ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
3 ತಿಂಗಳಲ್ಲಿ 3.35 ಲಕ್ಷ ಕೋಟಿ ಹೂಡಿಕೆಗೆ ಅನುಮೋದನೆ ದೊರೆತಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಘೋಷಿಸಲಾದ ಹೂಡಿಕೆಯ ಶೇ.30 ರಷ್ಟು ಅಂದರೆ ಸುಮಾರು 3.35 ಲಕ್ಷ ಕೋಟಿ ಹೂಡಿಕೆಗಳಿಗೆ ಕೇವಲ 3 ತಿಂಗಳ ಅವಧಿಯಲ್ಲಿಯೇ ಅನುಮೋದನೆ ದೊರಕಿದೆ. ಇದು ನಮ್ಮ ಆಡಳಿತದಲ್ಲಿನ ಕ್ಷಿಪ್ರ, ತ್ವರಿತ ಹಾಗೂ ಪಾರದರ್ಶಕ ನೀತಿಗೆ ಸಾಕ್ಷಿಯಾಗಿದೆ ಎಂದು ಸಚಿವ ಪಾಟೀಲ್ ಅಭಿಪ್ರಾಯಪಟ್ಟರು.
ಈ ಅಪಾರ ಹೂಡಿಕೆಯಿಂದ ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಶರವೇಗ ಸಿಗಲಿದೆ. ಮೋಟಾರ್, ಎಲೆಕ್ಟ್ರಿಕ್ ವಾಹನ, ಬಯೋಟೆಕ್, ಸಿಮೆಂಟ್, ಮರುಬಳಕೆ ಇಂಧನ ಮುಂತಾದ ವಿವಿಧ ಕ್ಷೇತ್ರಗಳ ಉದ್ಯಮಗಳು ರಾಜ್ಯದಲ್ಲಿ ಸ್ಥಾಪನೆಯಾಗಲಿವೆ. ಇದರ ಫಲವಾಗಿ ಮುಂದಿನ ದಿನಗಳಲ್ಲಿ ಹೇರಳ ಉದ್ಯೋಗಗಳು ಸೃಷ್ಟಿಯಾಗಲಿದೆ.
ಒಪ್ಪಂದಗಳು-(MOU) ಕೇವಲ ಘೋಷಣೆಗಷ್ಟೇ ಸೀಮಿತಗೊಳ್ಳದೆ ಹೂಡಿಕೆಗಳಿಗೆ ಅನುಮೋದನೆ ಪಡೆದು ಕಾರ್ಯರೂಪಕ್ಕೆ ತರಲು ನಮ್ಮ ಇಲಾಖೆ ಕಟಿಬದ್ದವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಎಂ.ಬಿ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.