ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಉನ್ನತ ಶಿಕ್ಷಣ ವಂಚಿತರಾದ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ “ಉಚಿತ ಉನ್ನತ ಶಿಕ್ಷಣ ಯೋಜನೆ” ಜಾರಿಗೊಳಿಸಿದೆ. 2025-26 ನೇ ಸಾಲಿನಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಯುಜಿಸಿ ಅನುಮೋದಿತ ಸ್ನಾತಕ, ಸ್ನಾತಕೋತ್ತರ ಹಾಗೂ ಡಿಪ್ಲೋಮಾ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಶೈಕ್ಷಣಿಕ ಅರ್ಹತೆ, ಆದಾಯ ಮತ್ತು ಜಾತಿ, ವರ್ಗ ಪ್ರಮಾಣ ಪತ್ರ ಹಾಗೂ ಇತರೆ ಮಾರ್ಗಸೂಚಿಗಳ ಅನ್ವಯ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳು ಜಾಲತಾಣ https://minorityksouportal.com ಮೂಲಕ 2025 ರ ಜುಲೈ 01 ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು 2025 ಆಗಸ್ಟ್ 20 ಅಂತಿಮ ದಿನಾಂಕವಾಗಿದೆ.
ಕರಾಮುವಿಯಲ್ಲಿ ಪ್ರವೇಶಾತಿ ಹೊಂದಿದ ಅರ್ಹ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಪರವಾಗಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಶೈಕ್ಷಣಿಕ ಕೋರ್ಸ್‍ನ ಪ್ರವೇಶಾತಿ ಮತ್ತು ಪರೀಕ್ಷಾ ಶುಲ್ಕವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ನೇರವಾಗಿ ಪಾವತಿಸುತ್ತದೆ.
ಆದ್ದರಿಂದ ಅಲ್ಪಸಂಖ್ಯಾತ ವರ್ಗದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬುದ್ದಿಸ್ಟ್ ಮತ್ತು ಪಾರ್ಸಿ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಉಚಿತ ಉನ್ನತ ಶಿಕ್ಷಣ ಯೋಜನೆಯ” ಪ್ರಯೋಜನ ಪಡೆದು ಉನ್ನತ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು.
ಹೆಚ್ಚಿನ ವಿವರಗಳಿಗೆ ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ–01, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು–26, ಕಛೇರಿ ದೂರವಾಣಿ ಸಂಖ್ಯೆ: 080-26603664 ಹಾಗೂ 98805-26439 / 90195-26439 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬಾಪೂಜಿನಗರ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ರೋಹಿತ್ ಹೆಚ್.ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.