ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೈಗಾರಿಕೋದ್ಯಮಿಗಳು ಕೇಂದ್ರ ಸರ್ಕಾರದ ಟ್ರೇಡ್ಸ್ ಯೋಜನೆ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಬಿ.ಆನಂದ್ ಹೇಳಿದರು.
ಹೊಸದುರ್ಗದ ಚಂದನ್ ಪ್ಯಾಲೆಸ್ ಹೋಟೆಲ್‍ನಲ್ಲಿ ಬುಧವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆಸಿಟಿಯು ಟೆಕ್ಸಾಕ್ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಕೇಂದ್ರ ಸರ್ಕಾರದ ಆರ್.ಎ.ಎಂ.ಪಿ ಯೋಜನೆಯಡಿ ಒಂದು ದಿನದ ಟ್ರೇಡ್ಸ್ ಯೋಜನೆ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಟ್ರೇಡ್ಸ್ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಕೈಗಾರಿಕೋದ್ಯಮಿಗಳು ರಪ್ತು ಅಥವಾ ಉತ್ಪನ್ನಗಳನ್ನು ವಹಿವಾಟು ಮಾಡುವಾಗ ಅನುಕೂಲವಾಗುವ ಸುಗಮ ಪಾವತಿಯ ವಿಧಾನವಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಇಲಾಖೆಯಿಂದ ಏರ್ಪಡಿಸಲಾಗುತ್ತಿದೆ. ಎಲ್ಲಾ ಎಂ.ಎಸ್.ಎಂ.ಇ. ಗಳು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಸಣ್ಣ ಕೈಗಾರಿಕೆಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೀತಾರಾಮ ಮಾತನಾಡಿ, ಕೈಗಾರಿಕೋದ್ಯಮಿಗಳು ಸಾಮಾನ್ಯವಾಗಿ ಹೊಸ ಹೊಸ ಕೈಗಾರಿಕೆಗಳ ಯೋಜನೆಯನ್ನು ಅರಿತುಕೊಳ್ಳಲು ಅಧಿಕಾರಿಗಳನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿಯಲ್ಲಿ, ಇಂದು ಅಧಿಕಾರಿಗಳೇ ಕೈಗಾರಿಕೋದ್ಯಮಿಗಳನ್ನು ಹುಡುಕಿಕೊಂಡು ಬಂದಿದ್ದಾರೆ. ಇಂತಹ ಅವಕಾಶವನ್ನು ತಾವು ಕಳೆದುಕೊಳ್ಳದೇ ಈ ಯೋಜನೆಗಳ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕೈಗಾರಿಕೋದ್ಯಮಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕೆಗಳ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಎಂ.ಆರ್. ಚಂದ್ರಶೇಖರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಬಿ.ಕೆ. ಮಂಜುನಾಥಸ್ವಾಮಿ ಮತ್ತಿತರರು ಇದ್ದರು.

