ಚಂದ್ರವಳ್ಳಿ ನ್ಯೂಸ್, ನಾಯಕನಹಟ್ಟಿ ;
ಪಟ್ಟಣ ಪಂಚಾಯಿತಿಗೆ ಮಾದಿಗ ಸಮುದಾಯಕ್ಕೆ ಪ್ರಾತಿನಿಧ್ಯಕೊಡದೇ ವಂಚಸುತ್ತಿರುವ ಕ್ಷೇತ್ರದ ಶಾಸಕ ಎನ್.ವೈ ಗೋಪಾಲಕೃಷ್ಣ ವಿರುದ್ಧ ರಾಷ್ಟ್ರೀಯ ಅಹಿಂದ ಸಂಘಟನೆಯ ಪರಿಶಿಷ್ಟ ವರ್ಗಗಳ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಇ.ನಾಗರಾಜ ಮೀಸೆ ಅಸಮಧಾನ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ದಿನಗಳ ಹಿಂದೆ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗೆ ಸರ್ಕಾರದಿಂದ ಮೂವರನ್ನು ನಾಮನಿರ್ದೇಶನ ಸದಸ್ಯರನ್ನು ಮೊಳಕಾಲ್ಮುರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಶಿಫಾರಸಿನ ಮೇರೆಗೆ ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ ಶಾಸಕರು ವಾಲ್ಮೀಕಿ ನಾಯಕ ಸಮುದಾಯದ ಒಬ್ಬರು, ಮುಸ್ಲಿಂ ಹಾಗೂ ಕುರುಬ ಸಮುದಾಯದ ಒಟ್ಟು ಮೂವರನ್ನು ನಾಮನಿರ್ದೇಶನ ಮಾಡಲು ಶಿಫಾರಸು ಮಾಡಿದ್ದಾರೆ.
ನಾಯಕನಹಟ್ಟಿ ಪ.ಪಂ.ವ್ಯಾಪ್ತಿಯಲ್ಲಿ ಎರಡನೇ ಅತೀ ದೊಡ್ಡ ಸಮುದಾಯವಾದ ಮಾದಿಗ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡದೇ ಶಾಸಕರು ಸ್ವಜನ ಪಕ್ಷಪಾತ ಹಾಗೂ ಮಾದಿಗರ ವಿರೋಧಿ ಮನಸ್ಥಿತಿ ತೋರಿಸಿದ್ದಾರೆ. ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯದ ಮತಗಳನ್ನು ಪಡೆದಿದ್ದಾರೆ. ಈಗ ಸಮುದಾಯಕ್ಕೆ ಸ್ಥಳೀಯವಾಗಿ ರಾಜಕೀಯ ಪ್ರಾತಿನಿಧ್ಯ ಇಲ್ಲವಾಗಿಸುವ ಹುನ್ನಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿರುವ ಸರ್ಕಾರಿ ಶಾಲೆಗೆ ಕೊಠಡಿಗಳನ್ನು ಮಂಜೂರು ಮಾಡುವಂತೆ ಹಲವು ಬಾರಿ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾದಿಗರ ಹಟ್ಟಿಗಳಿಗೆ ಭೇಟಿ ನೀಡದ ಶಾಸಕರು-
ಮುಖಂಡ ಟಿ.ಬಸವರಾಜ ಮಾತನಾಡಿ, ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಶಾಸಕರಾದಾಗಿನಿಂದಲೂ ಪಪಂ ವ್ಯಾಪ್ತಿಯ ಯಾವೊಂದು ಕಾಲೋನಿಗೂ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿಲ್ಲ. ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಮಾದಿಗರು ನೆನಪಿಗೆ ಬರುತ್ತಾರೆ. ಆದರೆ ರಾಜಕೀಯ ಸ್ಥಾನಮಾನ ಕಲ್ಪಿಸುವಾಗ ಮಾತ್ರ ಮಾದಿಗ ಸಮುದಾಯವನ್ನು ಸಂಪೂರ್ಣ ಕಡೆಗಣಿಸುತ್ತಿದ್ದಾರೆ. ಹಿಂದೆಯೂ ಮಾದಿಗರನ್ನ ನಿರ್ಲಕ್ಷಿಸಿ ಅನ್ಯಾಯ ಎಸಗಲಾಗಿತ್ತು. ಈಗ ಆ ಕೆಟ್ಟ ಪರಂಪರೆಯನ್ನ ಶಾಸಕರು ಮುಂದುವರೆಸಿದ್ದಾರೆ ಎಂದು ಅಸಮಧಾನ ಹೊರಹಾಕಿದರು.
ಮುಖಂಡ ಟಿ.ರಮೇಶ್ ಮಾತನಾಡಿ, ವಿಧಾನಸಭಾ ಚುನಾವಣೆಯ ಮತಯಾಚನೆಯ ಸಂದರ್ಭದಲ್ಲಿ ಮಾದಿಗರ ಬಳಿ ಬಂದು ಮರುಳಿನ ಮಾತಾಡಿ ಮತ ಪಡೆದು ನಂತರ ಎಲ್ಲ ರಂಗಗಳಲ್ಲೂ ಮಾದಿಗರ ಪ್ರಾತಿನಿಧ್ಯವನ್ನ ಇಲ್ಲವಾಗಿಸುವ ಎನ್. ವೈ.ಗೋಪಾಲಕೃಷ್ಣರ ನಡೆಗೆ ಸಮುದಾಯ ಮುಂದಿನ ಬಾರಿ ತಕ್ಕ ಪಾಠ ಕಲಿಸುವ ಸನ್ನಿವೇಶವನ್ನ ಸ್ವಯಂ ಶಾಸಕರೇ ನಿರ್ಮಾಣ ಮಾಡುತ್ತಿದ್ದಾರೆ.
ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಪಂ ವ್ಯಾಪ್ತಿಯ ಪ್ರತಿ ಬೂತ್‍ಗಳಲ್ಲಿಯೂ ಹೆಚ್ಚಿನ ಮತ ಕಾಂಗ್ರೆಸ್ ಪಕ್ಷಕ್ಕೆ ಬಿದ್ದಿವೆ. ಮಾದಿಗರು ನಿರ್ಣಾಯಕವಾಗಿ ಕಾಂಗ್ರೆಸ್ಸನ್ನ ಕೈ ಹಿಡಿದಿದ್ದಾರೆ. ಆದರೆ, ಶಾಸಕ ಎನ್.ವೈ.ಗೋಪಾಲಕೃಷ್ಣರು ಮಾತ್ರ ಪ್ರಾತಿನಿಧ್ಯದ ವಿಷಯ ಬಂದಾಗ ಮಾದಿಗ ಸಮುದಾಯಕ್ಕೆ ಮಣೆ ಹಾಕದಿರುವುದು ಈ ಸಮುದಾಯವನ್ನ ರಾಜಕೀಯವಾಗಿ ಶೋಷಿಸುವ ಅವರ ಮನಸ್ಥಿತಿಯನ್ನ ಬಯಲು ಮಾಡುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ಕರೆಬೋರಯ್ಯರ ತಿಪ್ಪೇಸ್ವಾಮಿ, ಪ್ರಕಾಶ್, ಟಿ.ರಮೇಶ್ ಉಪಸ್ಥಿತರಿದ್ದರು.

