ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ;
ಅನೇಕ ಅಡ್ಡಿ ಆತಂಕಗಳ ಮಧ್ಯೆಯೂ ಬಡಜನರ ಪರವಾಗಿ ಆಡಳಿತ ನಡೆಸಿದ, ಬಡ, ಮಧ್ಯಮ ವರ್ಗದ ಜನರಿಗೆ ಭೂಮಿ ಹಂಚಿದ ಗಟ್ಟಿಗಿತ್ತಿ ಇಂದಿರಾ ಗಾಂಧಿ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಬಣ್ಣಿಸಿದರು.
ಸೀಬಾರದ ತಮ್ಮ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಇಂದಿರಾ ಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸ್ವಾತಂತ್ರ್ಯ ಚಳವಳಿಯ ನೇತಾರ ಮಹಾತ್ಮ ಗಾಂಧೀಜಿ ಸೇರಿ ಅನೇಕರ ಒಡನಾಟ ಚಿಕ್ಕ ವಯಸ್ಸಿನಿಂದಲೇ ಹೊಂದಿದ್ದ ಇಂದಿರಾ ಗಾಂಧಿ ಜಗತ್ತು ಕಂಡು ಅಪರೂಪದ ಮಹಿಳೆ ಎಂದು ಬಣ್ಣಿಸಿದರು.
ಎಂತಹ ಬೆದರಿಕೆಗೆ ಜಗ್ಗದೆ ಭಯೋತ್ಪಾದನೆ ಮಟ್ಟಹಾಕಲು ಕೈಗೊಂಡ ಕ್ರಮ ಮಾದರಿ ಆಗಿತ್ತು. ಧಾರ್ಮಿಕ ಕೇಂದ್ರವೊಂದರಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರನ್ನು ಮಟ್ಟಹಾಕಲು ಇಂದಿರಾ ಗಾಂಧಿ ಕೈಗೊಂಡ ನಿರ್ಧಾರಕ್ಕೆ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಇಂತಹ ನಡೆಯೇ ಅಂಗ ರಕ್ಷಕನಿಂದಲೇ ಇಂದಿರಾ ಗಾಂಧಿ ಬಲಿಯಾಗಿದ್ದು ದುರಂತ ಎಂದು ಹೇಳಿದರು.
ದೇಶದ ಪ್ರಥಮ ಮಹಿಳಾ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ವೇಳೆ ದೇಶದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದವು. ಅವುಗಳೆಲ್ಲವನ್ನೂ ಬಗೆಹರಿಸಲು ಕೈಗೊಂಡ ಕ್ರಮಗಳು ಮಾದರಿ ಆಗಿದ್ದವು. ಉಳ್ಳವರ ಕೈಯಲ್ಲಿದ್ದ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಿ ಬಡವರಿಗೆ ಆರ್ಥಿಕ ಶಕ್ತಿ ನೀಡಿದರು. ಜೊತೆಗೆ ಉಳುವವನೆ ಭೂ ಒಡೆಯ ಕಾಯ್ದೆ ಜಾರಿಗೊಳಿಸಿ ಬಡ, ಮಧ್ಯಮ ವರ್ಗದ ಪಾಲಿಗೆ ಭೂ ಒಡೆತಿಯಾದರು ಎಂದರು.
ದೇಶಾದ್ಯಂತ ಬಡ, ಮಧ್ಯಮ ವರ್ಗದ ಜನರು ಈಗ ಸ್ವಂತ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದರೇ ಅದು ಇಂದಿರಾ ಗಾಂಧಿ ಕೊಡುಗೆ. ಅವರ ಆಡಳಿತ ಸುವರ್ಣ ಯುಗವಾಗಿತ್ತು. ಅವರನ್ನು ನಾವೆಲ್ಲರೂ ಸ್ಮರಿಸುವ ಜೊತೆಗೆ ಅಂತಹ ಧೈರ್ಯ, ಜನಪರ ಕಾಳಜಿ ಗುಣವನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಬಡವರಿಗೆ ಆರ್ಥಿಕ ಸ್ವತಂತ್ರ ಕೊಡಿಸಿದ ನಾಯಕಿ, ಹೋರಾಟದ ಗುಣ ಹುಟ್ಟಿನಿಂದಲೇ ಬಂದಿದೆ. 17 ವರ್ಷ ವಿಶ್ವವೇ ಮೆಚ್ಚುವ ರೀತಿ ಆಡಳಿತ ನಡೆಸಿ, ಉಕ್ಕಿನ ಮಹಿಳೆ ಎಂಬ ಗೌರವಕ್ಕೆ ಪಾತ್ರವಾದ ಏಕೈಕ ಪ್ರಧಾನಿ. ದುರ್ಬಲರು, ಶೋಷಣೆಗೊಳಪಟ್ಟ ಜನರ ಪರವಾಗಿ ಅನೇಕ ಯೋಜನೆ ಜಾರಿಗೊಳಿಸಿದ ಇಂದಿರಾ ಗಾಂಧಿ ಬಡಜನರ ಪಾಲಿಗೆ ತಾಯಿ ಸ್ಥಾನದಲ್ಲಿ ನಿಂತು ಆಡಳಿತ ನಡೆಸಿದರು ಎಂದು ತಿಳಿಸಿದರು.
