ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತೀಯರ ನಿತ್ಯ ಜೀವನದಲ್ಲಿ ಏಕತೆ ಅಂಶಗಳು ಢಾಳಾಗಿ ಅನುಭವಕ್ಕೆ ಬರುತ್ತವೆ. ವಿಶೇಷವಾಗಿ ಸಾಹಿತ್ಯ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಲ್ಲಿ ಅನುಭವ ಮತ್ತಷ್ಟು ಸ್ಪಷ್ಟ. ವಿಶೇಷವಾಗಿ ಸಂಗೀತ ಕಲೆಯಲ್ಲಿ ಏಕತೆಯ ಸ್ವರೂಪವು ನನ್ನ ಪ್ರವಾಸಗಳಲ್ಲಿ ವಿಶೇಷವಾಗಿ ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯ ಹಾಗೂ ಪ್ರಯಾಗ್ ರಾಜ್ ನ ಕುಂಭಮೇಳದಂತಹ ಮಹಾಜನ ಸಮ್ಮೇಳನಗಳಲ್ಲಿ ಈ ವಿಚಾರ ಸ್ಪಷ್ಟವಾಯಿತು.
ಚಿತ್ರದುರ್ಗದ ಗಮಕ ಕಲಾ ಸಂಘದವರು ಏರ್ಪಡಿಸಿದ್ದ ಕುಮಾರವ್ಯಾಸ ಭಾರತದ “ಕಿರಾತುರ್ಜನೀಯ” ಪ್ರಸಂಗದ ವಾಚನ ವ್ಯಾಖ್ಯಾನಗಳನ್ನು ಕೇಳಿದ ಮೇಲೆ ಈ ವಿಚಾರದಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ .ಎಂತಹ ಅದ್ಭುತ !ಎಂದು ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ನುಡಿದರು.
ಶ್ರೀಗಳವರು ಇಲ್ಲಿನ ಗಮಕ ಕಲಾಭಿಮಾನಿಗಳ ಸಂಘದವರು ಏರ್ಪಡಿಸಿದ್ದ ವಾಚನ- ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮೇಲಿನಂತೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೆಸರಾಂತ ಗಮಕಿ ವಿದೂಷಿ ಚಂಪಕಾ ಶ್ರೀಧರ್ ಸಂಗೀತದ ವಿವಿಧ ರಾಗಗಳನ್ನು ಅನ್ವಯಿಸಿ ಸಮಯೋಚಿತ ಆಲಾಪಗಳ ಸಹಿತ ಕಾವ್ಯ ವಾಚನ ಮಾಡಿದ ಪರಿಗೆ ಸಭಿಕರು ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೆ ಸಂವಾದಿಯಾಗಿ ಸಂಸ್ಕೃತ ಗ್ರಾಮ ಮತ್ತೂರಿನ ಸಂಸ್ಕೃತ ,ಕನ್ನಡ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ಪರಿಣಿತ ವಾಗ್ಮಿ, ವ್ಯಾಖ್ಯಾನ ವಿಶಾರದ ,ವಿದ್ವಾನ್ ಅಚ್ಯುತ ಅವಧಾನಿಗಳ ವ್ಯಾಖ್ಯಾನ ಅವರ ಉಚ್ಚಕಂಠಶ್ರೀ ಕಾವ್ಯಲೋಕದ ಸುಳಿವು ,ಸೂಕ್ಷ್ಮಗಳು ಹಾಗೂ ಹಾವಭಾವಗಳು ಮೊದಲಾದವುಗಳಿಂದ ಕೂಡಿದ ವ್ಯಾಖ್ಯಾನ ನಿಜಕ್ಕೂ ಸ್ಮರಣೀಯವಾಗಿತ್ತು.
ಜೆಸಿಆರ್ ಗಣಪತಿ ದೇವಾಲಯದ ಅಭಯ ಆಂಜನೇಯ ಭಜನಾ ಮಂಡಳಿಯ ಮಹಿಳೆಯರ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭವಾದ ಸಭೆಯಲ್ಲಿ ಗಮಕ ಸಂಘದ ಅಧ್ಯಕ್ಷೆ ಆರ್. ರಮಾದೇವಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದೂಷಿ ಮೀನಾಕ್ಷಿ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕಿ ಎಲ್. ಉಮಾ ವಂದನಾರ್ಪಣೆ ಮಾಡಿದರು.
ಇದಕ್ಕೂ ಮುನ್ನ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ದೇವಾಲಯದ ಆಡಳಿತ ಮಂಡಳಿಯವರು ಗಮಕ ಕಲಾಭಿಮಾನಿಗಳು ಭಕ್ತಿಯಿಂದ ಸ್ವಾಗತಿಸಿ ವೇದ ಘೋಷಗಳ ಸಹಿತ ಗಣಪತಿಯ ಸನ್ನಿಧಿಗೆ ಕರೆ ತಂದರು. ಅಲ್ಲಿ ವಿಶೇಷ ಅರ್ಚನೆ ಮಾಡಿ ಮಹಾಮಂಗಳಾರತಿ ಮಾಡಲಾಯಿತು.
ಈ ಸಂದರ್ಭದಲ್ಲಿ ಗಮಕ ಕಲಾಭಿಮಾನಿಗಳು, ದೇವಾಲಯದ ಪದಾಧಿಕಾರಿಗಳು ಆದ ಪ್ರೊ. ಬಿ.ಹೆಚ್. ಹರೀಶ್, ಜಿ.ಆರ್. ಕೃಷ್ಣಮೂರ್ತಿ, ಕೆ ವೆಂಕಣ್ಣಾಚಾರ್,ನಿ. ಶಿಕ್ಷಕಿ ಲಲಿತಮ್ಮ, ನಿ. ಪ್ರಾಚಾರ್ಯರಾದ ಆರ್.ಗೌರಮ್ಮ, ಗೌಡ್ರು, ಸಮಾಜಸೇವಕಿ ಗಾಯತ್ರಿ ಶಿವರಾಂ, ನಿವೃತ್ತ ಪ್ರಾಧ್ಯಾಪಕ ರಾಜೀವಲೋಚನ, ಅನಂತ ಕೃಷ್ಣ, ತವಂದಿ ರಾಜಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

