ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತದ ಅಂತಾರಾಷ್ಟ್ರೀಯ ಗಡಿ ಹಾಗೂ ಎಲ್ಒಸಿಯಲ್ಲಿ ಪಾಕಿಸ್ತಾನದಿಂದ ನಡೆದ ಡ್ರೋನ್ ದಾಳಿಯನ್ನು ಭಾರತೀಯ ಸೇನೆ ಅತ್ಯಂತ ಸಮರ್ಥವಾಗಿ ಹಿಮ್ಮೆಟ್ಟಿಸುವಲ್ಲಿ ಸಫಲವಾಗಿದೆ.
ಪಾಕಿಸ್ತಾನದ ಡ್ರೋನ್ ದಾಳಿಯನ್ನು ಅತ್ಯಂತ ನಿಖರ ಹಾಗೂ ಯಶಸ್ವಿಯಾಗಿ ಹೊಡೆದುರುಳಿಸುವಲ್ಲಿ ದೇಶಿಯ ನಿರ್ಮಿತ ಆಕಾಶ್ ಪ್ರಮುಖ ಕಾರ್ಯ ನಿರ್ವಹಿಸಿದೆ.
ವಾಯು ರಕ್ಷಣಾ ಪಡೆಯ ಆಕಾಶ್ ಕ್ಷಿಪಣಿ ಮೇಲ್ಮೆನಿಂದ ಆಕಾಶಕ್ಕೆ ಚಿಮ್ಮುವ ಸಾಮರ್ಥ್ಯ ಹೊಂದಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿನ ಭಾರತದ ವಿವಿಧ ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಹಾರಿಸಿದ 50ಕ್ಕೂ ಹೆಚ್ಚು ಡ್ರೋನ್ಗಳನ್ನ ಆಕಾಶ್ ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ಹೊಡೆದುರುಳಿಸಿದೆ.
ಪಾಕಿಸ್ತಾನದ ಗಡಿಯಲ್ಲಿ ಭಾರತೀಯ ಸೇನೆ ಹಾಗೂ ವಾಯು ಸೇನೆ, ಶತ್ರುಗಳ ಕ್ಷಿಪಣಿ ತಡೆ ವ್ಯವಸ್ಥೆ ನಿಯೋಜಿಸಿದೆ. ಸ್ವದೇಶಿ ತಂತ್ರಜ್ಞಾನದಿಂದ ತಯಾರು ಮಾಡಲಾಗಿರುವ ಮೇಲ್ಮೈನಿಂದ ಆಕಾಶಕ್ಕೆ ಚಿಮ್ಮುವ ವಾಯು ಸೇನೆಯ ಆಕಾಶ್ ಕ್ಷಿಪಣಿ ಪಾಕಿಸ್ತಾನದ ದಾಳಿಯನ್ನು ಸಮರ್ಥವಾಗಿ ಹಾಗೂ ಪರಿಣಾಕಾರಿಯಾಗಿ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿಆರ್ಡಿಒ ದೇಶೀಯವಾಗಿ ಅಭಿವೃದ್ಧಿಪಡಿಸಿದ ಆಕಾಶ್ ಕ್ಷಿಪಣಿ ವ್ಯವಸ್ಥೆ, ಮಧ್ಯಮ ಶ್ರೇಣಿಯ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಮೊಬೈಲ್, ಅರೆ ಮೊಬೈಲ್ ಮತ್ತು ಸ್ಥಿರ ದುರ್ಬಲ ಪಡೆಗಳಿಂದ ಸಿಡಿಯುವ ಕ್ಷಿಪಣಿಗಳು ಮತ್ತು ಭಾರತದ ವಿವಿಧ ಪ್ರದೇಶಗಳ ಮೇಲೆ ಬರುವ ಯಾವುದೇ ವಾಯು ಬೆದರಿಕೆಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ.
ನೈಜ ಸಮಯದಲ್ಲಿ ಮಲ್ಟಿ ಸೆನ್ಸಾರ್ ಡೇಟಾ ಸಂಸ್ಕರಣೆ ಮಾಡುವ ಮತ್ತು ಬೆದರಿಕೆಗಳನ್ನು ಮೌಲ್ಯಮಾಪನ ನಡೆಸುವ ಮೂಲಕ ಯಾವುದೇ ದಿಕ್ಕಿನಿಂದ ಬರುವ ಕ್ಷಿಪಣಿಗಳು, ಡ್ರೋನ್ ಗಳನ್ನು ಎಲ್ಲ ದಿಕ್ಕುಗಳಿಂದ ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಆಕಾಶ್ ಹೊಂದಿದೆ. ಈ ಆಕಾಶ್ ರಕ್ಷಣಾ ವ್ಯವಸ್ಥೆಯು ವೇಗದ ಗುರಿ ಪತ್ತೆ ಮಾಡಿ ಅದೇ ವೇಗದಲ್ಲಿ ವಿರೋಧಿ ಪಾಳೆಯದ ಯಾವುದೇ ದಾಳಿಯನ್ನು ತಡೆಯುವ ಕೆಲಸ ಮಾಡುತ್ತದೆ. ಕಮಾಂಡ್ ಮಾರ್ಗದರ್ಶನಗಳನ್ನು ಅನುಸರಿಸಿ ಈ ಕ್ಷಿಪಣಿ ಕಾರ್ಯಪ್ರವೃತ್ತವಾಗಲಿದೆ.