157 ವರ್ಷಗಳ ಡಿಸಿ ಕಚೇರಿ, ಹೊಸ ಡಿಸಿ ಕಚೇರಿ ಇದ್ದರೂ ತೋಟಗಾರಿಕೆ ಜಾಗದಲ್ಲಿ ಮತ್ತೊಂದು ಡಿಸಿ ಕಟ್ಟಡ ಏಕೆ?
ಡಿಸಿ ಕಚೇರಿ ಹೆಸರಲ್ಲಿ ಮೂರ್ಮೂರು ಕಡೆ ಕಟ್ಟಡ ನಿರ್ಮಿಸಿದರೆ ಸರ್ಕಾರಕ್ಕೆ ಆರ್ಥಿಕ ಹೊರೆ ಅಲ್ಲವೇ?
ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಐತಿಹಾಸಿಕ ಜಿಲ್ಲಾಧಿಕಾರಿ ಕಚೇರಿ ಕಟ್ಟಡವು ಬ್ರಿಟಿಷರ ಕಾಲದ ಅದ್ಭುತ ರಚನೆ. 157 ವರ್ಷಗಳ ಇತಿಹಾಸ ಹೊಂದಿದೆ. ಆಡಳಿತದ ಕೇಂದ್ರ ಬಿಂದುವಾಗಿರುವ ಈ ಪುರಾತನ, ಸುಭದ್ರ ಕಟ್ಟಡವು ಒಂದೂವರೆ ಶತಮಾನ ಕಳೆದರೂ ಇಂದಿಗೂ ಗಟ್ಟಿ ಮುಟ್ಟಾಗಿ ಉಳಿದು ಉಪಯೋಗ ಮಾಡಲಾಗುತ್ತಿದೆ.
ಹಳೆ ಡಿಸಿ ಕಟ್ಟಡಕ್ಕೆ ಕೂಗಳತೆ ದೂರದಲ್ಲಿ ಹೊಸ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಲು ತೋಟಗಾರಿಕೆ ಇಲಾಖೆ ಜಾಗ ವಶ ಪಡಿಸಿಕೊಳ್ಳುವ ಅಗತ್ಯ ಇದೆಯಾ ಎನ್ನುವ ಪ್ರಶ್ನೆ ಕಾಡತೊಡಗಿದೆ.
ಕಟ್ಟಡದ ವಿಶೇಷತೆ:
ಒಂದೂವರೆ ಶತಮಾನ ಗತಿಸಿರುವ ಸುಭದ್ರವಾದ ಕಟ್ಟಡ ಕೇವಲ ಹಳೆಯದು ಎನ್ನುವುದನ್ನು ಬಿಟ್ಟರೆ ಇಂದಿಗೂ ಸುಭದ್ರವಾಗಿದೆ. ದೀರ್ಘ ಕಾಲದಿಂದ ಜಿಲ್ಲೆಯ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಪುರಾತನ ಕಟ್ಟಡವಾಗಿದ್ದು ಇದಕ್ಕೆ ಹೊಂದಿಕೊಂಡಂತೆ ಇರುವ ತೋಟಗಾರಿಕೆ ಇಲಾಖೆಯ ಜಾಗದಲ್ಲೇ ಹೊಸ ಜಿಲ್ಲಾಡಳಿತ ಭವನ ನಿರ್ಮಾಣದ ಅಗತ್ಯತೆ ಏನು ಪ್ರಶ್ನೆ ಎದ್ದಿದೆ.
