ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನ್ಯಾ.ಹೆಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿ ತಾರತಮ್ಯ ಮತ್ತು ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದು ಈ ವರದಿ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ವಿರೋಧಿಸಿದರು.
ಭೋವಿ ಗುರುಪೀಠದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ೧೫ ವರ್ಷದಲ್ಲಿ ಭೋವಿ ಜನಾಂಗದ ಜನಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಕೇವಲ ಶೇಕಡ ೧ ರಷ್ಟು ಹೆಚ್ಚಳ ತೋರಿಸಲಾಗಿದೆ, ಆದರೆ ಈ ಸಮುದಾಯ ೧೫%ಕ್ಕಿಂತ ಹೆಚ್ಚಾಗಿರುತ್ತದೆ. ಅರೆ ಅಲೆಮಾರಿ ಸಮುದಾಯವಾಗಿರುವುದರಿಂದ ಸಮೀಕ್ಷೆ ಮಾಡುವವರು ಅವರ ಬಳಿ ಹೋಗಿರುವುದಿಲ್ಲ.
ಆಯೋಗದ ೨೬ ಮಾನದಂಡಗಳಲ್ಲಿ ೧೯ ಮಾನದಂಡಗಳು ಈ ಸಮುದಾಯ ಅತೀ ಹಿಂದುಳಿವಿಕೆಯಲ್ಲಿದೆ ಎಂಬ ವರದಿ ಇದ್ದರೂ ಸಹ ಮುಂದುವರೆದ ಸಮುದಾಯದ ಪಟ್ಟಿಯಲ್ಲಿ ಸೇರಿಸಿದ್ದಾರೆ ಎಂದು ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು.
ಸೌಲಭ್ಯಗಳು ಕಲ್ಪಿಸುವ ಉದ್ದೇಶದಿಂದ ಉಪ ವರ್ಗೀಕರಣದಲ್ಲಿ ಭೋವಿ ಸಮುದಾಯವನ್ನಷ್ಟೇ ವರ್ಗೀಕರಿಸಬೇಕು, ಭೋವಿ ಸಮುದಾಯಕ್ಕೆ ಯಾವುದೆ ಸಮುದಾಯದ ಜೊತೆ ಸೇರಿಸದೇ ಪ್ರತ್ಯೇಕವಾಗಿ ಅವಕಾಶ ಕಲ್ಪಿಸಲು ಸ್ವಾಮೀಜಿ ಆಗ್ರಹಿಸಿದರು.
ಮೀಸಲಾತಿ ಜಾರಿಯಲ್ಲಿದ್ದರು ಸಹ ಇದರ ಸವಲತ್ತು ಈ ಜನ ವರ್ಗಕ್ಕೆ ತಲುಪೇ ಇಲ್ಲ. ಪಟ್ಟಿಯಲ್ಲಿ ಓಡ್, ಒಡೇ, ಕಲ್ಲು ವಡ್ಡರ್, ಮಣ್ಣು ಒಡ್ಡರ್ ಏಕೆ ಪ್ರಸ್ತಾಪವಾಗಿಲ್ಲ. ಆಳವಾದ ಅಧ್ಯಯನದ ಆಧಾರವಾಗಬೇಕು ಎಂದು ನಡೆದಿರುವ ಗಣತಿ ಭೋವಿ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಅವರು ದೂರದರು.
ಭೋವಿ ಸಮುದಾಯ ಸ್ವಂತ ಮನೆ ಮತ್ತು ಗುಡಿಸಲು ಇಲ್ಲದೇ ಊರೂರು ಅಲೆಯುವ ಕುಟುಂಬಗಳನ್ನ ಗಣತಿಯಲ್ಲಿ ಕೈಬಿಡಲಾಗಿದೆ. ಸಮೀಕ್ಷಾ ಕಾರ್ಯದಲ್ಲಿ ಭೋವಿ ವಡ್ಡರ ಮಣ್ಣು ಮತ್ತು ಕಲ್ಲಿನ ಕೆಲಸವನ್ನೇ ಕೈಬಿಡಲಾಗಿದೆ. ಈ ದುರುದ್ದೇಶ ಕುರಿತು ಸರ್ಕಾರವೇ ಉತ್ತರಿಸಬೇಕು ಎಂದು ಇಮ್ಮಡಿ ಶ್ರೀಗಳು ಆಗ್ರಹ ಮಾಡಿದರು.
