ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಕರ್ನಾಟಕವನ್ನು ʼಜಾಗತಿಕ ತಯಾರಿಕಾ ಕೇಂದ್ರʼವನ್ನಾಗಿ ಅಭಿವೃದ್ಧಿಪಡಿಸಲು ನೀಲನಕ್ಷೆ ತಯಾರಿಸುವ ಚಿಂತನ – ಮಂಥನಕ್ಕೆ ವೇದಿಕೆ ಕಲ್ಪಿಸುವ ಸಲುವಾಗಿ ಒಂದು ದಿನದ ʼಉತ್ಪಾದನಾ ಮಂಥನʼ ಸಮಾವೇಶಕ್ಕೆ ಕೈಗಾರಿಕೆ ಸಚಿವ ಎಂ.ಬಿ ಪಾಲೀಟ್ ಚಾಲನೆ ನೀಡಿ ಮಾತನಾಡಿದರು.
ಉದ್ಯಮದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಉತ್ಪಾದನಾಮಂಥನ ಒಂದು ವಿಶಿಷ್ಟ ವೇದಿಕೆಯೂ ಹೌದು. ತಲಾ GSDP ಹಾಗೂ ಆದಾಯದಲ್ಲಿ ದೇಶದಲ್ಲಿ 2ನೇ, SGST ಸಂಗ್ರಹದಲ್ಲಿ 4ನೇ ಸ್ಥಾನದಲ್ಲಿರುವ ಕರ್ನಾಟಕ ಇಂದು ಏರೋಸ್ಪೇಸ್, ಎಲೆಕ್ಟ್ರಾನಿಕ್ಸ್, EV, R&D ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ನಿಂತಿದೆ ಎಂದು ಸಚಿವರು ತಿಳಿಸಿದರು.
ಈ ಬೆಳವಣಿಗೆ ನಿನ್ನೆಯಿಂದ ಶುರುವಾಗಿಲ್ಲ. ಅದು ನಿಮ್ಮ ಹೂಡಿಕೆ, ನಂಬಿಕೆ ಮತ್ತು ಪಾಲುದಾರಿಕೆಯಿಂದ ಸಾಧ್ಯವಾಗಿದೆ. ಇಂದು ಕೇಳಲು ಅಲ್ಲ, ಕಲಿಯಲು ಸೇರಿದ್ದೇವೆ ನಿಮ್ಮ ಅನುಭವದಿಂದ ನಾವು ಏನು ಉತ್ತಮ ಮಾಡಬಹುದು ಎಂಬುದನ್ನು ಅರಿಯಲು ಬಯಸುತ್ತಿದ್ದೇವೆ. ಉದ್ಯಮದ ಸ್ಥಾಪನೆಯಿಂದ ಆರಂಭಿಸಿ, ಸವಾಲು-ಸಾಧನೆಗಳ ತನಕ ನಿಮ್ಮ ನೈಜ ಅನುಭವ, ದೃಷ್ಟಿಕೋನ ಹಾಗೂ ಒಳನೋಟ ಸರ್ಕಾರಕ್ಕೆ ದಾರಿದೀಪವಾಗಲಿದೆ ಎಂದು ಸಚಿವರು ತಿಳಿಸಿದರು.
ಈ ಪರಿಕಲ್ಪನೆ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲನೆಯ ಪ್ರಯತ್ನವಾಗಿದ್ದು, ಉದ್ಯಮಿಗಳಿಂದ ಹಾಗೂ ತಜ್ಞರಿಂದ ಉತ್ಸಾಹಪೂರಿತ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ. ಇದರಿಂದ ಕರ್ನಾಟಕವನ್ನು ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ರೂಪಿಸಬೇಕೆಂಬ ನಮ್ಮ ಮಹತ್ವಾಕಾಂಕ್ಷೆಗೆ ಹೊಸ ದಿಕ್ಕು ದೊರೆಯಲಿದೆ ಎಂದು ಎಂ.ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.