ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕ್ರೀಡೆಯಿಂದ ಸ್ಫೂರ್ತಿ, ಕ್ರೀಡೆಯಿಂದ ಶಕ್ತಿ, ಕ್ರೀಡೆಯಿಂದಲೇ ಸಂಸ್ಕಾರ! ನಮ್ಮ ಯುವಜನತೆಯ ಶಿಸ್ತು ಮತ್ತು ಕ್ರೀಡಾ ಮನೋಭಾವ, ಸಮರ್ಥ, ವಿಕಸಿತ ಭಾರತದ ನಿರ್ಮಾಣಕ್ಕೆ ಸದೃಢ ಅಡಿಪಾಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ರವರು ಹೇಳಿದಂತೆ, ‘ಸಂಸದ್ ಖೇಲ್ ಮಹೋತ್ಸವ‘ ದೇಶಾದ್ಯಂತ ನಮ್ಮ ಲಕ್ಷಾಂತರ ಪ್ರತಿಭಾನ್ವಿತ ಯುವ ಕ್ರೀಡಾಪಟುಗಳನ್ನು ಗುರುತಿಸುವ ಮಹತ್ವಪೂರ್ಣ ವೇದಿಕೆಯಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ನಮ್ಮ ಅಜ್ಞಾತ ಕ್ರೀಡಾ ಪ್ರತಿಭೆಗಳಿಗೆ ರಾಷ್ಟ್ರಮಟ್ಟದ ವೇದಿಕೆ ಕಲ್ಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ಸಂಸದ್ ಖೇಲ್ ಮಹೋತ್ಸವ‘ದಲ್ಲಿ ಈ ಬಾರಿ ಸುಮಾರು ಒಂದು ಕೋಟಿಗೂ ಹೆಚ್ಚು ಯುವ ಪ್ರತಿಭೆಗಳು ಪಾಲ್ಗೊಂಡಿದ್ದಾರೆ.
ಭಾರತ ಆತಿಥ್ಯ ವಹಿಸಲಿರುವ 2030ರ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು 2036ರ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಯುವ ಪ್ರತಿಭೆಗಳನ್ನು ಗುರುತಿಸುವ, ಅವರಿಗೆ ಸೂಕ್ತ ಪ್ರೋತ್ಸಾಹ, ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸಂಸದ್ ಕ್ರೀಡಾ ಮಹೋತ್ಸವ ಅತ್ಯಂತ ಪ್ರಮುಖ ಆಯೋಜನೆಯಾಗಿದೆ ಎಂದು ವಿಜಯೇಂದ್ರ ತಿಳಿಸಿದರು.
ಈ ನಿಟ್ಟಿನಲ್ಲಿ ಇಂದು ಹುಬ್ಬಳ್ಳಿ ಧಾರವಾಡ ಲೋಕಸಭಾ ಸದಸ್ಯರು, ಸನ್ಮಾನ್ಯ ಕೇಂದ್ರ ಸಚಿವರೂ ಆಗಿರುವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಕಲಘಟಗಿಯಲ್ಲಿ ಆಯೋಜಿಸಲಾಗಿದ್ದ ಧಾರವಾಡ ಸಂಸತ್ ಕ್ರೀಡ ಮಹೋತ್ಸವ 2025-26ರ ಸ್ಪರ್ಧಾಳುಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ನಾಗರಾಜ ಛಬ್ಬಿ, ಪಕ್ಷದ ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುಟಗಟ್ಟಿ, ಕಲಘಟಗಿ ಮಂಡಲ ಅಧ್ಯಕ್ಷ ಯಲ್ಲಾರಿ ಶಿಂಧೆ ಸೇರಿದಂತೆ ಹಲವಾರು ಮುಖಂಡರು, ಪ್ರಮುಖರು, ನೂರಾರು ಸಂಖ್ಯೆಯಲ್ಲಿ ಕ್ರೀಡಾಳುಗಳು ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಆಶಯದಂತೆ ‘ರಾಷ್ಟ್ರ ನಿರ್ಮಾಣಕ್ಕಾಗಿ, ಯುವಶಕ್ತಿಯನ್ನು ಸನ್ನದ್ಧಗೊಳಿಸುವ‘ ಧ್ಯೇಯದೊಂದಿಗೆ ನಾವೆಲ್ಲರೂ ಒಂದಾಗಿ ಸಹಕರಿಸೋಣ ಎಂದು ಅವರು ಕರೆ ನೀಡಿದರು.

