ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತೆರಿಗೆ ಹಂಚಿಕೆಯಲ್ಲಿ ಮತ್ತೆ ಅನ್ಯಾಯ. ನಮ್ಮ ನ್ಯಾಯಯುತ ತೆರಿಗೆ ಪಾಲು ನಮಗೆ ನೀಡಿ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಆಗ್ರಹ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶಕ್ಕೆ 18,227 ಕೋಟಿ ಮತ್ತು ಬಿಹಾರಕ್ಕೆ 10,219 ಕೋಟಿ ತೆರಿಗೆ ಪಾಲು ನೀಡಿದೆ. ಕರ್ನಾಟಕಕ್ಕೆ 3,705 ಕೋಟಿ ಮಾತ್ರ ಹಂಚಿಕೆ ಮಾಡಿದೆ.
ಇದು ದೇಶದ ಜಿಡಿಪಿಗೆ, ತೆರಿಗೆ ಸಂಗ್ರಹಕ್ಕೆ, ಆವಿಷ್ಕಾರಕ್ಕೆ, ಸಾಫ್ಟ್‌ವೇರ್‌ಕ್ಷೇತ್ರಕ್ಕೆ ಅತಿ ಹೆಚ್ಚು ಕೊಡುಗೆ ನೀಡಿ ದೇಶದ ಆರ್ಥಿಕತೆಗೆ ಹೆಚ್ಚಿನ ಬಲ ತುಂಬುತ್ತಿರುವ ಕರ್ನಾಟಕಕ್ಕೆ ಕೇಂದ್ರದ ಬಿಜೆಪಿ ಸರ್ಕಾರವು ಮಾಡುತ್ತಿರುವ ಅನ್ಯಾಯವಲ್ಲದೆ ಮತ್ತಿನ್ನೇನು? ಎಂದು ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರದ ನೀತಿಗಳ ಫಲವಾಗಿ GST ಸಂಗ್ರಹದಲ್ಲಿ ದೇಶದಲ್ಲಿಯೇ ಕರ್ನಾಟಕ 2ನೇ ಸ್ಥಾನದಲ್ಲಿದೆ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕಿ ಮೊದಲನೇ ಸ್ಥಾನಕ್ಕೆ ಏರಿದೆ.
ಆದರೆ ಕರ್ನಾಟಕದ ದುಡಿಮೆ ಮಾತ್ರ ಬೇರೆಯವರ ಪಾಲಾಗುತ್ತಿದೆ! ಅತಿ ಹೆಚ್ಚು ಆದಾಯ ತಂದುಕೊಡುತ್ತಿರುವ ರಾಜ್ಯವು ನ್ಯಾಯಯುತ ತೆರಿಗೆ ಪಾಲು ಪಡೆಯುಲು ಅರ್ಹವಲ್ಲವೆ? ಎಂದು ಎಂ.ಬಿ ಪಾಟೀಲ್ ಪ್ರಶ್ನಿಸಿದ್ದಾರೆ.

