ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿರುವುದು ಕನ್ನಡಿಗರ ಸರ್ಕಾರವೋ ? ಮಲಯಾಳಿಗಳ ಸರ್ಕಾರವೋ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ರಾಜ್ಯದಲ್ಲಿರುವ ಗುಲಾಮಿ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕೇರಳ ಸರ್ಕಾರ ಮತ್ತು ಕೇರಳ ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಮಣಿದು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆದೇಶಕ್ಕೆ ಮಂಡಿಯೂರಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ವಸತಿ ಸಚಿವ ಜಮೀರ್ ಅಹಮದ್ ಕೋಗಿಲುಬಡಾವಣೆಯಲ್ಲಿ ಅಕ್ರಮವಾಗಿ ವಾಸವಿದ್ದ ವಲಸಿಗರಿಗೆ 11.20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮನೆಗಳನ್ನು ಹೊಸ ವರ್ಷ ಜನವರಿ 1ರಂದು ನೀಡುವುದಾಗಿ ಘೋಷಿಸಿದ್ದಾರೆ.
ಪುಕ್ಕಲ ಸಿದ್ದರಾಮಯ್ಯ ರಾಜ್ಯದ ಹಿತಾಸಕ್ತಿ ಬಲಿಕೊಟ್ಟು, ವಲಸಿಗರಿಗೆ ಕೆಂಪು ಹಾಸಿನ ರಾಜಾತಿಥ್ಯ ನೀಡಿರುವುದು ಕರುನಾಡಿನ ಜನರಿಗೆ ಬಗೆದ ಮಹಾದ್ರೋಹ ಹಾಗೂ ಕನ್ನಡಿಗರ ವಿರೋಧಿ ತೀರ್ಮಾನ ಮಾಡಿರುವುದು ಖಂಡನೀಯ ಎಂದು ಜೆಡಿಎಸ್ ತಿಳಿಸಿದೆ.
ಬೆಂಗಳೂರಿನ ಬೆಳ್ಳಂದೂರು, ವರ್ತೂರು, ಹೆಬ್ಬಾಳ, ನಾಗವಾರ, ಕೆಂಗೇರಿ, ಯಶವಂತಪುರ, ಮಲ್ಲೇಶ್ವರಂ, ವಿಜಯನಗರ ಸೇರಿ ಹಲವೆಡೆ ಕನ್ನಡಿಗರ ಮನೆಗಳನ್ನು ಬುಲ್ಡೋಜರ್ ಬಳಸಿ ಕೆಡವಿದಾಗ ಮಾನವೀಯತೆಎಲ್ಲಿ ಸತ್ತು ಹೋಗಿತ್ತು ?
ಅಕ್ರಮ ವಲಸಿಗರ ಮನೆಗಳನ್ನು ಕಾನೂನು ಪ್ರಕಾರ ತೆರವುಗೊಳಿಸಿದರೆ, ಎದ್ದು ಬಿದ್ದು, ಕಣ್ಣೀರು ಸುರಿಸುತ್ತಾ, ನಾ ಮುಂದು ತಾ ಮುಂದು ಎಂದು ಕಾಂಗ್ರೆಸ್ಸಿಗರು ಹಾಗೂ ಸಚಿವರ ಭೇಟಿ ನೀಡಿ, ಫ್ರೀಯಾಗಿ ಮನೆ ಕೊಡುವ ಘೋಷಣೆ ಮಾಡುತ್ತಾರೆ. ಕೇರಳದವರಿಗೆ ಮಣೆ. ಕನ್ನಡಿಗರಿಗೆ ದೊಣ್ಣೆ.
ಉತ್ತರ ಕರ್ನಾಟಕ ಬಡವರು ಹೊಟ್ಟೆ ಹೊರೆಯುವ ಸಲುವಾಗಿ ಬೆಂಗಳೂರು ಸೇರಿ ದೊಡ್ಡ ನಗರಗಳಲ್ಲಿ ಗುಡಿಸಲು ಹಾಕಿಕೊಂಡು ಗಾರೆ ಕೆಲಸ, ಮನೆ ಕೆಲಸ , ದಿನಗೂಲಿ ಮಾಡಿಕೊಂಡು ಎಷ್ಟೋ ವರ್ಷಗಳಿಂದ ಬದುಕುತ್ತಿದ್ದಾರೆ. ನ್ಯಾಯಯುತವಾಗಿ ಅಂತಹ ನಿರ್ಗತಿಕರಿಗೆ ಸಿಗಬೇಕಾದ ಮನೆಗಳು ಇಂದು ಹೊರ ರಾಜ್ಯದ ಅಕ್ರಮ ವಲಸಿಗರ ಪಾಲಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಒಂದು ವರ್ಗದ ಓಲೈಕೆ ರಾಜಕಾರಣ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