ಕಟ್ಟಡದ ವಿಶೇಷತೆ:
ಚಿತ್ರದುರ್ಗದ ಹಳೆಯ ನಗರದ ಹೃದಯ ಭಾಗದಲ್ಲಿದೆ ಈ ಕಟ್ಟಡ ಇದೆ. ಇದರ ವಾಸ್ತುಕಲೆಯು ಬ್ರಿಟಿಷ್ ಶೈಲಿಯಲ್ಲಿದೆ. ಕಟ್ಟಡದ ಗೋಡೆಗಳು ದಪ್ಪವಾಗಿದ್ದು, ಅದರ ಕಿಟಕಿಗಳು ಮತ್ತು ಬಾಗಿಲುಗಳು ಹಳೆಯ ಶೈಲಿಯಲ್ಲಿವೆ. ಕಟ್ಟಡದ ಒಳ ಭಾಗದಲ್ಲಿ ಹಲವಾರು ಕಚೇರಿಗಳು ಮತ್ತು ಸಭಾಂಗಣಗಳಿವೆ.
ಇತಿಹಾಸದ ಭಾಗ ಡಿಸಿ ಕಚೇರಿ:
ಇತ್ತೀಚಿನ ದಿನಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳೆ ಕುಸಿದು ಬೀಳುತ್ತಿವೆ. ಇಲ್ಲ ಉದ್ಘಾಟನೆ ಭಾಗ್ಯ ಕಾಣುವ ಮುನ್ನವೇ ಕಟ್ಟಡಗಳಲ್ಲಿ ಸೋರಿಕೆ ಕಾಣಿಸುತ್ತವೆ. ಚಿತ್ರದುರ್ಗದ ಈ ಐತಿಹಾಸಿಕ ಹಳೆಯ ಕಟ್ಟಡವು ಚಿತ್ರದುರ್ಗ ಇತಿಹಾಸದ ಭಾಗವಾಗಿದೆ. ಈ ಕಟ್ಟಡ ಸಂರಕ್ಷಿಸುವುದು ಮುಖ್ಯವಾಗಿದೆ.
ಈ ಕಟ್ಟಡದ ಐತಿಹಾಸಿಕ ಮಹತ್ವ ಗಮನದಲ್ಲಿಟ್ಟುಕೊಂಡು ಕಟ್ಟಡದ ಮೂಲ ನಿರ್ಮಾಣಕ್ಕೆ ದಕ್ಕೆ ಆಗದಂತೆ ಸಂರಕ್ಷಣೆ ಮಾಡುವ ಮೂಲಕ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕಾಗಿದೆ.

ಐತಿಹಾಸಿಕ ಮಹತ್ವ:
ಬ್ರಿಟಿಷ್ ಆಡಳಿತದ ಅವಧಿಯ1869ರಲ್ಲಿ ನಿರ್ಮಿಸಲಾಗಿದೆ.
ಜಿಲ್ಲೆಯ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.
ಹಳೆಯ ನಗರದ ಹೃದಯ ಭಾಗದಲ್ಲಿದೆ.
ಬ್ರಿಟಿಷ್ ಶೈಲಿಯ ವಾಸ್ತುಕಲೆಯಲ್ಲಿ ನಿರ್ಮಾಣ ಮಾಡಲಾಗಿದೆ.
ಸಂರಕ್ಷಣೆಯ ಅಗತ್ಯವಿದೆ. ಹೊಸ ಕಟ್ಟಡ ನಿರ್ಮಿಸಿ ಜಿಲ್ಲಾಡಳಿತ ಅಲ್ಲಿಗೆ ಸ್ಥಳಾಂತರಗೊಂಡರೆ ಈ ಕಟ್ಟಡ ಅನಾಥವಾಗಿ ದುಸ್ಥಿತಿಗೆ ತಳ್ಳಲ್ಪಡುತ್ತದೆ.
ತೋಟಗಾರಿಕೆ ಇಲಾಖೆ ಜಾಗವೇ ಏಕೆ ಬೇಕು?
