ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ರಾಜಸ್ಥಾನ ಮೂಲದ ಅಂತರ್ ರಾಜ್ಯ ಕಳ್ಳರನ್ನು ದಾವಣಗೆರೆಯ ವಿದ್ಯಾನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶ್ಯಾಮ್ ಸಿಂಗ್ (28), ಕವರ್ ಪಾಲ್(24), ಪ್ರತಾಪ್ ಸಿಂಗ್ (33) ಬಂಧಿತರಾಗಿದ್ದು, ಇವರಿಂದ 15,37,800 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾನಗರದ ನಿವಾಸಿ ರಂಗನಾಥ ಎಂಬುವರ ಮನೆಯಲ್ಲಿ ಜನವರಿ 09 2025 ರಂದು ಮಧ್ಯಾಹ್ನ ಕಳ್ಳತನ ಆಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಮೂರು ಜನ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಜನವರಿ 09 2025 ರಂದು ವಿನಾಯಕ ಬಡಾವಣೆ ವಿಎಮ್ಜಿ ಲೇಔಟ್ ನಿವಾಸಿ ರಂಗನಾಥ ಅವರ ಮನೆ ಕಳ್ಳತನ ಆಗಿತ್ತು. “ಬೆಂಗಳೂರಿಗೆ ಹೋಗಿದ್ದಾಗ ಮನೆಕಳ್ಳತನ ಆಗಿತ್ತು. ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು, ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳನ್ನು ಬೆಳ್ಳಿ ಸಾಮಗ್ರಿಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಮಾಡಿಕೊಡಿ ಎಂದು” ಮನೆ ಮಾಲೀಕ ರಂಗನಾಥ ಅವರು ಹಾಜರಾಗಿ ದೂರು ನೀಡಿದ್ದರು. ದೂರು ದಾಖಲು ಮಾಡಿಕೊಂಡಿದ್ದ ವಿದ್ಯಾನಗರ ಠಾಣೆಯ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
ಗುಜರಾತ್ ರಾಜ್ಯದ ಸೂರತ್ ಸಿಟಿ ಸಾರೋಲಿ ಪೊಲೀಸರ ಸಹಕಾರ: ಗುಜರಾತ್ ರಾಜ್ಯದ ಸೂರತ್ ಸಿಟಿ ಸಾರೋಲಿ ಪೊಲೀಸರ ಸಹಕಾರದಿಂದ ದಾವಣಗೆರೆ ವಿದ್ಯಾನಗರ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 12,97,200 ರೂಪಾಯಿ ಬೆಲೆಯ 162.150 ಗ್ರಾಂ ತೂಕದ ಬಂಗಾರದ ಆಭರಣಗಳು, 1,08,000 ರೂಪಾಯಿ ಬೆಲೆಯ 1350 ಗ್ರಾಂ ತೂಕದ ಬೆಳ್ಳಿ ಸಾಮಗ್ರಿಗಳು 95,600 ರೂಪಾಯಿ ನಗದು ಹಣ 34,000 ರೂಪಾಯಿ ಬೆಲೆಯ ಒಟ್ಟು 6 ಮೊಬೈಲ್ ಪೋನ್ಗಳು ಹಾಗು 3000 ರೂಪಾಯಿ ಬೆಲೆಯ ಎರಡು ವಾಚ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಆರೋಪಿತರ ಹಿನ್ನೆಲೆ:
ದಾವಣಗೆರೆ ಜಿಲ್ಲೆಯ ಹರಿಹರ ನಗರ ಠಾಣೆ, ಹಳಿಯಾಳ ಠಾಣೆ, ಧಾರವಾಡ, ತುಮಕೂರು ಬಡಾವಣೆ, ತಿಪಟೂರು, ಮದ್ಯಪ್ರದೇಶದ ಭೂಪಾಲ್ನಲ್ಲಿ ಸೇರಿದಂತೆ ವಿವಿಧ ಕಡೆ ಆರೋಪಿತರು 06 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ. ಪ್ರಕರಣ ಭೇದಿಸಿದ ಸಿಬ್ಬಂದಿಯನ್ನು ಎಸ್ಪಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.

