ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಜಗತ್ತಿನಲ್ಲೇ ಅತ್ಯಂತ ವಿಸ್ತೃತ ಮತ್ತು ಬಲಿಷ್ಠ ಸಂವಿಧಾನವನ್ನು ಭಾರತ ಹೊಂದಿದೆ ಎಂದು ತಹಶೀಲ್ದಾರ್ ಎಂ ಸಿದ್ದೇಶ್ ತಿಳಿಸಿದರು.
ನಗರದ ಟಿಬಿ ವೃತ್ತದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ರವರ ನಾಯಕತ್ವದಲ್ಲಿ ರಚಿಸಿರುವ ಸಂವಿಧಾನದ ತಾರತಮ್ಯವಿಲ್ಲದ ಚಿಂತನೆಗಳು ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿವೆ. ಸಂವಿಧಾನದ ಉದ್ದೇಶ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಸಮಾನವಾಗಿ ವಿತರಿಸುವುದು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದಾಗಿದೆ. ಸಂವಿಧಾನದ ಅರ್ಥ, ಮಹತ್ವ ಹಾಗೂ ಜವಾಬ್ದಾರಿಯನ್ನು ನಮ್ಮ ಜನ ಅರ್ಥ ಮಾಡಿಕೊಳ್ಳಬೇಕು ಎಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು.
ತಾಪಂ ಇಒ ಡಾ. ಪ್ರಮೋದ್ ಮಾತನಾಡಿ ಸಂವಿಧಾನವು ನಮ್ಮೆಲ್ಲರಿಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಶಿಕ್ಷಣ ಮತ್ತು ಸಂರಕ್ಷಣೆ, ಕಾನೂನು, ಜವಾಬ್ದಾರಿ, ರಾಷ್ಟ್ರ ನಿರ್ಮಾಣ ಸೇರಿದಂತೆ ಎಲ್ಲಾ ಅಂಶಗಳು ಸಂವಿಧಾನ ಪೀಠಿಕೆಯಲ್ಲಿ ಅಡಗಿವೆ ಎಂದರು.
ವಾಣಿ ಕಾಲೇಜಿನ ಪ್ರಾಧ್ಯಾಪಕ ಡಾ. ಗಂಗಾಧರ್ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದರು. ನಗರಸಭೆ ಪೌರಾಯುಕ್ತ ಎ ವಾಸೀಂ ಅವರು ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞಾವಿಧಿ ಬೋಧಿಸಿದರು. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನ ದಿನ ಕುರಿತು ನನ್ನ ಮತ ನನ್ನ ಹಕ್ಕು ಭಾಷಣ ಸ್ಪರ್ಧೆಯಲ್ಲಿ ದೇವರಕೊಟ್ಟ ಮೊರಾರ್ಜಿ ವಸತಿ ಶಾಲೆಯ ಆರ್.ಡಿ. ಅನನ್ಯ ಪ್ರಥಮ,
ಜೆಜಿ ಹಳ್ಳಿ ಇಂದಿರಾಗಾಂಧಿ ವಸತಿ ಶಾಲೆಯ ಎಂ. ಅಶ್ವಿನಿ ದ್ವಿತೀಯ ಹಾಗೂ ದೇವರಕೊಟ್ಟ ಮೊರಾರ್ಜಿ ವಸತಿ ಶಾಲೆಯ ಇ. ಪುಷ್ಪಲತಾ ತೃತೀಯ ಸ್ಥಾನ ಪಡೆದರು. ಚಿತ್ರಕಲಾ ಸ್ಪರ್ಧೆಯಲ್ಲಿ ಜೆಜಿ ಹಳ್ಳಿ 10ನೇ ತರಗತಿ ಬಿ. ಶ್ರೀನಿವಾಸ್ ಪ್ರಥಮ, ಪಬ್ಲಿಕ್ ಶಾಲೆಯ 9ನೇ ತರಗತಿ ಆರ್. ಹರ್ಷಾ ದ್ವಿತೀಯ ಹಾಗೂ ರಂಗೇನಹಳ್ಳಿಯ 10ನೇ ತರಗತಿ ಆರ್. ಸ್ಪೂರ್ತಿ ತೃತೀಯ ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ ಪಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜೆ. ದಿನೇಶ್,ಸಿಡಿಪಿಒ ರಾಘವೇಂದ್ರ, ವಾಣಿ ಕಾಲೇಜು ಪ್ರಾಂಶುಪಾಲ ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶಿವಕುಮಾರ್,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ದಲಿತ ಮುಖಂಡರಾದ ಓಂಕಾರಪ್ಪ, ಕೆ ರಾಮಚಂದ್ರಪ್ಪ, ತಿಮ್ಮರಾಜು, ಕೇಶವಮೂರ್ತಿ, ಆರ್ ರಾಘವೇಂದ್ರ, ಹರ್ತಿಕೋಟೆ ದಯಾನಂದ ಹಾಗೂ ವಿವಿಧ ದಲಿತಪರ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

