ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
“ರಾಷ್ಟ್ರೀಯ ವರಮಾನ ಸೂಚ್ಯಂಕ (ಜಿಡಿಪಿ) ವೈಭವೀಕರಿಸುವ ಬದಲು ಮಾನವ ಅಭಿವೃದ್ಧಿ ಸೂಚ್ಯಾಂಕದತ್ತ (ಹೆಚ್ಡಿಐ) ಹೆಚ್ಚಿನ ಗಮನಹರಿಸಬೇಕಿದೆ ಎಂದು ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹೇಳಿದರು.
ಹೊಸದುರ್ಗದ ದರ್ಗಾಂಭಿಕ ಸಮುದಾಯ ಭವನದಲ್ಲಿ ಹೆಜ್ಜೆ ಸಾಲು ಸಾಂಸ್ಕೃತಿಕ ವೇದಿಕೆ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ನುಡಿನಮನ ಸಲ್ಲಿಸುವ ಕಾರಣ ಏರ್ಪಡಿಸಿದ್ದ ಚಿಂತನ ಗೋಷ್ಠಿಯಲ್ಲಿ “ಭಾರತದ ಆರ್ಥಿಕ ಅಭಿವೃದ್ಧಿ, ಉದಾರೀಕರಣ ಮತ್ತು ಮನಮೋಹನ್ ಸಿಂಗ್” ವಿಷಯ ಕುರಿತು ಉಪನ್ಯಾಸ ನೀಡುತ್ತಾ ಈ ಅಭಿಪ್ರಾಯಪಟ್ಟರು.
ಕಳೆದ ವರ್ಷ ಜಿಡಿಪಿಗೆ ಸಂಬಂಧಿಸಿದಂತೆ ಭಾರತ ಜಗತ್ತಿನಲ್ಲಿ ಐದನೇ ಸ್ಥಾನದಲ್ಲಿದ್ದು ಅದೇ ಮಾನವ ಅಭಿವೃದ್ಧಿ ಸೂಚ್ಯಾಂಕಕ್ಕೆ ಸಂಬಂಧಿಸಿದಂತೆ, ೧೯೩ ರಾಷ್ಟ್ರಗಳಲ್ಲಿ ೧೩೪ನೇ ಸ್ಥಾನದಲ್ಲಿದೆ. ಇದು ನಾವು ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಗಣಮಟ್ಟದ ಜೀವನ ನಿರ್ವಹಣೆಗೆ ಸಂಬಂಧಿಸಿದಂತೆ ಹಿಂದೆ ಬೀಳುತ್ತಿರುವುದನ್ನು ಸೂಚಿಸುತ್ತದೆ. ಹಾಗೆಯೇ, ಭ್ರಷ್ಟಾಚಾರಕ್ಕೆಸಂಬಂಧಿಸಿದಂತೆಜಗತ್ತಿನ ೧೮೦ ರಾಷ್ಟ್ರಗಳಲ್ಲಿ ೯೩ನೇ ಸ್ಥಾನದಲ್ಲಿದ್ದೇವೆ ಎಂದು ಅವರು ತಿಳಿಸಿದರು.
೧೯೯೧ರಲ್ಲಿ ಡಾ. ಮನಮೋಹನ್ ಸಿಂಗ್ ಅವರು ವಿತ್ತ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ದೇಶದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿತ್ತು, ಅದರ ನಿವಾರಣೆಗೆ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಯ ಅನುಷ್ಠಾನಕ್ಕೆ ಮುಂದಾದರು. ಜೊತೆಗೆ, ಉದಾರೀಕರಣದ ಸರಿ ಜಾರಿಯಿಂದ ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎನ್ನುವ ಕನಸನ್ನು ಕಟ್ಟಿಕೊಂಡಿದ್ದರು.
ಆದರೆ, ದೇಶದ ವಿದೇಶಿ ವ್ಯಾಪಾರ, ವಿದೇಶಿ ವಿನಿಮಯ, ಜಿಡಿಪಿ ಏರಿಕೆ ಮತ್ತು ಹಣದುಬ್ಬರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಒಂದಷ್ಟು ಸುಸ್ಥಿರತೆ ಕಂಡುಕೊಳ್ಳಲಾಯಿತಾದರೂ, ಭ್ರಷ್ಟಾಚಾರ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಅಸಮತೋಲನ ತಗ್ಗಿಸುವಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಲಿಲ್ಲ. ಇದಕ್ಕೆ ಆ ಸಂದರ್ಭದ ರಾಜಕೀಯ ಸ್ಥಿತ್ಯಂತರ ಮತ್ತು ಅಸ್ಥಿರತೆಗಳು ಕಾರಣವಾದವು. ಒಬ್ಬ ಸಮಾಜಮುಖಿ ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಮತ್ತು ಶುದ್ಧಹಸ್ತದ ಆಡಳಿತಗಾರನನ್ನು ನಮ್ಮ ದೇಶ ಸಕಾರಾತ್ಮಕವಾಗಿ ಬಳಸಿಕೊಳ್ಳಲಿಲ್ಲ” ಎಂದು ಮಲ್ಲಿಕಾರ್ಜುನಪ್ಪ ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮತ್ತು ಕರ್ನಾಟಕ ರಾಜ್ಯ ಆಹಾರ ನಿಗಮದ ಅಧ್ಯಕ್ಷ ಬಿ. ಜಿ. ಗೋವಿಂದಪ್ಪ, “ಡಾ. ಮನಮೋಹನ್ ಸಿಂಗ್ ಅವರು ವಿತ್ತ ಸಚಿವರಾಗಿ ಮತ್ತು ಎರಡು ಅವಧಿಯ ಪ್ರಧಾನಮಂತ್ರಿಗಳಾಗಿ ದೇಶದ ಆರ್ಥಿಕ ಸ್ಥಿತಿಯನ್ನು ಗಣನೀಯವಾಗಿ ಸುಧಾರಿಸಿದರು, ಉದ್ಯೋಗಾವಕಶಗಳು ಹೆಚ್ಚಾದವು, ರೈತರ ಸಾಲಗಳನ್ನು ತಕ್ಕಮಟ್ಟಿಗಾದರೂ ಮನ್ನಾ ಮಾಡುವ ಮೂಲಕ ಅವರಿಗೆ ನೆರವಾದರು, ಆಹಾರ ಭದ್ರತೆಗೆ ಕ್ರಮ ಕೈಗೊಂಡರು, ಮಕ್ಕಳಿಗೆ ಕಡ್ಡಾಯ ಶಿಕ್ಷಣ ಜಾರಿಗೊಳಿಸಿದರು” ಎಂದು ಅವರ ಸೇವೆಯನ್ನು ಶ್ಲಾಘಿಸಿದರು.
ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ, ತಾಲ್ಲೂಕು ಭೂ ಬ್ಯಾಂಕ್ ಅಧ್ಯಕ್ಷ ಮಹಾಲಿಂಗ ಸ್ವಾಮಿ, ಓಂಕಾರಪ್ಪ, ಶಿವಣ್ಣ, ವೀರಭದ್ರಪ್ಪ ಇವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಾಹಿತಿ ಮೆಂಗಸಂದ್ರ ಧನಂಜಯ ಸ್ವಾಗತಿಸಿ ವಂದಿಸಿದರು. ಹೆಜ್ಜೆ ಸಾಲು ಸಾಂಸ್ಕೃತಿಕ ವೇದಿಕೆ ಸಂಚಾಲಕ ಗೋ. ತಿಪ್ಪೇಶ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.