ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚೀನಾದ ಕ್ವಿಂಗ್ಡಾವೊದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಯಲ್ಲಿ ಮಂಡಿಸಲಾದ ವರದಿಗೆ ಸಹಿ ಹಾಕದೆ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಭಯೋತ್ಪಾದನೆಯ ವಿರುದ್ಧದ ಭಾರತದ ನಿಲುವನ್ನು ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಈ ಮೂಲಕ ಭಾರತದ ನಿಲುವನ್ನು ದುರ್ಬಲಗೊಳಿಸುವ ಯಾವುದೇ ಚಟುವಟಿಕೆಗಳನ್ನು ಭಾರತ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಮೋದಿ ಸರ್ಕಾರ ಜಾಗತಿಕ ದೇಶಗಳಿಗೆ ರವಾನಿಸಿದೆ.
ಶಾಂಘೈ ಸಹಕಾರ ಸಂಸ್ಥೆಯ ರಕ್ಷಣಾ ಸಚಿವರ ಸಭೆಯಲ್ಲಿ 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ರಕ್ಷಣಾ ಸಚಿವರು ದೃಢವಾಗಿ ಭಾರತದ ನಿಲುವನ್ನು ಮಂಡಿಸಿದ್ದು, ಗಡಿಯಾಚೆಗಿನ ಭಯೋತ್ಪಾದನೆಯನ್ನು ನೀತಿ ಸಾಧನವಾಗಿ ಬಳಸುವ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಗಳನ್ನು ಭಾರತ ಖಂಡಿಸುತ್ತದೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಬಿಜೆಪಿ ತಿಳಿಸಿದೆ.