ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಚಿಕ್ಕಮಗಳೂರಿನ ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ರಸ್ತೆಗೆ ಗುಡ್ಡದ ಮಣ್ಣು ಬಿದ್ದಿದ್ದು, 2 ಜೆಸಿಬಿಯಿಂದ ನಿರಂತರ ಮಣ್ಣು ತೆರವಿನ ಕಾರ್ಯ ನಡೆಯುತ್ತಿದೆ.
ಸುರಿಯುತ್ತಿರುವ ಮಳೆ ಮಧ್ಯೆಯೇ ತೆರವು ಕಾರ್ಯ ನಡೆಯುತ್ತಿದೆ. ಇನ್ನು ಅಪಾರ ಪ್ರಮಾಣದಲ್ಲಿ ನೀರು ಹರಿದು ರಸ್ತೆ ಬದಿ ಗುಂಡಿಗಳು ನಿರ್ಮಾಣವಾಗಿದೆ. ಹೀಗಾಗಿ ಅಧಿಕಾರಿಗಳು ತಾತ್ಕಾಲಿಕವಾಗಿ ಮಣ್ಣನ್ನು ಹಾಕಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ.
ಭಾರೀ ಮಳೆ ಬಿದ್ದು ಸರ್ಕಾರಿ ಆಸ್ಪತ್ರೆಗೆ ಡ್ರೈನೇಜ್ ನೀರು ನುಗ್ಗಿರುವ ಘಟನೆ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕಳೆದ ರಾತ್ರಿ ಸುರಿದ ಮಳೆಯಿಂದ ಸರ್ಕಾರಿ ಆಸ್ಪತ್ರೆ ಜಲಾವೃತಗೊಂಡಿತ್ತು. ಆಸ್ಪತ್ರೆಯಲ್ಲಿ ನೀರು ತುಂಬಿದ್ದರಿಂದ ರೋಗಿಗಳು ಪರದಾಟಬೇಕಾಯಿತು. ಮಳೆ ನೀರಿನ ಜತೆಗೆ ಡ್ರೈನೇಜ್ ನೀರು ಸೇರಿ ಕೆಟ್ಟ ವಾಸನೆ ಬರುತ್ತಿದ್ದು, ರೋಗಿಗಳು ಪರದಾಡಬೇಕಾಯಿತು.
ಚಿಕ್ಕಮಗಳೂರಿನಲ್ಲಿ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕುದುರೆಮುಖ, ಸಂಸೆ, ಹೊರನಾಡು ಸುತ್ತಮುತ್ತ ಮಳೆ ಅಬ್ಬರಿಸುತ್ತಿದೆ. ಕಳಸ ಪಟ್ಟಣದಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದ ಕಾಫಿ-ಅಡಿಕೆ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಮಲೆನಾಡಿನಾದ್ಯಂತ ಬೆಳೆಗ್ಗೆಯಿಂದಲೂ ಮೋಡ ಕವಿದ ವಾತವರಣ ಇದೆ.