ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಕ್ಕಳು ಕೃಷಿಹೊಂಡ ಹಾಗೂ ಕಲ್ಲು ಕ್ವಾರಿಗಳ ನೀರಿನಲ್ಲಿ ಇಳಿಯದಂತೆ ಸುತ್ತಲೂ ತಂತಿ ಬೇಲಿ ಅಳವಡಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ಕೆ.ಟಿ.ತಿಪ್ಪೇಸ್ವಾಮಿ ಸೂಚಿಸಿದರು.
ಕೃಷಿ ಹೊಂಡ ಹಾಗೂ ಕಲ್ಲುಕ್ವಾರಿ ನೀರಿನಲ್ಲಿ ಬಿದ್ದು ಮಕ್ಕಳು ಸಾವನ್ನಪ್ಪುತ್ತಿರುವ ಕುರಿತು ನಗರದ ಜಂಟಿ ಕೃಷಿ ನಿರ್ದೇಶಕ ಕಚೇರಿ ಸಭಾಂಗಣದಲ್ಲಿ, ಸೋಮವಾರ ಕೃಷಿ, ಅಗ್ನಿಶಾಮಕ, ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳಲ್ಲಿ ಸುಮಾರು 5000ಕ್ಕೂ ಹೆಚ್ಚು ಮಕ್ಕಳು ನದಿ, ಹಳ್ಳ, ಕೆರೆ, ಬಾವಿ, ಕಲ್ಲು ಕ್ವಾರಿ ಹಾಗೂ ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಪ್ರಕರಣಗಳು ದಾಖಲಾಗಿವೆ. ಇದು ಅತ್ಯಂತ ಶೋಚನೀಯ ಸ್ಥಿತಿಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿಯೂ ಇಂತಹ ಪ್ರಕರಣಗಳು ದಾಖಲಾಗಿವೆ. ಸದ್ಯ ಶೈಕ್ಷಣಿಕ ವರ್ಷ ಮುಕ್ತಾಯವಾಗಿದ್ದು, ಬೇಸಿಗೆ ರಜೆ ಇದೆ.
ಮಕ್ಕಳು ಕೃಷಿ ಹೊಂಡ, ಪುಷ್ಕರಣಿ ಹಾಗೂ ಕಲ್ಲು ಕ್ವಾರಿಗಳಲ್ಲಿ ನಿಂತಿರುವ ನೀರಿನಲ್ಲಿ ಈಜಾಡಲು ತೆರಳುತ್ತಾರೆ. ಇದು ಅವಘಡಗಳಿಗೆ ಈಡು ಮಾಡಬಹದು. ಈ ಹಿನ್ನಲೆಯಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಮುಂಜಾಗೃತ ಕ್ರಮವಾಗಿ 2021ರಲ್ಲಿ ಎಸ್.ಓ.ಪಿ ಸಿದ್ದಪಡಿಸಿದೆ. ಇದರಲ್ಲಿ ಸಂಬAದ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾಗಿ ತಿಳಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಹಾಗೂ ಕೃಷಿ ಅಧಿಕಾರಿಗಳು ಕಲ್ಲು ಕ್ವಾರೆ ಹಾಗೂ ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ಅಳವಡಿಸಬೇಕು. ಅಪಾಯಕಾರಿ ಕಲ್ಲು ಕ್ವಾರಿಗಳು ಗುರುತಿಸಿ ಮುಚ್ಚುವ ಕಾರ್ಯ ಮಾಡಬೇಕು ಎಂದು ಡಾ. ಕೆ.ಟಿ ತಿಪ್ಪೇಸ್ವಾಮಿ ಹೇಳಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಮಕ್ಕಳು ಕೆರೆ, ಕೃಷಿ ಹೊಂಡ, ಕಲ್ಲು ಕ್ವಾರೆಗಳ ನೀರಿನಲ್ಲಿ ಬಿದ್ದು ಮಕ್ಕಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಮಕ್ಕಳ ಜೀವಿಸುವ ಹಕ್ಕನ್ನು ಕಸಿದು ಕೊಂಡಂತಾಗುತ್ತದೆ. ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದು. 2023-24 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ನೀರಿನಲ್ಲಿ ಬಿದ್ದು ಸಾವನ್ನಿಪ್ಪಿರುವ ಕುರಿತು 24 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 10 ಜನ ವಯಸ್ಕರರು, 14 ಜನ ಮಕ್ಕಳು ಎನ್ನುವುದು ಆಘಾತಕಾರಿ ಸಂಗತಿಯಾಗಿದೆ ಎಂದು ಡಾ.ಕೆ.ಟಿ.ತಿಪ್ಪೇಸ್ವಾಮಿ ವಿಷಾದ ವ್ಯಕ್ತಪಡಿಸಿದರು. ದಯವಿಟ್ಟು ಎಲ್ಲ ಅಧಿಕಾರಿಗಳು ಮಕ್ಕಳ ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಕೋರಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಸೇರಿದಂತೆ ತೋಟಗಾರಿಕೆ, ಅಗ್ನಿಶಾಮಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಉಪಸ್ಥಿರಿದ್ದರು.