ಜಿಲ್ಲಾಧಿಕಾರಿಗಳ ಕಟ್ಟಡ ಸುಸ್ಥಿತಿಯಲ್ಲಿದ್ದರೂ ಕೂಗಳತೆ ದೂರದಲ್ಲಿ ಇದಕ್ಕೆ ಹೊಂದಿಕೊಂಡಂತಿರುವ ತೋಟಗಾರಿಕೆ ಇಲಾಖೆ ಜಾಗದಲ್ಲಿ ಪರ್ಯಾಯವಾಗಿ ಮತ್ತೊಂದು ಜಿಲ್ಲಾಡಳಿತ ಭವನ ನಿರ್ಮಾಣದ ಅಗತ್ಯ ಏನು ಇಲ್ಲ.
ತೋಟಗಾರಿಕೆ ಇಲಾಖೆ ಜಾಗದಲ್ಲಿ ಡಿಸಿ ಕಚೇರಿ ನಿರ್ಮಾಣ ಮಾಡಿದರೆ ಹಳೆಯ ಜಿಲ್ಲಾಧಿಕಾರಿಗಳ ಕಟ್ಟಡದ ಸೌಂದರ್ಯ ಮತ್ತು ಐತಿಹಾಸಿಕ ಮಹತ್ವ ಕುಗ್ಗಿಸಬಹುದು.
ತೋಟಗಾರಿಕೆ ಜಾಗ ಬೇರೆಯಲ್ಲ, ಹಾಲಿ ಇರುವ ಜಿಲ್ಲಾಧಿಕಾರಿಗಳ ಜಾಗ ಬೇರೆಯಲ್ಲ. ಈಗಾಗಲೇ ನಿರ್ಮಾಣ ಮಾಡಲಾಗಿರುವ ನೂತನ ಜಿಲ್ಲಾಧಿಕಾರಿಗಳ ಕಟ್ಟಡಕ್ಕೆ ಜಿಲ್ಲಾಡಳಿತ ಸ್ಥಳಾಂತರಗೊಂಡರೆ ಜಿಲ್ಲೆಯ ಅಭಿವೃದ್ಧಿಯ ಬಾಗಿಲುಗಳು ತೆರೆದುಕೊಳ್ಳಬಹುದು. ಈ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸರ್ಕಾರ, ಅಧಿಕಾರಿಗಳು ಸಮತೋಲನ ಸಾಧಿಸುವುದು ಮುಖ್ಯವಾಗಿದ್ದು ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಿ, ಜನರ ಅಭಿಪ್ರಾಯ ಕೇಳಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯವಾಗಿದೆ.
ಸರ್ಕಾರಕ್ಕೆ ಆರ್ಥಿಕ ಹೊರೆ:
ಕುಂಚಿಗನಾಳ್ ಕಣಿವೆಯಲ್ಲಿ ಸುಮಾರು 47 ಕೋಟಿ ರೂ.ಗಳಲ್ಲಿ ಹೊಸ ಜಿಲ್ಲಾಧಿಕಾರಿಗಳ ಕಟ್ಟಡ ನಿರ್ಮಾಣವಾಗಿ ಲೋಕಾರ್ಪಣೆಗೆ ಕ್ಷಣಗಣನೆ ಆರಂಭಿಸಿದೆ. ಹಾಲಿ ಜಿಲ್ಲಾಧಿಕಾರಿಗಳ ಹಳೆ ಕಟ್ಟಡ ಸುಸ್ಥಿತಿಯಲ್ಲಿದ್ದರೂ ತೋಟಗಾರಿಕೆ ಇಲಾಖೆ ಜಾಗದಲ್ಲಿ ಮತ್ತೊಂದು ಕಟ್ಟಡ ನಿರ್ಮಾಣದ ಅಗತ್ಯ ಏನು ಎನ್ನುವ ಪ್ರಶ್ನೆ ಕಾಡತೊಡಗಿದೆ.
ರಾಜ್ಯದ ಜನರಿಗೆ ಪಂಚ ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್ ಸರ್ಕಾರ ಹೆಚ್ಚುವರಿಯಾಗಿ ಅನುದಾನ ನೀಡಿ ಮತ್ತೊಂದು ಕಟ್ಟಡ ನಿರ್ಮಿಸಿದರೆ ಸರ್ಕಾರಕ್ಕೆ ಆರ್ಥಿಕ ಹೊರೆ ಉಂಟಾಗಲಿದೆ.
