ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ದಲಿತ ಸಮುದಾಯಕ್ಕೆ ಒಳ ಮೀಸಲಾತಿ ಜಾರಿ ಮಾಡಲಾಗಿದೆ.
ಎಲ್ಲಾ ಪರಿಶಿಷ್ಟ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕವಾಗಿ ಒಳ ಮೀಸಲಾತಿ ಜಾರಿಗೊಳಿಸುವ ತೀರ್ಮಾನವಾಗಿದ್ದು ಆಗಸ್ಟ್ 20ರ ಬುಧವಾರ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಲಿದ್ದಾರೆ.
ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಲ್ಲಿ ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆ ಗುರುತಿಸಿ 5 ವಿಂಗಡಣೆ ಮಾಡಲಾಗಿತ್ತು. ಆದರೆ ಸರ್ಕಾರ ಇದನ್ನು 3 ಗುಂಪುಗಳಾಗಿ ವರ್ಗೀಕರಣ ಮಾಡಿದೆ.
ಅದರಂತೆ 18 ಜಾತಿಗಳಿರುವ ಎಡಗೈ ಸಮುದಾಯಕ್ಕೆ ಶೇಕಡ 6ರಷ್ಟು ಹಾಗೂ 20 ಜಾತಿಗಳಿರುವ ಬಲಗೈ ಸಮುದಾಯಕ್ಕೆ ಶೇಕಡ 6ರಷ್ಟು ಮೀಸಲಾತಿ ನೀಡಲಾಗಿದೆ. 63 ಜಾತಿಗಳಿರುವ ಇತರ ಸಮುದಾಯಕ್ಕೆ ಶೇಕಡ 5ರಷ್ಟು ಮೀಸಲಾತಿ ನೀಡಲು ಸಚಿವ ಸಂಪುಟ ಸಭೆ ಬಹುತೇಕ ತೀರ್ಮಾನಿಸಿದೆ. ಬುಧವಾರ ಸಂಪುಟದಲ್ಲಿ ಚರ್ಚಿಸಿ ಆದೇಶ ಹೊರಡಿಸಲಾಗುತ್ತದೆ.
ಅಪಸ್ವರ-ಒಳ ಮೀಸಲಾತಿ ಜಾರಿ ಹೋರಾಟಗಾರರು ಸರ್ಕಾರದ ತೀರ್ಮಾನಕ್ಕೆ ಅಪಸ್ವರ ಎತ್ತಿದ್ದಾರೆ. ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಯಲ್ಲಿ ಮಾದಿಗ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಹೊಲೆಯ ಸಮಾಜಕ್ಕೆ ಮತ್ತೇ ಶೇ.1ರಷ್ಟು ಮೀಸಲಾತಿ ಜಾಸ್ತಿ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನ ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ.

