ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ನಗರದಲ್ಲಿ ಆಟೋಗಳಿಗೆ ಮೀಟರ್ ಅಳವಡಿಕೆ ಮಾಡಲು ಜಿಲ್ಲಾಧಿಕಾರಿ, ಎಸ್ಪಿ, ಆರ್ಟಿಒ ಇಲಾಖೆಯ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಆಟೋಗಳಿಗೆ ಮೀಟರ್ ಅಳವಡಿಸುವಂತೆ ಆದೇಶಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ದಾವಣಗೆರೆ ನಗರದಲ್ಲಿ 10 ಸಾವಿರಕ್ಕೂ ಹೆಚ್ಚಿನ ಆಟೋಗಳಿದ್ದು ಎಲ್ಲ ಆಟೋಗಳಿಗೆ ಮೀಟರ್ ಅಳವಡಿಸಬೇಕೆಂದು ಆದೇಶಿಸಿದ್ದಾರೆ. ಇದಕ್ಕೆ ಎಸ್ಪಿ ಉಮಾಪ್ರಶಾಂತ್ ಅವರೂ ಕೂಡ ಧ್ವನಿಗೂಡಿಸಿ ಮೀಟರ್ ಅಳವಡಿಕೆಗೆ ಒಂದು ತಿಂಗಳ ಕಾಲ ಗಡುವು ಕೊಟ್ಟಿದ್ದಾರೆ.
ಆಟೋಗಳಿಗೆ ಮೀಟರ್ ಕಡ್ಡಾಯ ಕುರಿತು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಆಟೋ ಮಾಲೀಕರ ಮತ್ತು ಚಾಲಕರ ಸಭೆ ಕರೆಯಲಾಗಿತ್ತು. ಜಿಲ್ಲಾಧಿಕಾರಿ, ಎಸ್ಪಿ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ ನಿಯಮ ಜಾರಿ ಮಾಡಲಾಯಿತು.
ಇದಲ್ಲದೇ ಪಾಲಿಕೆ ವ್ಯಾಪ್ತಿಯಲ್ಲಿ ಆಟೋಗಳು ಮೀಟರ್ ಅಳವಡಿಸಿಕೊಂಡು ಪ್ರಯಾಣಿಕರಿಗೆ ಸೇವೆ ನೀಡಬೇಕು, ಮೀಟರ್ ಆಧಾರದ ಮೇಲೆ ಬಾಡಿಗೆ ನಿಗದಿ ಮಾಡಬೇಕು, ನಿಯಮ ಮೀರಿದರೆ ಆಟೋ ಮಾಲೀಕನಿಗೆ ಐದು ಸಾವಿರ ದಂಡ ವಿಧಿಸಲಾಗುವುದು ಎಂದು ಒಂದು ವಾರದೊಳಗೆ ನಗರದ ಎಲ್ಲ ಆಟೋಗಳಿಗೆ ಮೀಟರ್ ಅಳವಡಿಸಲು ಗಡುವು ನೀಡಿ ಎಚ್ಚರಿಕೆ ನೀಡಲಾಯಿತು.
ಎಸ್ಪಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಟೋ ಚಾಲಕರ, ಮಾಲೀಕರ ಸಭೆ ನಡೆಸಿದ್ದೇವೆ. ಯಾರು ಮೀಟರ್ ಅಳವಡಿಕೆ ಮಾಡುವುದಿಲ್ಲ ಎಂಬ ಬಗ್ಗೆ ಆರ್ಟಿಒನಿಂದ ಪರಿಶೀಲನೆ ನಡೆಸಿದ್ದೇವೆ. ಎಲ್ಲ ಆಟೋ ಚಾಲಕರಿಗೆ ಮೀಟರ್ ಅಳವಡಿಸಲು ಹೇಳಿದ್ದೇವೆ. ಅವರು ಕಾಲಾವಕಾಶ ಕೇಳಿದ್ದಾರೆ. ಒಂದು ತಿಂಗಳ ಕಾಲ ಗಡುವು ಸಹ ಕೊಡಲಾಗಿದೆ. ಇನ್ಮುಂದೆ ಮೀಟರ್ ಅಳವಡಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಆಟೋ ಚಾಲಕರು ಮಾತನಾಡಿ, ಆಟೋಗಳಿಗೆ ಮೀಟರ್ ಹಾಕಲು ತೊಂದರೆ ಇಲ್ಲ. ಅದರೆ, ನಿಗದಿ ಮಾಡುವ ದರದಿಂದ ನಷ್ಟ ಅಗುತ್ತದೆ. ಗ್ಯಾಸ್, ಸಿಎನ್ಜಿ ದರ ಗಗನಕ್ಕೇರಿದೆ. ರಸ್ತೆ ಹಾಳಾಗಿದ್ದು, ಸರಿಪಡಿಸಬೇಕು. ಸಿಟಿಯಲ್ಲಿ 10 ಸಾವಿರ ಆಟೋಗಳಿವೆ. ಮತ್ತೆ ಆಟೋಗಳಿಗೆ ಅನುಮತಿ ನೀಡಬಾರದು. ಆಟೋ ಚಾಲಕ ಮತ್ತು ಮಾಲೀಕರು ಮಧ್ಯಮ ವರ್ಗದವರೇ ಹೆಚ್ಚಿದ್ದಾರೆ. ಸಾಲ ಮಾಡಿ ಆಟೋ ಮಾಡಿರುತ್ತಾರೆ. ಅವರಿಗೆಲ್ಲ ಸಮಸ್ಯೆ ಆಗಲಿದೆ. ನಿಗದಿ ಮಾಡುವ ದರಕ್ಕೆ ಆಟೋ ಓಡಿಸಲು ಕಷ್ಟವಾಗುತ್ತದೆ ಎಂದು ಚಾಲಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.