ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ನ್ಯಾಷನಲ್ ಇನ್ನೋವೇಷನ್ ಫೌಂಡೇಷನ್ ಸಹಯೋಗದೊಂದಿಗೆ ನವದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಇನ್ಸ್ಪೈರ್ ಮಾನಕ್ ಅವಾರ್ಡ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ
ರಾಜ್ಯದ ವಿದ್ಯಾರ್ಥಿಗಳು ಕಂಚಿನ ಪದಕದೊಂದಿಗೆ ಎರಡು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕರ್ನಾಟಕದಿಂದ ಒಟ್ಟು 39 ವಿದ್ಯಾರ್ಥಿಗಳು ಭಾಗವಹಿಸಿದ್ದರು, ಅತಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುತ್ತದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಕುಕ್ಕುಜೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೂಲ್ಯ ಹೆಗ್ಡೆ ಸಿದ್ಧಪಡಿಸಿದ “Flood Detecting Pole” ಮಾದರಿಯನ್ನು ಪ್ರದರ್ಶಿಸಿ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಪಡೆದುಕೊಂಡಿರುತ್ತಾರೆ.
ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ವಲಯ–04ರಲ್ಲಿರುವ ವೈದೇಹಿ ಸ್ಕೂಲ್ ಆಫ್ ಎಕ್ಸಲೆನ್ಸ್ ಬೆಂಗಳೂರು ಶಾಲೆಯ ವಿದ್ಯಾರ್ಥಿನಿ ಈಶ್ವರಿ ಮೋರೆ ಸಿದ್ಧಪಡಿಸಿರುವ “Fall Detection in the Toilet using Thermal Imaging” ಮಾದರಿಯನ್ನು ಪ್ರದರ್ಶಿಸಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿನಿಯರ ಈ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದು ಶ್ಲಾಘನೀಯವಾಗಿದೆಯೆಂದು ಡಿ.ಎಸ್.ಇ.ಆರ್.ಟಿ. ನಿರ್ದೇಶಕ ಗೋಪಾಲಕೃಷ್ಣ ಹೆಚ್.ಎನ್. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.