ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತ್ ಜೋಡೋ ಭವನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಇಂದಿರಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಗೌರವ ಸಲ್ಲಿಸಿ, ಅಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಡಿಸಿಎಂ ಮಾತನಾಡಿದರು.
ಇಂದಿರಾ ಗಾಂಧಿಯವರು ಬ್ಯಾಂಕ್‌ಗಳ ರಾಷ್ಟ್ರೀಕರಣ, ‘ಉಳುವವನೇ ಹೊಲದೊಡೆಯ‘ ಕಾಯ್ದೆ, ಅಂಗನವಾಡಿ ಯೋಜನೆ, ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆ ಸೇರಿದಂತೆ ಹತ್ತು ಹಲವಾರು ಜನಪರ ಯೋಜನೆಗಳ ಮೂಲಕ ದೇಶದ ಉದ್ಧಾರಕ್ಕಾಗಿ ಕೆಲಸ ಮಾಡಿದ್ದಾರೆ. ಇಂದಿರಾ ಎಂದರೆ ಮಹಾಲಕ್ಷ್ಮಿಯ ಇನ್ನೊಂದು ಹೆಸರು. ಅವರು ಮಹಿಳಾ ಶಕ್ತಿಯ ಚಿಹ್ನೆ, ಈ ಶತಮಾನದ ಮಾದರಿ ನಾಯಕಿ ಮತ್ತು ಈ ದೇಶ ಕಂಡ ಒಬ್ಬ ಅದ್ಭುತ ಪ್ರಧಾನಿ ಎಂದು ಶಿವಕುಮಾರ್ ಹೇಳಿದರು.
ಬಾಂಗ್ಲಾದೇಶವನ್ನು ಹುಟ್ಟು ಹಾಕಿದವರು ಇಂದಿರಾಜಿ. ಅವರ ಅಧಿಕಾರದ ಅವಧಿಯಲ್ಲಿ ನಮ್ಮ ನೆರೆಹೊರೆಯ ದೇಶಗಳು ನಮ್ಮ ಮಿತ್ರರಾಗಿದ್ದವು. ಆದರೆ ಇಂದು, ಅದೇ ದೇಶಗಳು “ನಾವು ನಿಮ್ಮೊಂದಿಗಿದ್ದೇವೆ” ಎಂದು ಹೇಳುತ್ತಿಲ್ಲ. ಈ ಸ್ಥಿತಿಯನ್ನು ಇಂದು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಶಿವಕುಮಾರ್ ತಿಳಿಸಿದರು.
“ಇಂದಿರಾ ಗಾಂಧಿಯವರ ಆಯ್ದ ನುಡಿಮುತ್ತುಗಳು” ಎಂಬ ಪುಸ್ತಕವು ಮೂಲತಃ ಇಂಗ್ಲಿಷ್ ಭಾಷೆಯಲ್ಲಿತ್ತು. ಅದನ್ನು ಓದಿದಾಗ, ಆ ಮಹತ್ವದ ಮಾತುಗಳು ನಮ್ಮ ಕರುನಾಡಿನ ಜನರಿಗೂ ಸಹ ತಲುಪಬೇಕು ಎಂಬ ಉದ್ದೇಶದಿಂದ ನಾನು ಈ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿದ್ದೇನೆ. ಈ ಪುಸ್ತಕವನ್ನು ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕೊಡುಗೆಯಾಗಿ ಸಹ ನೀಡಿದ್ದೆ.
ಈ ಪುಸ್ತಕದಲ್ಲಿ ಸವಾಲುಗಳ ಬಗ್ಗೆ ಇಂದಿರಾ ಗಾಂಧಿಯವರು ಹೇಳಿದ್ದು ಹೀಗೆ: “ಸವಾಲುಗಳು ಅಂದರೆ ನಮ್ಮ ಮನೆ ಬಾಗಿಲಲ್ಲೇ ಕಾದು ಕುಳಿತಿರುತ್ತವೆ. ನಾವೇನೂ ಪರ್ವತಗಳನ್ನು ಏರಬೇಕಾಗಿಲ್ಲ ಅಥವಾ ಸಾಗರಗಳನ್ನು ದಾಟಬೇಕಾಗಿಲ್ಲ. ನಮ್ಮ ಹಳ್ಳಿಗಳಲ್ಲಿ ಬಡತನವಿದೆ. ಪ್ರತಿಯೊಂದು ಮನೆಯಲ್ಲೂ ಜಾತಿಯತೆ ಇದೆ. ನಾವು ಏರಬೇಕಾದುದು ಈ ಪರ್ವತ, ಮತ್ತು ದಾಟಬೇಕಾದುದು ಈ ಸಾಗರ.”

ಅವರು ಮತ್ತೊಂದೆಡೆ, “ಒಬ್ಬ ನಾಯಕನು ತನ್ನ ವಿರೋಧಿಗಳು ತನ್ನನ್ನು ನಿಯಂತ್ರಿಸಲು ಕಲಿಯುವ ಮೊದಲು, ಅವನು ತನ್ನನ್ನು ತಾನು ನಿಯಂತ್ರಿಸಲು ಕಲಿಯಬೇಕು,” ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