ಅವಿದ್ಯಾವಂತ, ಅನಾಗರೀಕ, ಶ್ರಮಿಕರಾದ ಭೋವಿ ವಡ್ಡರನ್ನು ಅಧ್ಯಯನಕ್ಕೆ ಆಯೋಗ ಏಕೆ ಒಳಪಡಿಸಲಿಲ್ಲ? ಅವರಿಗೆ ಸ್ವಂತ ಮನೆ, ಗುಡಿಸಲು, ಪಡಿತರ ಚೀಟಿ, ಇದೆಯೇ ಎಂದು ಯಾರು ಪರಿಶೀಲಿಸಬೇಕು? ಆಯೋಗದ ವರದಿಯ ಭಾಗ-೫, ಪುಟ-೧೬೩, ಕೋಷ್ಟಕ-೬ ರಲ್ಲಿ ರಾಜ್ಯದ ೨೪ ವಿಶ್ವವಿದ್ಯಾಲಯಗಳ ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳ ದಾಖಲಾತಿಯ ವಿವರವನ್ನು ನೀಡಲಾಗಿದೆ.
ಈ ವರದಿಯಲ್ಲಿ ದಾವಣಗೆರೆ ವಿ.ವಿ ಒಂದನ್ನು ಗಮನಿಸಿದರೆ ವಲಯ ಮತ್ತು ಮಾದಿಗ ಸಮುದಾಯದ ವಿದ್ಯಾರ್ಥಿಗಳನ್ನು ಶೂನ್ಯ ಎಂದು ತೋರಿಸಿದ್ದಾರೆ. ಹಾಗಾಗಿ ಈ ಅಂಶವನ್ನು ಗಮನಿಸಿದರೆ ಇನ್ನೂ ಈ ವರದಿಯಲ್ಲಿ ತಿಳಿಸಿರುವ ಅಂಕಿ ಅಂಶಗಳು ಎಷ್ಟು ವಾಸ್ತವಕ್ಕೆ ದೂರವಾಗಿವೆ ಎಂಬುದನ್ನು ಅನುಮಾನಕ್ಕೀಡುಮಾಡುತ್ತದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ರಾಜಕೀಯ ಪ್ರಾತಿನಿಧ್ಯ ವರ್ಗೀಕರಿಸಿದಾಗ ಭೋವಿ ಜನಾಂಗ ೫ನೇ ಸ್ಥಾನದಲ್ಲಿದೆ. ಪರಿಶಿಷ್ಟ ಜಾತಿಯ ಒಳ ಜಾತಿಗಳ ಫಲಾನುಭವಿಗಳನ್ನು ವರ್ಗೀಕರಿಸಿದಾಗ ಭೋವಿ ವಡ್ಡರು ೭ನೇ ಸ್ಥಾನದಲ್ಲಿದ್ದಾರೆ ಎಂದು ನ್ಯಾ. ನಾಗಮೋಹನ್‌ದಾಸ್ ರವರ ವರದಿಯಲ್ಲೇ ತಿಳಿಸಿದ್ದಾರೆ. ಹೀಗಿದ್ದರೂ ಈ ಸಮುದಾಯಕ್ಕೆ ಸಿಗಬೇಕಾದ ಸ್ಥಾನಮಾನ ನೀಡುವಲ್ಲಿ ಆಯೋಗ ಕಡೆಗಣಿಸಿದೆ ಎಂದು ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಎಸ್.ಸಿ ಅಂಕಿ-ಅಂಶಗಳನ್ನು ಸಂಗ್ರಹಿಸಲು ಸರಿಯಾದ ಸಮೀಕ್ಷಾ ನಮೂನೆ ಸಿದ್ಧಪಡಿಸಿಲ್ಲ ಮತ್ತು ಮಾತೃ ಜಾತಿಗಳನ್ನು ಸೂಚಿಸುವ ವಿಧಾನದಲ್ಲಿ ಆಯೋಗ ವಿಫಲವಾಗಿದೆ ಎಂದು ಅವರು ದೂರಿದರು.
ಸುಪ್ರೀಂ ಕೋರ್ಟ್ ತಿಳಿಸಿರುವಂತೆ ಅತೀ ಹಿಂದುಳಿದ ಗುಂಪನ್ನು ವರ್ಗೀಕರಿಸಿ ಆ ಗುಂಪಿಗೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಹೇಳಿದ್ದರೂ ಸಹ ಅನಗತ್ಯವಾಗಿ ಗೊಂದಲ ಉಂಟುಮಾಡುವ ಉದ್ದೇಶದಿಂದ ಮತ್ತು ರಾಜಕೀಯ ಪ್ರೇರಿತವಾಗಿ ಸಮುದಾಯಗಳ ಐಕ್ಯತೆ ಹೊಡೆಯುತ್ತಿರುವುದು ಖಂಡನೀಯ ಎಂದು ಸಿದ್ದರಾಮೇಶ್ವರ ಸ್ವಾಮೀಜಿಗಳು ಗುಡುಗಿದರು.

