ಅಪಘಾತ ಚಿಕಿತ್ಸೆ ವೆಚ್ಚ ಭರಿಸಲು ವಿಮೆ ಸಹಕಾರಿ- ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅನೀರಿಕ್ಷತ ಅಪಘಾತಗಳು ಸಂಭವಿಸಿದ ವೇಳೆ ವೈದ್ಯಕೀಯ ಚಿಕಿತ್ಸೆ ವೆಚ್ಚ ಭರಿಸಲು ಆರೋಗ್ಯ ವಿಮೆಗಳು ಸಹಕಾರಿಯಾಗಿವೆ. ಪತ್ರಕರ್ತರು ಸದಾಕಾಲ ಸುದ್ದಿ ಸಂಗ್ರಹಿಸುವ ಭರದಲ್ಲಿ ಓಡಾಟ ನಡೆಸುತ್ತಾರೆ. ಒಂದು ವೇಳೆ ಅವರು ಅಪಘಾತಕ್ಕೆ ತುತ್ತಾದರೆ ಅವರನ್ನೇ ನೆಚ್ಚಿದ ಕುಟುಂಬಗಳು ಚಿಕಿತ್ಸಾ ವೆಚ್ಚ ಭರಿಸಲು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಇದನ್ನು ಮನಗಂಡು ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗೆ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯ ಕಲ್ಪಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದ ಡಾ. ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಜರುಗಿದ ಕಾರ್ಯನಿರತ ಪತ್ರಕರ್ತರಿಗೆ ವೈಯಕ್ತಿಕ ಅಪಘಾತ ವಿಮೆ ಬಾಂಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿಯೇ ಪತ್ರಕರ್ತರಿಗೆ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಬೇಕು ಎನ್ನುವ ಆಶಯ ಜಿಲ್ಲೆಯ ಶಾಸಕರಿಗೆ ಇತ್ತು. ಕಾರಣಾಂತರಗಳಿಂದ ಇಂತಹ ಕೆಲಸ ಆಗ ಆಗಿರಲಿಲ್ಲ.

- Advertisement - 

ಸದ್ಯ ಆರೋಗ್ಯ ವಿಮೆಗಾಗಿ ವೈಯಕ್ತಿಕವಾಗಿ ರೂ.2 ಲಕ್ಷ ಹಣ ನೀಡಿದ್ದೇನೆ. ಜಿಲ್ಲೆಯ ಇತರ ಶಾಸಕರು ಸಹ ಇದಕ್ಕೆ ಕೈಗೂಡಿಸಿದ್ದಾರೆ. ಅಪಘಾತದ ಜೊತೆಗೆ ಕುಟುಂಬಗಳು ವೈದ್ಯಕೀಯ ಚಿಕಿತ್ಸೆ ವೆಚ್ಚ ಸಹ ಭರಿಸುವ ಆಘಾತವನ್ನು ಎದುರಿಸಬೇಕಾಗುತ್ತದೆ. ಮರಣಾನಂತರ ಕುಟುಂಬಕ್ಕೆ ಆಧಾರವಾಗಲಿ ಎಂದು ಜೀವ ವಿಮೆ ಮಾಡಿಸುತ್ತೇವೆ. ಇದರ ಜೊತೆಗೆ ಆಸ್ಪತ್ರೆ ಚಿಕಿತ್ಸೆ ವೆಚ್ಚಗಳನ್ನು ಸಹ ಭರಿಸಲು ವಿಮೆ ಮಾಡಿಸುವುದು ಉತ್ತಮ ಕೆಲಸವಾಗಿದೆ ಎಂದು ಶಾಸಕ ರಘುಮೂರ್ತಿ ಹೇಳಿದರು.

- Advertisement - 

ಎಷ್ಟೋ ಬಾರಿ ಅಪಘಾತಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಬದುಕುಳಿಯದ ಸಂದರ್ಭವಿರುತ್ತದೆ. ಈ ವೇಳೆ ಆಸ್ಪತ್ರೆಯ ಬಿಲ್ ಪಾವತಿ ಮಾಡಿಲ್ಲ ಎನ್ನುವ ಕಾರಣದಿಂದ ಶವ ಸಹ ನೀಡದ ಘಟನೆಗಳು ಸಹ ಕಾಣುತ್ತೇವೆ. ಅಪಘಾತ ವಿಮೆಯ ಜೊತೆ ಕಾರ್ಯನಿರತ ಪತ್ರಕರ್ತರಿಗೆ ಇತರೆ ಆರೋಗ್ಯ ಸಮಸ್ಯೆಗಳು ಎದುರಾದರು, ಚಿಕತ್ಸೆ ಪಡೆಯಲು ಅನುಕೂಲವಾಗಂತೆ ವಿಮೆ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು. ಪಕ್ಷಾತೀತವಾಗಿ ಪತ್ರಕರ್ತರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮಟ್ಟದಲ್ಲಿ ಜಿಲ್ಲೆಯ ಎಲ್ಲ ಪ್ರತಿನಿಧಿಗಳು ಪ್ರಯತ್ನಿಸುವುದಾಗಿ ಶಾಸಕ ರಘುಮೂರ್ತಿ ಆಶ್ವಾಸನೆ ನೀಡಿದರು.

