ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಊಟ ಸಿದ್ಧವಾಗುತ್ತಿದೆ. ೩೫ ವರ್ಷ ಹಸಿವು ಅನುಭವಿಸಿದವರು ಒಂದು ತಿಂಗಳು ಕಾಯಲು ಏನು ಕಷ್ಡ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಒಳಮೀಸಲಾತಿ ಹೋರಾಟಕ್ಕೆ ಧೀರ್ಘ ಇತಿಹಾಸ ಇದೆ. ಈಗ ಸಿಎಂ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೊಳಿಸಲು ಬದ್ಧರಾಗಿದ್ದು, ಎಲ್ಲ ರೀತಿಯ ಕ್ರಮಕೈಗೊಂಡಿದ್ದಾರೆ. ನಾವು ಬೇಡವೆಂದರು ಒಳಮೀಸಲಾತಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ ಎಂದರು.
ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಸಿದ್ದರಾಮಯ್ಯ ಅವರ ಕೈ ಸೇರುತ್ತಿದ್ದಂತೆ ಜಾರಿಗೊಳಿಸಲಿದ್ದಾರೆ. ಇಂತಹ ಸಂದರ್ಭ ಅನಗತ್ಯ, ರಾಜಕೀಯ ಪ್ರೇರಿತ ಹೇಳಿಕೆಗಳು ಸಲ್ಲದು ಎಂದು ತಿಳಿಸಿದರು.
ಈಗಾಗಲೇ ಮೂರೂವರೆ ದಶಕಗಳಿಂದ ಹೋರಾಟ ನಡೆದಿದೆ. ಆಂಧ್ರದಲ್ಲಿ ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ ನಡೆದ ಹೋರಾಟ ಕರ್ನಾಟಕಕ್ಕೆ ವಿಸ್ತಾರವಾಯಿತು. ಹರಿಯಾಣ, ಆಂಧ್ರ, ತೆಲಂಗಾಣದಲ್ಲಿ ಜಾರಿಯಾಗಿದೆ.
ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಬದ್ಧ ಎಂದು ನಮ್ಮ ಸರ್ಕಾರ ಹೇಳಿತ್ತು. ಅಕ್ಟೋಬರ್ ೨೨ ರಂದು ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ನ್ಯಾ.ನಾಗಮೋಹನ್ ದಾಸ್ ಆಯೋಗ ೨೦೧೧ ಗಣತಿ, ಸದಾಶಿವ ಆಯೋಗ, ಮಾಧುಸ್ವಾಮಿ ವರದಿ ಗಮನಿಸಿದಾಗ ಆದಿ ಕರ್ನಾಟಕ, ಆದಿಆಂದ್ರ ವರ್ಗದ ಗೊಂದಲ ಉಂಟಾಗಿದ್ದರಿಂದ ಜನಸಂಖ್ಯೆ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಸಮೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿ ಸಮೀಕ್ಷೆ ನಡೆಸಿದೆ ಎಂದರು.
ಈಗಾಗಲೇ ನಾಗಮೋಹನ್ ದಾಸ್ ಅವರು ಮೇ.೫ ರಂದು ಮೊಬೈಲ್ ಆಪ್ ಬಳಸಿ ಸಮೀಕ್ಷೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಆಗಿಲ್ಲ ಎಂಬ ಕಾರಣಕ್ಕೆ ಜೂನ್ ೬ ರವರೆಗೆ ಸಮೀಕ್ಷೆ ಆಗಿದೆ. ನಿಖರವಾದ ಅಂಕಿ ಅಂಶಗಳು ಬರಬೇಕು. ಮುಂದೆ ಕೋರ್ಟ್‌ನಲ್ಲಿ ಪ್ರಶ್ನೆ ಮಾಡುವಂತೆ ಆಗಬಾರದು ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ಪ್ರಕ್ರಿಯೆ ಆಗಿದೆ.
ಆದರೆ, ಕೆಲ ಹೋರಾಟಗಾರರು, ಬಿಜೆಪಿಯವರು ವಿಳಂಬ ಆಗಿದೆ ಎಂದು ದೂರುತ್ತಿದ್ದಾರೆ. ಇದು ಸಮಂಜಸವಲ್ಲ ೩೫ ವರ್ಷ ಕಾದಿದ್ದೇವೆ. ಸ್ವಲ್ಪ ದಿನ ಕಾಯಬೇಕು. ಪ್ರತಿಭಟನೆ, ಬಂದ್ ಸಲ್ಲದು. ಇದನ್ನು ಕೈಬಿಡಿ.
ಬೇಗ ಅನುಷ್ಠಾನ ಮಾಡಿ ಎಂದು ರಾಹುಲ್ ಗಾಂಧಿ ಅವರೇ ಹೇಳಿದ್ದಾರೆ. ಅಲ್ಲಿಗೆ ಹೋಗಿ ಮುತ್ತಿಗೆ ಹಾಕುವುದರಲ್ಲಿ ಅರ್ಥ ಇಲ್ಲ. ಸರ್ಕಾರಕ್ಕೆ ಮುಜುಗರ ಮಾಡುವುದು ಬೇಡ. ಒಂದು ತಿಂಗಳು ಕಾಯೋಣ. ಆಗಸ್ಟ್ ತಿಂಗಳಲ್ಲಿ ಜಾರಿ ಆಗಲಿದೆ ಎಂದು ಹೇಳಿದರು.
ಒಂಬತ್ತು ತಿಂಗಳ ಕಾಲ ಎಲ್ಲ ಹುದ್ದೆಗಳನ್ನು ಭರ್ತಿ ಮಾಡದೆ ಖಾಲಿ ಇಡಲಾಗಿದೆ. ಸರ್ಕಾರಿ ಹುದ್ದೆಗಳ ವಯೊಮಿತಿ ಹೆಚ್ಚುವರಿ ಕೊಡುವುದು ಸರ್ಕಾರದ ಜವಾಬ್ದಾರಿ. ಆಗಸ್ಟ್ ಸ್ವತಂತ್ರ ಪಡೆದ ತಿಂಗಳು. ಒಳಮೀಸಲಾತಿ ವಂಚಿತವಾಗಿದ್ದ ಮಾದಿಗ ಸಮುದಾಯಕ್ಕೆ ಎಲ್ಲ ರೀತಿಯ ಸೌಲಭ್ಯಗಳ ಸುರಿಮಳೆ ಆಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶರಣಪ್ಪ, ರವೀಂದ್ರ, ಮುಖಂಡ ಲಿಂಗರಾಜು ಉಪಸ್ಥಿತರಿದ್ದರು.