ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಹಾಲಿನ ಉತ್ಪಾದನೆ ಜಾಸ್ತಿಯಾಗಿದೆ ನಿಜ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 7 ರೂ. ಕೊಡುವುದಾಗಿ ತಿಳಿಸಿದ್ದೆವು, ಅದರಂತೆ ಮುಂದಿನ ದಿನಗಳಲ್ಲಿ ಹೆಚ್ಚಳ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ಹಾಲಿನ ಪ್ರೋತ್ಸಾಹ ಧನವನ್ನು 2ರೂ. ನಿಂದ 5 ರೂ. ಗೆ ಹೆಚ್ಚಳ ಮಾಡಿದ್ದೇ ಕಾಂಗ್ರೆಸ್ ಸರ್ಕಾರ. ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರ ಈ ಪ್ರೋತ್ಸಾಹ ಧನ ಹೆಚ್ಚು ಮಾಡಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರ 2019-20 ರಲ್ಲಿ ರೂ. 364 ಕೋಟಿ, 2020-21 ರಲ್ಲಿ ರೂ. 106 ಕೋಟಿ, 2021-22 ರಲ್ಲಿ ರೂ. 130 ಕೋಟಿ ಸೇರಿದಂತೆ ಒಟ್ಟು ರೂ. 600 ಕೋಟಿ ಪ್ರೋತ್ಸಾಹ ಧನವನ್ನು ಬಾಕಿ ಬಿಟ್ಟು ಹೋಗಿತ್ತು ಎಂದು ಅವರು ಆರೋಪಿಸಿದರು.
ನಮ್ಮ ಸರ್ಕಾರ ಬಂದಮೇಲೆ ಈ ಬಾಕಿಯನ್ನು ಪೂರ್ತಿ ತೀರಿಸಿದ್ದೇವೆ. ಸುಮಾರು 8.16 ಲಕ್ಷ ಹಾಲು ಉತ್ಪಾದಕರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.