ಈ ಮೊತ್ತವು ಸರ್ಕಾರದ ಬಜೆಟ್‌ನಿಂದ ಬರಬೇಕಿದ್ದು ಇದರಿಂದ ಸರ್ಕಾರದ ಆರ್ಥಿಕ ಹೊರೆ ಹೆಚ್ಚಾಗಲಿದೆ. ಹೆಚ್ಚುವರಿಯಾಗಿ, ಈ ಕಟ್ಟಡ ನಿರ್ಮಿಸಿ ನಿರ್ವಹಣೆ ಮಾಡಿದಾಗ ಸೇವಾ ವೆಚ್ಚಗಳೂ ಹೆಚ್ಚಾಗಲಿವೆ. ಇದರಿಂದ ಸರ್ಕಾರದ ವಾರ್ಷಿಕ ವೆಚ್ಚಗಳಲ್ಲಿ ಹೆಚ್ಚಳವಾಗಲಿದೆ.
ಆರ್ಥಿಕ ಹೊರೆ ತಪ್ಪಿಸಲು, ಸರ್ಕಾರವು ಜಿಲ್ಲಾಧಿಕಾರಿಗಳ ಕಟ್ಟಡವನ್ನು ಹಾಲಿ ನಿರ್ಮಿಸಿರುವ ಕುಂಚಿಗನಾಳ್ ಕಣಿವೆಗೆ ಸ್ಥಳಾಂತರಿಸಬೇಕು. ಇಲ್ಲವಾದರೆ ಹಾಲಿ ಇರುವ ಹಳೆಯ ಕಟ್ಟಡದಲ್ಲೇ ಆಡಳಿತ ನಡೆಸುವ ನಿರ್ಧಾರ ತೆಗೆದುಕೊಂಡಲ್ಲಿ ಸರ್ಕಾರದ ಆರ್ಥಿಕ ಹೊರೆ ಕಡಿಮೆಯಾಗಲಿದೆ ಮತ್ತು ಜಿಲ್ಲೆಯ ಆಡಳಿತ ಕಾರ್ಯಗಳೂ ಸುಧಾರಣೆಯಾಗಲಿವೆ.
ದುರ್ಗದ ಡಿಸಿ ಕಚೇರಿ ಕಟ್ಟಡಕ್ಕೆ 157ರ ಸಂಭ್ರಮ:
ಏಳು ಸುತ್ತಿನ ಕೋಟೆಯ ದುರ್ಗ, ವೀರ ಮಹಿಳೆ ಓಬವ್ವ ನಾಡು, ಬತೇರಿಗಳ ಬೀಡು ಹೀಗೆ ಹತ್ತು ಹಲವು ಅನ್ವರ್ಥ ನಾಮಗಳಿಂದ ಬಣ್ಣಿಸಲ್ಪಡುವ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡಕ್ಕೆ ಇದೀಗ 157 ವರ್ಷಗಳ ಸಂಭ್ರಮ.
1869ನೇ ಸಾಲಿನಲ್ಲಿ ಕಟ್ಟಲ್ಪಟ್ಟ ಈ ಕಟ್ಟಡ 157 ವಸಂತಗಳನ್ನು ಕಳೆದರೂ ಇಂದಿಗೂ ಸುಸ್ಥಿತಿಯಲ್ಲಿದೆ.
ಅಲ್ಲದೆ ಗಟ್ಟಿಮುಟ್ಟಾಗಿಯೂ ಇದೆ. ತನ್ನ ಅಂದ ಚೆಂದದಿಂದ ಕಟ್ಟಡ ಈಗಲೂ ಜನಾಕರ್ಷಣೆಯ ಕೇಂದ್ರವಾಗಿದೆ.
ಈಗಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಇಡೀ ಜಿಲ್ಲಾಧಿಕಾರಿಗಳ ಕಟ್ಟಡದ ಅಂದ ಚಂದವನ್ನು ಹೆಚ್ಚಿಸುವ ಕಾರ್ಯ ಮಾಡಿದ್ದಾರೆ. ಮತ್ತು ಮಾಡುತ್ತಿದ್ದಾರೆ. ಅಲ್ಲದೆ ಮೇಲ್ಛಾವಣಿ ಸಂರಕ್ಷಣೆಗಾಗಿ ಮೇಲ್ಭಾಗದಲ್ಲಿ ಜಿಂಕ್ ಶೀಟ್ ಗಳ ಹೊಂದಿಕೆ ಕಾರ್ಯ ಮಾಡಿಸುತ್ತಿರುವುದು ಜಿಲ್ಲಾಧಿಕಾರಿಗಳ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುತೂಹಲಕಾರಿ ಸಂಗತಿಗಳು ಬೆಳಕಿಗೆ:
ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದ ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಸಾಕಷ್ಟು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತವೆ. ಇತಿಹಾಸದ ಪುಟಗಳಲ್ಲಿ ದಾಖಲಾಗಿರುವಂತೆ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ (1799-1868) ರ ಅಧಿಕಾರಾವಧಿಯಲ್ಲಿ ಮೈಸೂರು ರಾಜ್ಯವು ಸುಗಮ ಆಡಳಿತದ ದೃಷ್ಟಿಯಿಂದ 6 ಫೌಜ್‌ದಾರ್‌ಗಳಾಗಿ ಹಾಗೂ ೧೦೧ ತಾಲ್ಲೂಕುಗಳಾಗಿ ವಿಂಗಡಣೆ ಮಾಡಲಾಗಿತ್ತು.
ಬೆಂಗಳೂರು ಹಾಗೂ ಮದ್ದಗಿರಿ (ಈಗಿನ ಮಧುಗಿರಿ) ಜಿಲ್ಲೆಗಳ ವ್ಯಾಪ್ತಿಯಲ್ಲಿ 27 ತಾಲ್ಲೂಕುಗಳು, ಚಿತಲ್‌ಡ್ರುಗ್ (ಈಗಿನ ಚಿತ್ರದುರ್ಗ) ವ್ಯಾಪ್ತಿಗೆ ೧೩ ತಾಲ್ಲೂಕುಗಳು, ಅಷ್ಟಗ್ರಾಮ ವ್ಯಾಪ್ತಿಗೆ ೨೫, ಮಂಜರಾಬಾದ್-೧೧ ಹಾಗೂ ನಗರ್ ವ್ಯಾಪ್ತಿಗೆ ೨೫ ತಾಲ್ಲೂಕುಗಳು ಸೇರಿದ್ದವು.
೧೮೩೪ ರಲ್ಲಿ ಈ ೦೬ ಫೌಜ್‌ದಾರ್‌ಗಳನ್ನು ೦೪ ವಿಭಾಗಗಳಾಗಿ ಅಂದರೆ ಬೆಂಗಳೂರು, ನಗರ್, ಚಿತಲ್‌ಡ್ರುಗ್ ಹಾಗೂ ಅಷ್ಟಗ್ರಾಮ ವಿಭಾಗಗಳಾಗಿ ಮರು ವಿಂಗಡಣೆ ಮಾಡಲಾಯಿತು. ತುಮಕೂರು ಜಿಲ್ಲೆ ಮತ್ತು ಮದ್ದಗಿರಿ (ಈಗಿನ ಮಧುಗಿರಿ) ಫೌಜ್‌ದಾರ್‌ಗಳನ್ನು ಸೇರಿಸಿ ಚಿತಲ್‌ಡ್ರುಗ್ ವಿಭಾಗವಾಗಿ ಮಾಡಲ್ಪಟ್ಟಿತು. ಅಲ್ಲದೆ ತುಮಕೂರನ್ನು ಕೇಂದ್ರಸ್ಥಾನವನ್ನಾಗಿ ಮಾಡಲಾಯಿತು. ಪ್ರತಿ ವಿಭಾಗಕ್ಕೂ ಯೂರೋಪಿಯನ್ ಸೂಪರಿಂಟೆಂಡೆಂಟ್‌ಗಳನ್ನು ನೇಮಕ ಮಾಡಿ, ರೆವಿನ್ಯೂ ಮತ್ತು ಜುಡಿಷಿಯನ್ ಅಧಿಕಾರ ನೀಡಲಾಯಿತು.
