ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಆರ್ ಎಸ್ಎಸ್ ಬ್ಯಾನ್ ಮಾಡಲು ಮೂರು ಬಾರಿ ಪ್ರಯತ್ನ ಮಾಡಿದರೂ ಅವರ ಕೈಯಲ್ಲೇ ಆಗಿಲ್ಲ ಎದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಾಪ್ರಹಾರ ಮಾಡಿದ್ದಾರೆ.
ನಗರದಲ್ಲಿ RSS ಪಥಸಂಚಲನದ ಬಳಿಕ RSS ಬ್ಯಾನ್ ಮಾಡುವ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಆರ್.ಎಸ್ ಎಸ್ ಬ್ಯಾನ್ ಮಾಡಲು ಮೂರು ಬಾರಿ ಪ್ರಯತ್ನ ಮಾಡಿದರೂ ಇಂದಿರಾ ಗಾಂಧಿ ಕೈಯಲ್ಲೇ ಆಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರೇ RSS, ದೇಶದ ಬಹುತೇಕ ರಾಜ್ಯಪಾಲರು RSS. ಇಡೀ ದೇಶವೇ RSS ಇದ್ದಾಗ ಕಾಂಗ್ರೆಸ್ ರಾಷ್ಟ್ರೀಯ ಪಾರ್ಟಿ ಆಗಿ ಉಳಿದಿಲ್ಲ ಎಂದು ಅಶೋಕ್ ಹರಿಹಾಯ್ದರು.
RSS ಬಗ್ಗೆ ರಾಹುಲ್ ಗಾಂಧಿ ಮಾತಾನಾಡುತ್ತಾರೆ ಅಂದರೆ ಅವರಿಗೆ ಭಾರತದ ಇತಿಹಾಸ ಗೊತ್ತಿಲ್ಲ. ಇಂತಹವರಿಗೆ RSS ಬಗ್ಗೆ ಮಾತಾಡುವ ಅರ್ಹತೆ ಇಲ್ಲ. ರಾಷ್ಟ್ರ ಪ್ರೇಮ ಮೂಡಿಸುವ ಸಂಸ್ಥೆ RSS. ಇವರಿಗೆ ರಾಷ್ಟ್ರಪ್ರೇಮ ಇಲ್ಲ, ಕಾಂಗ್ರೆಸ್ಗೆ ವೋಟಿನ ಪ್ರೇಮ ಮಾತ್ರ ಇದೆ ಎಂದು ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ ಮಾಡಿದರು.
ಡಿಕೆಶಿ-ಮುನಿರತ್ನ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಅಶೋಕ್, ಸರ್ಕಾರದ ದುಡ್ಡಿನಲ್ಲಿ ಮಾಡುತ್ತಿರುವ ಕಾರ್ಯಕ್ರಮ ಅದು. ಸರ್ಕಾರಿ ಕಾರ್ಯಕ್ರಮ.
ಸ್ಥಳೀಯ ಶಾಸಕರು, ಸಂಸದರನ್ನು ಕರೆಯದೇ ಡಿಸಿಎಂ ಶಿವಕುಮಾರ್ ಅವಮಾನ ಮಾಡಿದ್ದಾರೆ. ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಶಾಸಕರಿಗೆ ಗೌರವ ಕೊಡದೇ ಅವರ ಮೇಲೆ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿ ಹಾಗೂ ಗೂಂಡಾಗಿರಿ ತೋರಿಸುತ್ತದೆ. ಎರಡು ವರ್ಷ ಮಾತ್ರ ಇರ್ತೀರ ನೀವು, ಯಾಕೆ ಗೂಂಡಾಗಿರಿ ಮಾಡ್ತೀರ?. ಕಾಂಗ್ರೆಸ್ ಔಟ್ ಗೋಯಿಂಗ್ ಪಾರ್ಟಿ ಅಂತ ಜನ ತೀರ್ಮಾನ ಮಾಡಿದ್ದಾರೆ ಎಂದು ಅಶೋಕ್ ವ್ಯಂಗ್ಯವಾಡಿದರು.
ಇಡೀ ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ಬಿಜೆಪಿ ಅಜೆಂಡಾ. ಮುನಿರತ್ನ ಮೇಲೆ ಆಗಿರುವ ಹಲ್ಲೆ ಪ್ರಜಾಪ್ರಭುತ್ವದ ಮೇಲೆ ಆಗಿರುವ ಹಲ್ಲೆ. ನಾವು ಮುನಿರತ್ನಗೆ ಬೆಂಬಲ ಕೊಡ್ತೀವಿ. ಪೊಲೀಸರು ಅವರಿಗೆ ರಕ್ಷಣೆ ಕೊಡಬೇಕು ಎಂದು ವಿಪಕ್ಷ ನಾಯಕರು ಆಗ್ರಹಿಸಿದರು.
