ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆದ ಪೈಶಾಚಿಕ ದಾಳಿಯು ಕಣಿವೆ ರಾಜ್ಯದಲ್ಲಿ ಇನ್ನೂ ಅಡಗಿರುವ ಕ್ರೂರತ್ವದ ನೆರಳಿನ ಮತ್ತು ದ್ವೇಷದ ಹೇಯ ದುಃಸ್ವಪ್ನವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಉಗ್ರರ ದಾಳಿಯು ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಅನೇಕ ಕುಟುಂಬಗಳ ಆಧಾರ ಸ್ತಂಭಗಳನ್ನು ಛಿದ್ರಗೊಳಿಸಿದೆ. ಇದು ನವಭಾರತ. ಬಲಿಷ್ಠ ಮತ್ತು ಸುಸ್ಥಿರ ಭಾರತ. ಯಾವ ಬೆದರಿಕೆಗೂ ಮಣಿಯದ ಭಾರತ. ನಾವು ಹೆದರುವುದಿಲ್ಲ, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತೇವೆ. ಈ ದುಷ್ಟದಾಳಿಯನ್ನು ನೆನಪಿಟ್ಟುಕೊಳ್ಳುತ್ತೇವೆ ಹಾಗೂ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ ಎಂದು ನಿಖಿಲ್ ಎಚ್ಚರಿಸಿದ್ದಾರೆ.
ಉಗ್ರರು ದಾಳಿ ನಡೆಸಿ ಭಾರತೀಯರ ಸಹನೆ ಕೆಣಕಿದ್ದಾರೆ. ಈ ದಾಳಿ ಭಾರತೀಯರನ್ನು ಕುಗ್ಗಿಸುತ್ತದೆ ಎಂದು ಉಗ್ರರು ಭಾವಿಸಿದ್ದರು. ಅಲ್ಲದೆ, ನಮ್ಮ ಶಕ್ತಿಯನ್ನು ಕಡಿಮೆ ಅಂದಾಜು ಮಾಡಿದ್ದರು. ಇದೆಲ್ಲವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಕಿರಾತಕರಿಗೆ ತಕ್ಕ ಶಾಸ್ತಿ ಕಾದಿದೆ ಎಂದು ನಿಖಿಲ್ ಕಿಡಿಕಾರಿದ್ದಾರೆ.
ನಾವೆಲ್ಲರೂ ಒಂದು. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೆಸೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ ಹಾಗೂ ಕೇಂದ್ರ ಸರ್ಕಾರದ ದೃಢ ನಿರ್ಧಾರದ ಜತೆ ನಾವೆಲ್ಲರೂ ಇದ್ದೇವೆ ಎಂದು ನಿಖಿಲ್ ತಿಳಿಸಿದ್ದಾರೆ.
ಅಂತಿಮ ನಮನ- ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು, ಕಾಶ್ಮೀರದ ಪಹಲ್ಗಾಮ್‌ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರಾದ ಮತ್ತಿಕೆರೆಯ ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆದರು.
ಬೆಂಗಳೂರಿನ ಮತ್ತಿಕೆರೆಯ ಭರತ್‌ಅವರ ನಿವಾಸಕ್ಕೆ ತೆರಳಿದ ನಿಖಿಲ್ ಅವರು ಅಂತಿಮ ನಮನ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.