ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಕಾಂಗ್ರೆಸ್ನವರು ಮಾತೆತ್ತಿದ್ರೆ ಗ್ಯಾರಂಟಿ ಎಂದು ದಿನ ದೂಡುತ್ತಿದ್ದಾರೆ ಆದರೆ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಗುಂಡ್ಲುಪೇಟೆ ತಾಲೂಕಿನ ಕಲ್ಕಟ್ಟೆ ಕೆರೆ ಆವರಣದಲ್ಲಿ ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜನಸಾಮಾನ್ಯರ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಎಸ್ಇಪಿ ಟಿಎಸ್ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡರೂ, ದಲಿತ ಸಚಿವರು ಯಾರೂ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ದಲಿತ ಸಚಿವರು ಧ್ವನಿ ಎತ್ತುತ್ತಿಲ್ಲ. ಸಿದ್ದರಾಮಯ್ಯ ಏನ್ ಟೆರರಿಸ್ಟಾ? ನ್ಯಾಯ ಕೇಳಿದರೆ ಮೇಲೆ ಬೀಳ್ತಾರಾ? ಎಂದು ವಾಗ್ದಾಳಿ ನಡೆಸಿದ ನಾರಾಯಣಸ್ವಾಮಿ, ಈ ಸರ್ಕಾರ ನವೆಂಬರ್ ಕ್ರಾಂತಿ ವಿಚಾರದಿಂದ ಐಸಿಯುನಲ್ಲಿದೆ ಎಂದು ವ್ಯಂಗ್ಯವಾಡಿದರು.
ಹರಿಯಾಣದಲ್ಲಿ ಮತಗಳ್ಳತನ ಆಗಿದೆ ಎಂಬ ರಾಹುಲ್ ಗಾಂಧಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಚಲವಾದಿ ನಾರಾಯಣಸ್ವಾಮಿ, ರಾಹುಲ್ ಗಾಂಧಿ ದೊಡ್ಡ ಚೋರ್. ಅವರ ಖಾಂದಾನ್ ದೊಡ್ಡ ಚೋರ್. ಡಾ.ಬಿ.ಆರ್.ಅಂಬೇಡ್ಕರ್ 1952ರಲ್ಲಿ ಚುನಾವಣೆಗೆ ನಿಂತಾಗ 14 ಸಾವಿರ ಮತಗಳಿಂದ ಸೋತರು.
ಆ ವೇಳೆ, 74 ಸಾವಿರ ಮತ ತಿರಸ್ಕೃತಗೊಂಡಿತ್ತು. ಸರಿಯಾಗಿ ಚುನಾವಣೆ ಆಗಿದ್ದರೆ ಅಂಬೇಡ್ಕರ್ ಗೆಲ್ಲುತ್ತಿದ್ದರು. ಆದರೆ ಚುನಾವಣೆಯಲ್ಲಿ ಸೋಲಿಸಬೇಕು ಎಂಬುದಕ್ಕೆ ಕುಲಗೆಟ್ಟ ಮತ ಮಾಡಿದ ಕಾರಣಕ್ಕೆ ಅವರು ಚೋರ್. ಅದಾದ ಮೇಲೆ ಇಂದಿರಾ ಗಾಂಧಿ ಚೋರ್, ರಾಜೀವ್ ಗಾಂಧಿ ಚೋರ್, ರಾಹುಲ್ ಗಾಂಧಿಯೂ ಚೋರ್, ಚೋರ್ಗಳೆಲ್ಲ ಸೇರಿ ಇವತ್ತು ಚೋರಿ ಮಾಡಲಾಗದ ಮಷಿನ್ಗಳನ್ನು ಚೋರಿ ಆಗಿದೆ ಅಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಗಾಂಧಿಗಳು ನಕಲಿ ಗಾಂಧಿ ಫ್ಯಾಮಿಲಿ, ನೆಹರೂ ಕಾಲದಲ್ಲಿ ಗಾಂಧಿ ಹೆಸರು ಇರಲಿಲ್ಲ. ಆಮೇಲೆ ಎಲ್ಲಿಂದ ಬಂತು ಇವರಿಗೆ ಗಾಂಧಿ ಹೆಸರು? ಇವರು ನಕಲಿ ಗಾಂಧಿ ಫ್ಯಾಮಿಲಿ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರನ್ನು ಕಾಗೆಗೆ ಹೋಲಿಸಿದ್ದರ ಬಗ್ಗೆ ಮಾತನಾಡಿ, ನಾನು ಹೇಳಿದ್ದು ಸರಿ ಇದೆಯಲ್ಲ?, ಕಪ್ಪು ಕಾಗೆಯಲ್ಲಿ ಯಾರೂ ಕಪ್ಪು ಚುಕ್ಕೆ ಹುಡುಕಲು ಸಾಧ್ಯವಿಲ್ಲ. ಈಗ ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಅವರು ಕಪ್ಪು ಕಾಗೆ ಆಗಿದ್ದಾರೆ. ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಕಾಗೆಗೆ ಹೋಲಿಸಿದ್ದು ಭ್ರಷ್ಟಾಚಾರಕ್ಕೆ ಮಾತ್ರ ಎಂದು ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿ ಆರೋಪ:
ಹರಿಯಾಣದ ಚುನಾವಣಾ ಮತಪಟ್ಟಿಯಲ್ಲಿ ಆಗಿರುವ 25 ಲಕ್ಷ ನಮೂದುಗಳು ನಕಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಈ ಮತ ಕಳವು ನಡೆದಿದೆ ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