ನಂತರದ ವರ್ಷಗಳಲ್ಲಿ ೧೮೬೨ ರಲ್ಲಿ ಲಿವಿನ್ ಬೆಂಥೆಮ್ ಬೋರಿಂಗ್ ಅವರನ್ನು ಮೈಸೂರು ಕಮಿಷನರ್ ಆಗಿ ಬ್ರಿಟೀಷ್ ಸರ್ಕಾರ ನೇಮಕ ಮಾಡಿತು. ಇವರು ಆಡಳಿತದ ದೃಷ್ಟಿಯಿಂದ ಮೈಸೂರು ರಾಜ್ಯವನ್ನು ೮ ಜಿಲ್ಲೆಗಳಾಗಿ ವಿಂಗಡಣೆ ಮಾಡಿದರು. ಇದರಲ್ಲಿ ಚಿತಲ್‌ಡ್ರುಗ್ (ಈಗಿನ ಚಿತ್ರದುರ್ಗ) ಸಹ ಒಂದು. ಈ ೦೮ ಜಿಲ್ಲೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಪ್ರತಿ ವಿಭಾಗಕ್ಕೂ ಒಬ್ಬರು ಸೂಪರಿಂಟೆಂಡೆಂಟ್ ಮತ್ತು ಜಿಲ್ಲೆಗಳಿಗೆ ಡೆಪ್ಯುಟಿ ಸೂಪರಿಂಟೆಂಡೆಂಟ್‌ಗಳನ್ನು ನೇಮಕ ಮಾಡಲಾಯಿತು.
ನಂತರದಲ್ಲಿ ಇಡೀ ರಾಜ್ಯಕ್ಕೆ ಒಬ್ಬರೇ ಚೀಫ್ ಕಮಿಷನರ್ ರನ್ನು ಮತ್ತು ಪ್ರತಿ ಜಿಲ್ಲೆಗೆ ಡೆಪ್ಯೂಟಿ ಕಮಿಷನರ್‌ಗಳನ್ನು ನೇಮಕ ಮಾಡಲಾಯಿತು. ಈ ಕಾರಣಕ್ಕಾಗಿಯೇ ಇಂದಿಗೂ ಕರ್ನಾಟಕದಲ್ಲಿ ಜಿಲ್ಲಾಧಿಕಾರಿಗಳನ್ನು ಇಂಗ್ಲೀಷ್‌ನಲ್ಲಿ ಡೆಪ್ಯೂಟಿ ಕಮಿಷನರ್ ಎಂದೇ ಕರೆಯಲಾಗುತ್ತದೆ.
ಡಿಸಿ ಅವರ ಅಡಿಯಲ್ಲಿ ಉಪವಿಭಾಗಗಳಿಗೆ ಅಸಿಸ್ಟೆಂಟ್ ಕಮಿಷನರ್ (ಎಸಿ ಅಥವಾ ಉಪವಿಭಾಗಾಧಿಕಾರಿ) ಮತ್ತು ತಾಲ್ಲೂಕುಗಳಿಗೆ ಅಮಲ್ದಾರ್‌ಗಳನ್ನು (ಈಗಿನ ತಹಸಿಲ್ದಾರ್) ನೇಮಕ ಮಾಡಲಾಯಿತು.
