್ನ ಹೊಸ ಲೂಪ್ ಲೋಕಾರ್ಪಣೆ ದಿನವೇ ಸಾವಿರಾರು ವಾಹನಗಳ ದಟ್ಟಣೆಯಿಂದಾಗಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಪರದಾಡುವಂತಾಗಿತ್ತು.
ವಿಮಾನ ನಿಲ್ದಾಣಕ್ಕೆ ತೆರಳುವ ದಾರಿಯಲ್ಲಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡು ವಿಮಾನ ಮಿಸ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ದೀರ್ಘ ವಾರಾಂತ್ಯದ ರಜೆಯ ನಂತರ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಬರುವ ಹಾಗೂ ನಿರ್ಗಮಿಸುವ ದಿನವೇ ಉದ್ಘಾಟನೆ ಕಾರ್ಯ ಹಮ್ಮಿಕೊಂಡು ಸಂಚಾರಕ್ಕೆ ಅಡ್ಡಿ ಮಾಡಿದ್ದಕ್ಕೆ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿ ಸೋಮವಾರ ಬೆಳಿಗ್ಗೆ ಹೆಬ್ಬಾಳ ರಸ್ತೆಯ ಪ್ರಯಾಣ ಬಹಳ ಕಷ್ಟವಾಗಿತ್ತು. ಸಂಸತ್ತಿನ ಕಲಾಪದಲ್ಲಿ ಭಾಗವಹಿಸಲು ದೆಹಲಿಗೆ ಹೋಗುವಾಗ, ಸಾವಿರಾರು ಜನರೊಂದಿಗೆ ನಾನೂ ಸಹ ಹೆಬ್ಬಾಳ ಜಂಕ್ಷನ್‌ನಲ್ಲಿ ಸುಮಾರು 50 ನಿಮಿಷಗಳ ಕಾಲ ಸಿಲುಕಿಕೊಂಡೆ ಮತ್ತು ವಿಮಾನ ತಪ್ಪಿಸಿಕೊಳ್ಳುವುದರಲ್ಲಿದ್ದೆ ಎಂದು ತೇಜಸ್ವಿ ಸೂರ್ಯ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಸೋಮವಾರ ಬೆಳಗಿನ ಪ್ರಯಾಣದ ದಟ್ಟಣೆ ಮಧ್ಯಯೇ ಉದ್ಘಾಟನೆಗೆ ನಿಗದಿ ಮಾಡಿಕೊಂಡಿದ್ದು ಸಮಸ್ಯೆಗೆ ಕಾರಣವಾಯಿತು. ಮೂರ್ನಾಲ್ಕು ದಿನಗಳ ವಾರಾಂತ್ಯ ರಜೆ ಮುಗಿಸಿ ವಾಪಸ್ ಬೆಂಗಳೂರಿಗೆ ಬರುವವರು, ಇಲ್ಲಿಂದ ಬೇರೆ ಕಡೆ ಹೋಗುವ ಸಂದರ್ಭದಲ್ಲೇ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರ ಬದಲು ಕನಿಷ್ಠ ಅಡಚಣೆಯಾಗುವಂಥ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು. ಪ್ರಯಾಣಿಕರ ಸೌಕರ್ಯವನ್ನು ಎಂದಿಗೂ ಕೊನೆಯಲ್ಲಿ ಪರಿಗಣಿಸಲಾಗುತ್ತದೆ.
ಯೋಜನೆಯ ವಿನ್ಯಾಸದಲ್ಲಾಗಲಿ ಅಥವಾ ಉದ್ಘಾಟನೆ ಸಮಯ ನಿಗದಿಯಲ್ಲಾಗಲೀ ಸಾರ್ವಜನಿಕರ ಬಗ್ಗೆ ಯಾರೂ ಗಮನಿಸುವುದೇ ಇಲ್ಲ. ಇವುಗಳನ್ನೆಲ್ಲ ಯಾವಾಗಲೂ ರಾಜಕಾರಣಿಗಳಿಂದ ರಾಜಕಾರಣಿಗಳಿಗಾಗಿಯೇ ಮಾಡಲಾಗುತ್ತದೆ ಎಂದು ತೇಜಸ್ವಿ ಸೂರ್ಯ ಟೀಕಿಸಿದ್ದಾರೆ.
ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ 700 ಮೀಟರ್ ಉದ್ದದ ವಿಸ್ತರಿತ ಲೂಪ್, ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕನಿಷ್ಠ ಶೇ 30 ರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಐಟಿ ಕಾರಿಡಾರ್‌ಗಳು ಮತ್ತು ಉತ್ತರ ಉಪನಗರಗಳಿಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಸಂಚಾರಕ್ಕೆ ಪ್ರಮುಖವಾದ ಈ ಜಂಕ್ಷನ್ನ ಸಂಚಾರ ದಟ್ಟಣೆಯು ಬೆಂಗಳೂರಿನ ವಾಹನ ಚಾಲಕರಿಗೆ ದಿನನಿತ್ಯ ಹತಾಶೆಯನ್ನುಂಟುಮಾಡುತ್ತಿತ್ತು.
ಏತನ್ಮಧ್ಯೆ, ಮುಂದಿನ 3 ತಿಂಗಳಲ್ಲಿ ಹೆಬ್ಬಾಳ ಫ್ಲೈಓವರ್ನಲ್ಲಿ ಮತ್ತೊಂದು ಲೂಪ್ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಬೈರತಿ ಸುರೇಶ್, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಮಾಜಿ ಸಂಸದೆ ರಮ್ಯಾ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