ಡಿಕೆಶಿ ಕ್ರಮ ಖಂಡನೀಯ:
ಡಿಕೆಶಿ ಮತ್ತು ಮುನಿರತ್ನ ಜಟಾಪಟಿ ವಿಚಾರವಾಗಿ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್ ಪ್ರತಿಕ್ರಿಯಿಸಿ, ಬೆಂಗಳೂರಿನ ಆರು ಭಾಗಗಳಲ್ಲಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮ ಮಾಡುತ್ತಿದ್ದಾರೆ ಒಳ್ಳೆಯದು. ಈ ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿನಿಗೆ ಅವಮಾನ ಮಾಡುವುದು, ಹಲ್ಲೆ ಮಾಡುವುದು, ತಿರಸ್ಕಾರ ಮಾಡುವುದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಆಹ್ವಾನ ಕೊಡಲ್ಲ. ಈ ರೀತಿ ಕಾರ್ಯಕ್ರಮ ಮಾಡೋದು ಯಾವ ರೀತಿಯಾಗಿ ಪ್ರಜಾಪ್ರಭುತ್ವ ಎತ್ತಿ ಹಿಡಿದ ಹಾಗಾಗುತ್ತದೆ?. ಪ್ರಜಾಪ್ರಭುತ್ವದ ಆಶಯಗಳನ್ನು ಕಡೆಗಣಿಸಿ ತಿರಸ್ಕಾರ ಮಾಡಿದ ಹಾಗೆ. ಈ ರೀತಿ ಅವಮಾನ ಮಾಡೋದು ಯಾವುದೇ ಪ್ರಯತ್ನಗಳು ಆಗಬಾರದು ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಸಡಿಲ ಬಿಟ್ಟು ಅವರು ಮನ ಬಂದಂತೆ ಮಾಡೋಕೆ ಇದು ಅವರ ಕಾರ್ಯಕ್ರಮ ಅಲ್ಲ. ಜನರ ಕಾರ್ಯಕ್ರಮ, ಸರ್ಕಾರದ ಕಾರ್ಯಕ್ರಮ ಇದು. ನಿಮ್ಮ ಕಾರ್ಯಕರ್ತರರಿಗೆ ಸ್ಪಷ್ಟ ಸಂದೇಶ ಕೊಡಬೇಕು ಅಂತ ನಾನು ಉಪಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡುತ್ತೇನೆ. ಇವತ್ತಿನ ಕಾರ್ಯಕ್ರಮ ಮಹತ್ವ ಕಳೆದುಕೊಂಡಿದೆ. ಇಲ್ಲಿ ಬರೀ ವೈಯಕ್ತಿಕ ಪ್ರತಿಷ್ಠೆ, ದ್ವೇಷ, ವೈಮನಸ್ಸು, ವ್ಯತ್ಯಾಸಗಳು ಎದ್ದು ಕಾಣುತ್ತಿವೆ. ನಿಮ್ಮ ನಡೆ ಸರಿಯಲ್ಲ.
ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಾರ್ಟಿ ವರ್ಸಸ್ ಮುನಿರತ್ನ ಬಿಜೆಪಿ ಅಂತ ಆಗುತ್ತೆ. ನಿಮ್ಮ ಕಾರ್ಯಕ್ರಮವನ್ನು ನೀವೇ ಸೋಲಿಸುತ್ತೀರಾ. ನಿಮಗೆ ಸಾಕಷ್ಟು ಅನುಭವ ಇದೆ. ನಿಮ್ಮಂತಹವರಿಂದಲೇ ಈ ರೀತಿ ಎಡವಟ್ಟು ಆದರೆ ಹೇಗೆ. ನಿಮ್ಮ ಕಾರ್ಯಕ್ರಮ ಯಶಸ್ವಿಯಾಗಬೇಕು ಅಂದರೆ ಎಲ್ಲರಿಗೂ ಆಹ್ವಾನ ಕೊಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾರು ಮುನಿರತ್ನ ಅವರ ಮೇಲೆ ಹಲ್ಲೆ ಮಾಡಿದ್ದಾರೆ, ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಉದ್ಧಟತನದ ಪರಮಾವಧಿ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಳೇಗಾರಿಕೆ ಸಂಸ್ಕೃತಿಗೆ ಜಾಗವಿಲ್ಲ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜನಪ್ರತಿನಿಧಿಯನ್ನು ಅಪಮಾನಿಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಶಾಸಕ ಮುನಿರತ್ನ ಅವರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸ್ಥಳೀಯ ಶಾಸಕ ಮುನಿರತ್ನರನ್ನೇ ಆಹ್ವಾನಿಸದೆ, ಶಾಸಕರೊಂದಿಗೆ ಉಡಾಫೆಯಿಂದ ವರ್ತಿಸಿವುದು ಹಾಗೂ ಅವರು ಧರಿಸಿದ್ದ ಆರ್.ಎಸ್.ಎಸ್ ಗಣವೇಶ ಅಪಮಾನಿಸಿರುವುದು ಉದ್ಧಟತನದ ಪರಮಾವಧಿ ಎಂದು ವಿಜಯೇಂದ್ರ ಖಂಡಿಸಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಡೆ ಸರ್ವಾಧಿಕಾರಿತನ ಪ್ರತಿಬಿಂಬಿಸಿದೆ. ಅಧಿಕಾರ ಶಾಶ್ವತವಲ್ಲ, ಅದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ನೀಡುವ ಭಿಕ್ಷೆ ಎಂಬ ಪರಿಜ್ಞಾನವಿಲ್ಲದೆ ನಡೆದುಕೊಳ್ಳುತ್ತಿರುವ ಅವರ ವರ್ತನೆ ಅತ್ಯಂತ ಖಂಡನೀಯ. ನಿಮ್ಮ ನಡೆ, ನುಡಿ, ವರ್ತನೆಯನ್ನು ಜನರು ಗಮನಿಸುತ್ತಿದ್ದಾರೆ, ತಕ್ಕ ಉತ್ತರದ ಪಾಠವನ್ನು ಇಷ್ಟರಲ್ಲೇ ನಿಮಗೆ ಕಲಿಸಲಿದ್ದಾರೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