ಮುರುಘಾ ರಾಜೇಂದ್ರ ಬೃಹನ್ಮಠ ಮತ್ತು ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಬಸವಕುಮಾರ ಸ್ವಾಮೀಜಿ ಮಾತನಾಡಿ, ಸಮಾಜದ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಪತ್ರಕರ್ತರಿಗೆ ತಮ್ಮ ಸಮಸ್ಯೆ ಪ್ರತಿಬಿಂಬಿಸಲು ಸಾಧ್ಯವಾಗುವುದಿಲ್ಲ. ಸಂಘಟನೆ ಮೂಲಕ ಸಮಸ್ಯೆ ಗುರುತಿಸಿ ಪರಿಹಾರ ಹುಡುಕುವ ಕೆಲಸ ಮಾಡಿರುವುದು ಸಂತೋಷದ ವಿಚಾರವಾಗಿದೆ. ಅಂಚೆ ಇಲಾಖೆಯ ಆರೋಗ್ಯ ವಿಮೆಯ ಜತೆಗೆ ಸರ್ಕಾರದ ಆರೋಗ್ಯ ವಿಮೆ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪತ್ರಿಕೆಗಳು ಪ್ರಜಾಪ್ರಭುತ್ವನ್ನು ಕಾಯುವ ಒಂದು ವ್ಯವಸ್ಥೆಯಾಗಿದ್ದು, ಪತ್ರಿಕೆಗಳು ನ್ಯಾಯ, ನಿಷ್ಟುರವಾಗಿ ಎಲ್ಲವನ್ನು ಪ್ರತಿಬಿಂಬಿಸುತ್ತಿವೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕೆಲಸ, ಸೇವೆ ಸಲ್ಲಿಸುತ್ತಿರುವ ಸಾಧಕರ ಬೆಳವಣಿಗೆಯನ್ನು ಪತ್ರಿಕೆಯಲ್ಲಿ ಪ್ರತಿಬಿಂಬಿಸುವ ಕೆಲಸವಾಗಲಿ ಎಂದು ಹೇಳಿದರು.

ಭಾರತೀಯ ಅಂಚೆ ಇಲಾಖೆಯ ಅಂಚೆ ಅಧೀಕ್ಷಕಿ ಕೆ.ಆರ್.ಉಷಾ ಮಾತನಾಡಿ, ರಾಷ್ಟ್ರದ ಮೂಲೆ ಮೂಲೆಯಲ್ಲಿ ಸೈನಿಕರು ಹೇಗೆ ಕಾರ್ಯನಿರ್ವಹಿಸುತ್ತಾರೆಯೋ, ಅದೇ ರೀತಿಯಾಗಿ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಕೆಲಸ ನಿರ್ವಹಿಸುವ ಪತ್ರಕರ್ತರೂ ಕೂಡ ಸೈನಿಕರಿದ್ದಂತೆ, ಅವರ ಜೀವನದ ಭದ್ರತೆ, ಆರೋಗ್ಯ ಮತ್ತು ಕುಟುಂಬದ ಒಳಿತು ಕೂಡ ಬಹಳ ಮುಖ್ಯ. ಹಾಗಾಗಿ ಅಂಚೆ ಇಲಾಖೆಯ ಆರೋಗ್ಯ ವಿಮೆ ಅನುಕೂಲವಾಗಲಿದೆ ಎಂದು ಹೇಳಿದರು.

ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಮಾತನಾಡಿ, ಕಾಯಿಲೆ ಹೇಳಿ ಕೇಳಿ ಬರುವುದಿಲ್ಲ. ಪತ್ರಕರ್ತರು ಜೀವ, ಅಪಘಾತ ವಿಮೆಗೆ ಒತ್ತು ನೀಡಬೇಕು. ರೂ.30 ಸಾವಿರ ಬೆಂಗಳೂರಿನಂತಹ ಬೃಹತ್ ನಗರಗಳ ಆಸ್ಪತ್ರೆಗಳಲ್ಲಿ ಯಾವುದಕ್ಕೂ ಸಾಲದು.

ಇಂದು ಸಾಕಷ್ಟು ಆರೋಗ್ಯ ವಿಮಾ ಯೋಜನೆಗಳು ಲಭ್ಯವಿದ್ದು, ನಿಮಗೆ ಅನುಕೂಲವಾಗುವಂತಹ ವಿಮೆ ಮಾಡಿಸಿಕೊಳ್ಳುವ ಪ್ರಯತ್ನ ಸಂಘದಿಂದ ನಡೆಯಲಿ ಎಂದರು. ಪತ್ರಕರ್ತರ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತಾಗಲು, ತಮ್ಮ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.

ಅಂಚೆ ಇಲಾಖೆಯ ಹಿರಿಯ ವ್ಯವಸ್ಥಾಪಕ ಪ್ರವೀಣ್ ಅವರು ಅಂಚೆ ಇಲಾಖೆಯ ಆರೋಗ್ಯ ವಿಮಾ ಯೋಜನೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಅಂಚೆ ಇಲಾಖೆಯ ಸಿಬ್ಬಂದಿಗಳಾದ ರಾಜು ಕೆ.ಎಸ್., ಕುಮುದಾ ಪಿ.ಬಿ, ಶ್ರೇಯಂಕಾ, ವಿಶ್ವಾಸ್ ದ್ರಾವಿಡ್, ಅರುಣ್ ಕುಮಾರ್ ಅವರು ಪತ್ರಕರ್ತರ ಆರೋಗ್ಯ ವಿಮೆ ನೋಂದಣಿ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಳಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ.ತುಕಾರಾಂರಾವ್, ಶ್ರೀ ಅಹೋಬಲ ಟಿವಿಎಸ್ ಮಾಲೀಕ ಪಿ.ವಿ.ಅರುಣ್ ಕುಮಾರ್ ಸೇರಿದಂತೆ ಪತ್ರಕರ್ತರು ಇದ್ದರು.

 

Share This Article
error: Content is protected !!
";