ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಸಚಿವ ಭೈರತಿ ಬಸವರಾಜು ವಿರುದ್ಧ ಬಿಕ್ಲು ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಕರ್ನಾಟಕ ಸಂಘಟಿತ ಅಪರಾಧ ತಡೆ (ಕೋಕಾ) ಕಾಯಿದೆ ವಿಧಿಸಿದ್ದ ಸರ್ಕಾರದ ಕ್ರಮ ರದ್ದುಪಡಿಸಿರುವ ಹೈಕೋರ್ಟ್, ಇದೇ ಆರೋಪ ಸಂಬಂಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವುದಕ್ಕೆ ನಿರಾಕರಿಸಿದೆ. ಜತೆಗೆ, ಪ್ರಕರಣ ಸಂಬಂಧ ಕೋರಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಈ ಆದೇಶದಿಂದ ಈ ಹಿಂದೆ ಮಂಜೂರಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದಾಗಿದ್ದು, ಭೈರತಿ ಬಸವರಾಜು ಅವರಿಗೆ ಬಂಧನ ಭೀತಿ ಎದುರಾದಂತಾಗಿದೆ. ಬಿಕ್ಲು ಶಿವಕುಮಾರ್ ಕೊಲೆ ಪ್ರಕರಣದಲ್ಲಿ ತಮ್ಮ ವಿರುದ್ದ ದಾಖಲಾಗಿದ್ದ ಕೋಕಾ ಕಾಯಿದೆ ಮತ್ತು ಎಫ್ಐಆರ್ ರದ್ದು ಮಾಡುವುದು ಹಾಗೂ ನಿರೀಕ್ಷಣಾ ಜಾಮೀನು ಕೋರಿ ಭೈರತಿ ಬಸವರಾಜು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ. ಕೋಕಾ ಕಾಯಿದೆ ರದ್ದುಮಾಡಿದ್ದು, ಇನ್ನುಳಿದ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ. ಕೋಕಾ ಕಾಯಿದೆ ಜಾರಿ ಮಾಡುವಲ್ಲಿ ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಲ್ಲ. ಆದ್ದರಿಂದ ಕೋಕಾಯಿದೆ ರದ್ದುಮಾಡಲಾಗಿದೆ.
ಅಲ್ಲದೇ, ಘಟನೆ ಅತ್ಯಂತ ಹೀನಾಯ ಕೃತ್ಯವಾಗಿದ್ದು, ಪ್ರಕರಣದ ವಿಚಾರಣೆ ಮುಂದುವರೆಯುತ್ತಿದ್ದು ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ಕುರಿತಂತೆ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದ ಪೀಠ, ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿರುವುದಾಗಿ ಎಂದು ಪೀಠ ಹೇಳಿದೆ.
ಪೀಠ ಆದೇಶ ಪ್ರಕಟಿಸುತ್ತಿದಂತೆ ಅರ್ಜಿದಾರರ ಪರ ವಕೀಲರು, ಇದೀಗ ಅರ್ಜಿದಾರರ ವಿರುದ್ಧದ ಕೋಕಾ ಕಾಯಿದೆ ರದ್ದಾಗಿದೆ. ಆದ ಕಾರಣ ಜಾಮೀನು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರೆಗೂ ಈಗಾಗಲೇ ಮಂಜೂರಾಗಿರುವ ನಿರೀಕ್ಷಣಾ ಜಾಮೀನು ಮುಂದುವರೆಸುವುದಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ನ್ಯಾಯಪೀಠ, ಎಲ್ಲ ಅಂಶಗಳನ್ನು ಆದೇಶದಲ್ಲಿ ತಿಳಿಸಲಾಗಿದೆ. ಆದ ಕಾರಣ ಯಾವುದೇ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಾಗುವುದಿಲ್ಲ ಎಂದು ಪೀಠ ಹೇಳಿದೆ. ಹೈಕೋರ್ಟ್ನ ಈ ಆದೇಶದಿಂದ, ಬೈರತಿ ಬಸವರಾಜು ವಿರುದ್ಧ ಕೋಕಾ ಕಾಯಿದೆ ರದ್ದಾಗಿದೆ.
