ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರಿ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರು ತಾವು ಕೈಗೊಳ್ಳಲಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಕಾಂಗ್ರೆಸ್ ಸರ್ಕಾರ ಔಷಧಿ ಪೂರೈಕೆಯಲ್ಲಿ ವಿಫಲವಾಗಿರುವ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ದೂರಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧಿ ಸಿಗುತ್ತಿಲ್ಲ ಎಂದು ವಿಪಕ್ಷಗಳು ಟೀಕೆ ಮಾಡಿದರೆ ಎಲ್ಲವೂ ಸರಿ ಇದೆ ಎಂದು ತಿಪ್ಪೆ ಸಾರಿಸುವ ಮಾತಾಡುತ್ತೀರಿ. ಮಾಧ್ಯಮಗಳು ವರದಿ ಮಾಡಿದರೂ ಕ್ಯಾರೆ ಎನ್ನುವುದಿಲ್ಲ.
ಆದರೆ ದಿನನಿತ್ಯ ರೋಗಿಗಳಿಗೆ ಆರೋಗ್ಯ ಸೇವೆ ನೀಡುವ, ಆಸ್ಪತ್ರೆಗಳ ನಿರ್ವಹಣೆ ಮಾಡುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು ಸ್ವತಃ ತಾವೇ ಲಿಖಿತ ರೂಪದಲ್ಲಿ ಔಷಧಿ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯದ ಬಗ್ಗೆ ಬಹಿರಂಗ ಮಾಡಿದ್ದಾರಲ್ಲ ಸ್ವಾಮಿ, ಈಗ ಏನು ಹೇಳುತ್ತೀರಿ?
ಇನ್ನು ನಿಮ್ಮ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಂತೂ ಆರೋಗ್ಯ ಇಲಾಖೆಯನ್ನೇ ಸಂಪೂರ್ಣವಾಗಿ ಅನಾರೋಗ್ಯ ಪೀಡಿತಗೊಳಿಸಿದ್ದಾರೆ.
ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ ಮರ್ಯಾದೆ ಇದ್ದರೆ ಈ ಕೂಡಲೇ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಬೇಕು ಎಂದು ಆರ್.ಅಶೋಕ್ ತಾಕೀತು ಮಾಡಿದ್ದಾರೆ.

