ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಯೋತ್ಪಾದಕರ ತಯಾರಿಕಾ ಕೇಂದ್ರವಾಗಿರುವ ಪಾಕಿಸ್ತಾನಕ್ಕೆ ಭಾರತ ಅದರದ್ದೆ ಭಾಷೆಯಲ್ಲಿ ಉತ್ತರ ಕೊಡಲು ಸನ್ನದ್ಧವಾಗಿದೆ. ಹಲವಾರು ಕಠಿಣ ಎಚ್ಚರಿಕೆಗಳ ನಡುವೆಯೂ ಪಾಕಿಸ್ತಾನ ತನ್ನ ನರಿ ಬುದ್ದಿಯನ್ನು ತೋರುತ್ತಲೆ ಬಂದಿದೆ. ಈ ಬಾರಿ ಶತಾಯಗತಾಯವಾಗಿ ಭಯೋತ್ಪಾದಕ ಪ್ರೇಮಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಸಜ್ಜಾಗಿರುವ ಭಾರತ ರಾಜತಾಂತ್ರಿಕ ದಾಳಿ ನಡೆಸಿ 5 ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದೆ ಎಂದು ಬಿಜೆಪಿ ತಿಳಿಸಿದೆ.
ಮೊದಲಿಗೆ 1960ರಲ್ಲಿ ಅಂದು ನೆಹರು ಸರ್ಕಾರ ಪಾಕಿಸ್ತಾನದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಸಿಂಧೂ ನದಿ ಒಪ್ಪಂದಕ್ಕೆ ಅಂತಿಮ ಮೊಳೆ ಹೊಡೆಯಲು ನಿರ್ಧರಿಸಿದೆ. ಮಾನಸ ಸರೋವರದಲ್ಲಿ ಉಗಮವಾಗುವ ಸಿಂಧೂ ನದಿ ಲಡಾಕ್‌ನ ಲೇಹ್‌ಮೂಲಕ ಪಾಕ್‌ಆಕ್ರಮಿತ ಕಾಶ್ಮೀರದ ಮೂಲಕ ಪಾಕಿಸ್ತಾನ ಪ್ರವೇಶಿಸಿ, ಪಾಕಿಸ್ತಾನದುದ್ದಕ್ಕೂ ಹರಿದು, ಕರಾಚಿಯಲ್ಲಿ ಸಮುದ್ರ ಸೇರುತ್ತದೆ.
ಪಾಕಿಸ್ತಾನದಲ್ಲಿ ಈ ನದಿಯ ನೀರಿನ ಪ್ರಮಾಣ ಹೆಚ್ಚಳಕ್ಕೆ ಕಾರಣ, ಭಾರತದ ಪಂಚ ನದಿಗಳ ನಾಡಾದ ಪಂಜಾಬ್‌ನ ಜೆಹ್ಲಮ್, ಚಿನಾಬ್, ರಾವಿ, ಬಿಯಾಸ್ ಮತ್ತು ಸಟ್ಲೆಜ್. 1960ರ ಸಿಂಧೂ ನದಿ ನೀರಿನ ಒಪ್ಪಂದದ ಅನ್ವಯ ಪಾಕಿಸ್ತಾನ ಸಿಂಧೂ, ಜೆಹ್ಲಮ್, ಚಿನಾಬ್ ನದಿಗಳ ಮೇಲೆ ಸಂಪೂರ್ಣ ಹಕ್ಕು ಹೊಂದಿದ್ದರೆ, ಭಾರತ ರಾವಿ, ಬಿಯಾಸ್ ಮತ್ತು ಸಟ್ಲೆಜ್‌ನದಿಗಳ ಮೇಲೆ ಸಂಪೂರ್ಣ ಹಕ್ಕು ಹೊಂದಿದೆ ಎಂದು ಬಿಜೆಪಿ ಹೇಳಿದೆ.
ಈ ನದಿಗಳ ವ್ಯಾಪ್ತಿಯಲ್ಲಿ ಯಾವುದೇ ನೀರಾವರಿ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಎರಡು ದೇಶಗಳು ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಒಪ್ಪಂದ ತಿಳಿಸುತ್ತದೆ. ಭಾರತ ಇದುವರೆಗೂ ಭಾರತದಲ್ಲಿ ಹರಿಯುವ ನದಿಗಳ ಮೇಲೆ ಯಾವುದೇ ಹಕ್ಕು ಸಾಧಿಸದೆ ಒಪ್ಪಂದವನ್ನು ಚಾಚೂ ತಪ್ಪದೆ ಪಾಲಿಸುತ್ತಿತ್ತು.
ಪಾಕಿಸ್ತಾನದ ಶೇ.65 ರಷ್ಟು ಕೃಷಿ ಭೂಮಿ ಈ ನದಿಗಳ ನೀರಾವರಿ ಪ್ರದೇಶದ ಮೇಲೆ ಅವಲಂಬಿತವಾಗಿದ್ದು, ಶೇ.90ರಷ್ಟು ಪಾಕಿಸ್ತಾನಿಯರ ಹಸಿವನ್ನು ಈ ಭಾಗದಲ್ಲಿ ಬೆಳೆಯುವ ಆಹಾರ ಪದಾರ್ಥ ನೀಗಿಸುತ್ತಿತ್ತು.
