ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಗೆ ಪ್ರಸ್ತಾವನೆಗಳ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2024-25
ನೇ ಸಾಲಿನ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನೀಡುವ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಸಲುವಾಗಿ ಜಿಲ್ಲೆಯಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. ಫೆ.05 ಪ್ರಸ್ತಾವನೆ ಸಲ್ಲಿಸಲು ಕೊನೆಯ ದಿನ.
ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಪ್ರತಿಬಿಂಬಿಸಲು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರತಿ ವರ್ಷ ಕಿತ್ತೂರು ರಾಣಿ ಚೆನ್ನಮ್ಮ ಇವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.

  ಅದರಂತೆ 2024-25ನೇ ಸಾಲಿಗೆ ಪ್ರಶಸ್ತಿಗಾಗಿ ಜಿಲ್ಲೆಯಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅರ್ಹ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರನ್ನು ಗುರುತಿಸಿ, ಪ್ರಸ್ತಾವನೆಗಳನ್ನು ಪಡೆದು ಪ್ರಧಾನ ಕಚೇರಿಗೆ ಸಲ್ಲಿಸಬೇಕಾಗಿರುತ್ತದೆ.

- Advertisement - 

 ಪ್ರಶಸ್ತಿಗಾಗಿ ಅರ್ಹ ವ್ಯಕ್ತಿ, ಸಂಸ್ಥೆಗಳು, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಆವರಣ, ಸ್ಟೇಡಿಯಂ ರಸ್ತೆ, ಚಿತ್ರದುರ್ಗ ಇವರಿಂದ ಅರ್ಜಿಯನ್ನು ಪಡೆದು ಪ್ರಸ್ತಾವನೆಗಳನ್ನು ದ್ವಿಪ್ರತಿಯಲ್ಲಿ ಫೆ.05 ರೊಳಗಾಗಿ ಕಚೇರಿಗೆ ಸಲ್ಲಿಸಬೇಕಾಗಿದೆ.

 ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಆಯ್ಕೆಗೆ ನಿಗದಿಪಡಿಸಿರುವ ಷರತ್ತಗಳು: ಕಿತ್ತೂರು ರಾಣಿಚೆನ್ನಮ್ಮ  ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಸ್ವಯಂ ಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳು ಮಹಿಳೆಯರು ಅಭಿವೃದ್ಧಿಗಾಗಿ ಕನಿಷ್ಟ 5 ವರ್ಷಗಳ ಸೇವೆ ಸಲ್ಲಿಸಿರಬೇಕು. ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸಂಸ್ಥೆ ಹಾಗೂ ವ್ಯಕ್ತಿ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಕ್ರಮಗಳ ಮತ್ತು ಇತರೆ ಕ್ಷೇತ್ರಗಳಾದ ಕ್ರೀಡಾ, ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲೂ ವ್ಯಕ್ತಿಗಳು ಕೈಗೊಂಡ ಕಾರ್ಯಕ್ರಮಗಳ ನಿರ್ವಹಣೆಯ ಗುಣಮಟ್ಟವನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತದೆ.

- Advertisement - 

 ಕಿತ್ತೂರು ರಾಣೆ ಚನ್ನಮ್ಮ ಪ್ರಶಸ್ತಿಗೆ ವೇತನ ಪಡೆಯುತ್ತಿರುವ ವ್ಯಕ್ತಿಗಳು ಅರ್ಹರಾಗಿರುವುದಿಲ್ಲ. ಪ್ರಶಸ್ತಿಗೆ ಬರುವ ಅರ್ಜಿಗಳ ಪರಿಶೀಲನೆ ಮತ್ತು ಆಯ್ಕೆಗೆ ಸಂಬಂಧಿಸಿದಂತೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಪ್ರಶಸ್ತಿ ಪ್ರಧಾನವನ್ನು ಅಂತರರಾಷ್ಟ್ರೀಯ ಮಹಿಳಾ ದಿನಚರಣೆಯಂದು ಅಥವಾ ಸರ್ಕಾರವು ನಿಗದಿಪಡಿಸುವ ದಿನಾಂಕ ಹಾಗೂ ಸ್ಥಳಗಳಲ್ಲಿ ಏರ್ಪಡಿಸಲಾಗುವುದು. ಪ್ರಶಸ್ತಿಗೆ ಆಯ್ಕೆಯಾದ ವ್ಯಕ್ತಿಗಳು ಪ್ರಶಸ್ತಿಗಳನ್ನು ಖುದ್ದಾಗಿ ಪಡೆಯಬೇಕು. ಹಾಗೂ ಸಂಘ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಯನ್ನು ಸಂಘದ ಪದಾಧಿಕಾರಿಗಳು ಸ್ವೀಕರಿಸಬಹುದಾಗಿದೆ.