ಗರೀಬಿ ಹಠವೋ ಮೂಲಕ ಬಡತನ ನಿರ್ಮೂಲನೆಗೆ ಪಣ ತೊಟ್ಟಿದ್ದ ಇಂದಿರಾ ಗಾಂಧಿ ಕಂಡ ಕನಸನ್ನು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಂಚ ಗ್ಯಾರೆಂಟಿಗಳ ಮೂಲಕ ನನಸಾಗಿಸಿದೆ ಎಂದು ಆಂಜನೇಯ ಹೇಳಿದರು.
17 ವರ್ಷ ಪ್ರಧಾನಿ ಆಗಿದ್ದ ಇಂದಿರಮ್ಮ, ತುರ್ತು ಪರಿಸ್ಥಿತಿ ಜಾರಿಗೊಳಿಸಿ ಆ ಅವಧಿಯಲ್ಲಿ 20 ಅಂಶಗಳ ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ದೇಶದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಎಂತಹ ಟೀಕೆ, ಬೆದರಿಕೆಗಳಿಗೂ ಜಗ್ಗದೆ ಜನಪರ ಆಡಳಿತ ನೀಡಿದ್ದು, ಅನೇಕ ಯುದ್ಧಗಳನ್ನು ಗೆದ್ದ ಕಾರಣ ವಿಶ್ವದ ಉಕ್ಕಿನ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು ಎಂದು ಬಣ್ಣಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡ ಹನುಮಲಿ ಷಣ್ಮುಖಪ್ಪ ಮಾತನಾಡಿ, ಇಂದಿರಾ ಗಾಂಧಿ ಆಡಳಿತ ಸ್ಮರಣೀಯ. ವಿಶ್ವದಲ್ಲಿಯೇ ಅಂತಹ ಆಡಳಿತ ನೀಡಲು ಈಗಲೂ ಯಾರಿಂದಲೂ ಸಾಧ್ಯವಾಗಿಲ್ಲ. ಮಹಿಳೆಯಾಗಿದ್ದರೂ ವಿಶ್ವದ ಗಮನ ಸೆಳೆಯುವ ರೀತಿ ಅಧಿಕಾರ ನಡೆಸಿದ್ದು ಅಚ್ಚರಿ. ಈ ಕಾರಣಕ್ಕೆ ಉಕ್ಕಿನ ಮಹಿಳೆ ಗೌರವ ಲಭಿಸಿದೆ ಎಂದರು.
ಇಂದಿರಾ ಗಾಂಧಿ ಜಗತ್ತು ಕಂಡು ಧೈರ್ಯವಂತ ಮಹಿಳೆ. ಅಧಿಕಾರದ ಮೇಲೆ ಹಿಡಿತ, ಜನಪರ ಆಡಳಿತ, ಬಡಜನರ ಪಾಲಿಗೆ ತಾಯಿ, 20 ಅಂಶಗಳ ಕಾರ್ಯಕ್ರಮ, ಉಳುವವರೆ ಭೂ ಒಡೆಯ, ಬ್ಯಾಂಕ್‍ಗಳ ರಾಷ್ಟ್ರೀಕರಣ ಎಲ್ಲವೂ ಸ್ಮರಣೀಯ ಎಂದು ಹೇಳಿದರು.
ಮುಖಂಡರಾದ ಅನುರಾಧಾ, ರಹಮತ್, ತಾಲೂಕು ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಅನಿಲ್ ಕೋಟಿ, ಕಿಸಾನ್ ಘಟಕದ ಶಿವಲಿಂಗಪ್ಪ, ಚೇತನ್ ಬೋರೇನಹಳ್ಳಿ, ವಸಂತಕುಮಾರ್ ಇತರರಿದ್ದರು.