ಈಗ ಈ ಸಿಂಧೂ ನದಿ ನೀರು ಒಪ್ಪಂದಕ್ಕೆ ಭಾರತ ಎಳ್ಳು-ನೀರು ಬಿಡುವ ಮೂಲಕ ಪಾಕಿಸ್ತಾನಿಯರ ಅನ್ನ ಹಾಗೂ ನೀರಿಗೆ ಈಗ ಕೋಕ್‌ನೀಡಿದೆ. ಭಾರತದ ನೀರಿನಿಂದ ಅನ್ನ ತಿಂದು ಭಾರತಕ್ಕೆ ಕೇಡು ಬಯಸುತ್ತಿದ್ದ ಪಾಕಿಸ್ತಾನಿಯರು ಈಗ ತುತ್ತು ಅನ್ನ, ಬೊಗಸೆ ನೀರಿಗೂ ಲಾಟರಿ ಹೊಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಬಿಜೆಪಿ ಎಚ್ಚರಿಸಿದೆ.
ಪಾಕಿಸ್ತಾನಕ್ಕೆ ಏಕೈಕ ರಸ್ತೆಮಾರ್ಗವಾಗಿದ್ದ ಅಟ್ಟಾರಿ-ವಾಘಾ ಗಡಿರಸ್ತೆಯನ್ನು ಸಹ ಬಂದ್‌ಮಾಡಿರುವುದು ಪಾಕಿಸ್ತಾನಕ್ಕೆ ಕೊಟ್ಟ ಅತ್ಯಂತ ದೊಡ್ಡ ಮರ್ಮಾಘಾತವಾಗಿದೆ. ಪಾಕಿಸ್ತಾನಕ್ಕೆ ಭಾರತದಿಂದ ಸೋಯಾಬೀನ್, ಕೋಳಿ ಆಹಾರ, ತರಕಾರಿಗಳು, ಕೆಂಪು ಮೆಣಸಿನಕಾಯಿಗಳು, ಪ್ಲಾಸ್ಟಿಕ್ ಮತ್ತು ಇತರ ಸರಕುಗಳನ್ನು ರಫ್ತು ಮಾಡಲಾಗುತ್ತಿತ್ತು. ಬದಲಿಗೆ ಭಾರತಕ್ಕೆ ಅಲ್ಲಿಂದ ಖರ್ಜೂರ ಸೇರಿದಂತೆ ಇತರ ಸಣ್ಣಪುಟ್ಟ ಒಣಹಣ್ಣುಗಳು ಕಡಿಮೆ ಪ್ರಮಾಣದಲ್ಲಿ ಆಮದಾಗುತ್ತಿದ್ದವು.
ಈ ಗಡಿ ಭಾಗವನ್ನು ಬಂದ್ ಮಾಡಿರುವ ಕಾರಣ ಪಾಕಿಸ್ತಾನ ಭಾರತದಿಂದ ರಫ್ತಾಗುತ್ತಿದ್ದ ಪದಾರ್ಥಗಳಿಗೆ ಹೊಸ ಸರಬರಾಜುದಾರನನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ. ಕಳೆದ ವರ್ಷ ಈ ಗಡಿಭಾಗದಲ್ಲಿ ಬರೋಬ್ಬರಿ 3,886.53 ಕೋಟಿ ವ್ಯವಹಾರ ನಡೆದಿದ್ದು, ಇಷ್ಟೇ ದೊಡ್ಡ ಸರಬರಾಜುದಾರನನ್ನು ಪಾಕಿಸ್ತಾನ ಈ ಸಂದರ್ಭದಲ್ಲಿ ಹುಡುಕಿಕೊಳ್ಳುವುದು ಅತ್ಯಂತ ಕಷ್ಟಸಾಧ್ಯ.
ಈಗಾಗಲೇ ಆರ್ಥಿಕ ಸಂಕಷ್ಟದಿಂದ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ದಿನಬಳಕೆ ವಸ್ತುಗಳ ದರ ಮತ್ತಷ್ಟು ಏರಿಕೆಯಾಗಲಿದ್ದು, ಪಾಕಿಸ್ತಾನದಲ್ಲಿ ಜನ ದಂಗೆ ಎದ್ದರೂ ಅಚ್ಚರಿಯಿಲ್ಲ.ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡಿರುವ ರಾಜತಾಂತ್ರಿಕ ದಾಳಿಯಿಂದ, ಪಾಕಿಸ್ತಾನ ಅವಸಾನದತ್ತ ಸಾಗುವದು ಖಚಿತ-ನಿಶ್ಚಿತ-ಖಂಡಿತ!! ಎಂದು ಬಿಜೆಪಿ ಭವಿಷ್ಯ ನುಡಿದಿದೆ.