ಅರ್ಜಿಯ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ ಸಿಐಡಿ ತನಿಖಾಧಿಕಾರಿಗಳ ಪರ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ತನಿಖೆಗೆ ಹಾಜರಾದ ವೇಳೆ ಅರ್ಜಿದಾರಾದ ಬೈರತಿ ಬಸವರಾಜ್ ಸುಳ್ಳು ಮಾಹಿತಿ ನೀಡಿದ್ದಾರೆ. ಅವರ ವಿರುದ್ಧ ಹಲವು ಸಾಕ್ಷ್ಯ ಸಂಗ್ರಹಿಸಲಾಗಿದೆ. ಗಂಭೀರ ಸಾಕ್ಷ್ಯಗಳು ಇರುವುದರಿಂದ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕಿದೆ. ಹಾಗಾಗಿ ಅರ್ಜಿದಾರರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ಸೂಚಿಸಿ ಹೊರಡಿಸಿರುವ ಮಧ್ಯಂತರ ರಕ್ಷಣಾ ಆದೇಶ ತೆರವುಗೊಳಿಸಬೇಕು. ಒಂದೊಮ್ಮೆ ತನಿಖಾಧಿಕಾರಿಗಳ ಸಾಕ್ಷ್ಯಾಧಾರ ನ್ಯಾಯಾಲಯಕ್ಕೆ ತೃಪ್ತಿ ತರದಿದ್ದರೆ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಬಹುದು ಎಂದು ತಿಳಿಸಿದ್ದರು.
ಈ ಬಗ್ಗೆ ಬೈರತಿ ಬಸವರಾಜ್ ಪರ ವಕೀಲರು, ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ (ಕೋಕಾ) ಹಾಕಿದ್ದಾರೆ. ಸಂಘಟಿತ ಅಪರಾಧಕ್ಕೆ ಮಾತ್ರ ಕೋಕಾ ಕಾಯ್ದೆ ಹಾಕಬಹುದಾಗಿದೆ. ಕೋಕಾ ಕಾಯ್ದೆಯಡಿ ನಿರೀಕ್ಷಣಾ ಜಾಮೀನಿಗೆ ಅವಕಾಶವಿಲ್ಲ. ಹಾಗೊಂದು ವೇಳೆ ಮಧ್ಯಂತರ ರಕ್ಷಣೆ ತೆರವುಗೊಳಿಸಿದರೆ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಕೋರುವ ಅವಕಾಶ ಇಲ್ಲದಂತಾಗುತ್ತದೆ. ರಾಜಕೀಯ ದ್ವೇಷದಿಂದ ತನಿಖಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಆದ ಕಾರಣ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸುವಂತೆ ಕೋರಲು ಚಿಂತನೆ ನಡೆಸಲಾಗಿದ್ದು, ಮಧ್ಯಂತರ ರಕ್ಷಣೆ ಆದೇಶ ತೆರವುಗೊಳಿಸಬಾರದು ಎಂದು ಕೋರಿದ್ದರು.
ಏನಿದು ಪ್ರಕರಣ:
ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ರಾತ್ರಿ ರೌಡಿಶೀಟರ್ ಬಿಕ್ಲುಶಿವ ಅಲಿಯಾಸ್ ಶಿವಪ್ರಕಾಶ್ ಕೊಲೆಯಾಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಶಿವಪ್ರಕಾಶ್ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಆ ಆರೋಪದ ಮೇಲೆ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಬೈರತಿ ಬಸವರಾಜ್ ವಿರುದ್ಧ ಭಾರತಿನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಬಂಧನ ಭೀತಿ ಎದುರಿಸುತ್ತಿದ್ದ ಬಸವರಾಜ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಸೂಚನೆಯಂತೆ ಬೈರತಿ, ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆ ಹಾಜರಾಗಿದ್ದರು.
ನಂತರ ಬಸವರಾಜ್ ಅನ್ನು ಬಂಧಿಸದಂತೆ ನ್ಯಾಯಾಲಯ ಮಧ್ಯಂತರ ರಕ್ಷಣಾ ಆದೇಶ ನೀಡಿತ್ತು. ಈ ನಡುವೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯಿದೆ ಜಾರಿ ಮಾಡುತ್ತಿತ್ತು. ಅದನ್ನು ತೆರವುಗೊಳಿಸುವಂತೆ ಸಿಐಡಿ ಪೊಲೀಸರ ನ್ಯಾಯಾಲಯವನ್ನು ಕೋರಿದ್ದಾರೆ.