 ವೀರ ಮಹಿಳೆ ಪ್ರಶಸ್ತಿಗೆ ಷರತ್ತುಗಳು: 18 ರಿಂದ 45 ವಯೋಮಿತಿಯೊಳಗಿನ ಒಬ್ಬ ಮಹಿಳೆಯು ಆಪತ್ಕಾಲದಲ್ಲಿರುವ ಮತ್ತೊಬ್ಬ ವ್ಯಕ್ತಿಯ ಜೀವ ಕಾಪಾಡುವಲ್ಲಿ ಅಥವಾ ಪ್ರಾಣ ರಕ್ಷಿಸುವಲ್ಲಿ ತನ್ನ ಜೀವದ ಹಂಗನ್ನು ತೊರೆದು  ಸಮಯ ಪ್ರಜ್ಞೆಯಿಂದ ಧೈರ್ಯ, ಸಾಹಸದೊಂದಿಗೆ ಅಪಾಯದಲ್ಲಿರುವ ವ್ಯಕ್ತಿಯ ಜೀವ ಕಾಪಾಡುವಂತಹ ಕಾರ್ಯವನ್ನು ಮಾಡಿದಲ್ಲಿ ಅಂತಹ ಮಹಿಳೆಯರನ್ನು ವೀರ ಮಹಿಳೆ ಎಂದು ಪರಿಗಣಿಸಬಹುದು.

 ವೀರ ಮಹಿಳೆ ಪ್ರಶಸ್ತಿ ಪಡೆಯುವ ಮಹಿಳೆಯು ವಿಶೇಷ ಶೌರ್ಯ ಹಾಗೂ ಸಾಧನೆಯನ್ನು ಮಾಡಿರಬೇಕು. ಸಾಧನೆಯು ಸಾರ್ವಜನಿಕರ ಗಮನಕ್ಕೆ ಬಂದಿರಬೇಕು. ಹಾಗೂ ಸಾಧನೆಯು ಪ್ರಶಸ್ತಿ ಪಡೆಯುವ ಹಿಂದಿನ ವರ್ಷದ ಜನವರಿ 1 ರಿಂದ ಡಿಸೆಂಬರ್ 31 ಒಳಗೆ ಇರಬೇಕು.   ಪ್ರಶಸ್ತಿ ಸಂಬಂಧಿಸಿದ ಮಹಿಳೆಯ ತಂದೆ, ತಾಯಿ, ಪೋಷಕರು ಅರ್ಜಿಯನ್ನು ಸಲ್ಲಿಸಬಹುದು.

 ವೀರ ಮಹಿಳೆ ಪ್ರಶಸ್ತಿಗಾಗಿ ರಾಜ್ಯ ವತಿಯಿಂದ ಒಬ್ಬ ಮಹಿಳೆಗೆ ಮಾತ್ರ ರೂ.25,000/-ಗಳ ನಗದು ಹಾಗೂ ಪ್ರಶಸ್ತಿ ನೀಡಲಾಗುವುದು. ಇದನ್ನು ಪ್ರತಿ ವರ್ಷ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಆವರಣ, ಚಿತ್ರದುರ್ಗ ಸಂಪರ್ಕಿಸುವಂತೆ ಇಲಾಖೆಯ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";