ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡಿಗರಿಗೆ ಅಪಮಾನವಾಗುವಂತೆ ಡಿಜಿಟಲ್ ಬೋರ್ಡ್‌ನಲ್ಲಿ ಅವಾಚ್ಯ ಬರಹ ಡಿಸ್‌ಪ್ಲೇ ಮಾಡಿದ್ದ ಆರೋಪದ ಮೇಲೆ GS ಸೂಟ್ಸ್ ಲಾಡ್ಜ್ ಮ್ಯಾನೇಜರ್ ಸರ್ಫರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಲ್ಲದೆ ಲಾಡ್ಜ್‌ನ್ನು ಸೀಜ್ ಮಾಡಲಾಗಿದ್ದು, ಅದರ ಮಾಲೀಕ ಜಮ್ಶೇಡ್ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೇ 16ರಂದು ರಾತ್ರಿ ತಾವರೆಕೆರೆ ಮುಖ್ಯರಸ್ತೆಯ ಜಿ.ಎಸ್. ಸೂಟ್ಸ್‌ಹೆಸರಿನ ಲಾಡ್ಜ್‌ನ ಡಿಜಿಟಲ್ ಬೋರ್ಡ್‌ನಲ್ಲಿ ಕನ್ನಡಿಗರನ್ನು ಅವಮಾನಿಸುವಂಥಹ ವಾಕ್ಯವನ್ನು ಡಿಸ್‌ಪ್ಲೇ ಮಾಡಲಾಗಿರುವ ಬಗ್ಗೆ ಹಾಗೂ ಲಾಡ್ಜ್‌ನವರ ಅತಿರೇಕದ ವರ್ತನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ತಕ್ಷಣ ಎಚ್ಚೆತ್ತ ಮಡಿವಾಳ ಠಾಣೆ ಪೊಲೀಸರು ಶನಿವಾರ ಬೆಳಗ್ಗೆಯೇ ಲಾಡ್ಜ್‌ಗೆ ತೆರಳಿ, ತಪಾಸಣೆ ನಡೆಸಿದ್ದರು.
ಕೃತ್ಯ ಎಸಗಿದ ಲಾಡ್ಜ್‌ನವರ ವಿರುದ್ಧ ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಕೋರಮಂಗಲದ ಅಂಗಡಿಯೊಂದು ಡಿಜಿಟಲ್ ಬೋರ್ಡ್ ಸಿದ್ಧಪಡಿಸಿಕೊಟ್ಟಿದ್ದು, ಮೇ 8ರ ಬಳಿಕ ಬೇರೆ ಬೇರೆ ವಾಕ್ಯಗಳು ಡಿಸ್‌ಪ್ಲೇ ಆಗುತ್ತಿರುವ ಬಗ್ಗೆ ಬೋರ್ಡ್ ತಯಾರಕರಿಗೆ ದೂರು ನೀಡಿದ್ದೆವು ಎಂದು ಪೊಲೀಸ್ ವಿಚಾರಣೆ ವೇಳೆ ಲಾಡ್ಜ್‌ನ ಸಿಬ್ಬಂದಿ ತಿಳಿಸಿದ್ದರು.