ಈ ಸಂದರ್ಭದ ವರ್ಷದಲ್ಲಿ ೧೮೬೯ ರಲ್ಲಿ ಚಿತಲ್‌ಡ್ರುಗ್ ಅಂದರೆ ಈಗಿನ ಚಿತ್ರದುರ್ಗದಲ್ಲಿ ಆಗ ಡೆಪ್ಯೂಟಿ ಕಮಿಷನರ್ ಕಚೇರಿ ಕಟ್ಟಡವನ್ನು ನಿರ್ಮಿಸಲಾಯಿತು. ಕಟ್ಟಡದ ನೆಲಮಹಡಿಯ ಪ್ರವೇಶದ್ವಾರದ ಎದುರಿನ ಗೋಡೆಯ ಮೇಲೆ ಕಟ್ಟಡ ಕಟ್ಟುವಾಗ ಅಳವಡಿಸಿದ್ದ ’೧೮೬೯’ ಎಂಬ ಫಲಕವನ್ನು ಈಗಲೂ ಕಾಣಬಹುದಾಗಿದೆ. ಹೀಗಾಗಿ ಕಟ್ಟಡಕ್ಕೆ 2026ಕ್ಕೆ 157 ವರ್ಷಗಳು ಸಂದಿವೆ.
ಕಟ್ಟಡದಲ್ಲಿನ ವ್ಯವಸ್ಥೆ:
ಗುಡುಗು, ಸಿಡಿಲಿಗೆ ಬೆಚ್ಚದ ಬಂಡೆ ಕಲ್ಲಿನಂತೆ ಪಳಿಯುಳಿಕೆಯ ಸ್ಮಾರಕವಾಗಿದೆ. ಹಲವಾರು ಆಡಳಿತದ ಮಜಲುಗಳನ್ನು ಕಂಡಿರುವ ಈ ಕಟ್ಟಡದಲ್ಲಿ ಸದ್ಯ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದ ನೆಲ ಮಹಡಿಯಲ್ಲಿ ಎಸಿ ಕಚೇರಿ, ಸರ್ವೇ ಇಲಾಖೆ, ಆಹಾರ ಇಲಾಖೆ, ಅಂಚೆ ಕಚೇರಿ ಸೇರಿದಂತೆ ವಿವಿಧ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.
ಮೊದಲನೆ ಮಹಡಿಯಲ್ಲಿ ಡಿಸಿ, ಎಡಿಸಿ ಕಚೇರಿ, ಚುನಾವಣಾ ವಿಭಾಗ, ಕಂದಾಯ ಇಲಾಖೆ ಸಿಬ್ಬಂದಿ ವಿಭಾಗ, ಸಣ್ಣ ಉಳಿತಾಯ ಇಲಾಖೆ, ಮುಜರಾಯಿ ಇಲಾಖೆ, ಆಹಾರ ಇಲಾಖೆ, ಎನ್‌ಐಸಿ ಇತರೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.
ಕಟ್ಟಡದ ವಿಶಾಲತೆ ಮತ್ತು ವೆಚ್ಚ:
ಕಟ್ಟಡದ ಕೊಠಡಿಗಳು ಸಾಕಷ್ಟು ವಿಶಾಲವಾಗಿದ್ದು, ಮೇಲ್ಛಾವಣಿ ಭದ್ರವಾಗಿದೆ. ಕಿಟಕಿ, ಬಾಗಿಲುಗಳು ಕೂಡ ಈಗಲೂ ಸುಸ್ಥಿತಿಯಲ್ಲಿದ್ದು ಬಳಕೆಯಲ್ಲಿವೆ. ಲೋಕೋಪಯೋಗಿ ಇಲಾಖೆಯ ಮೂಲಗಳ ಪ್ರಕಾರ ಈ ಕಟ್ಟಡ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ ಭರಿಸಿದ ವೆಚ್ಚ ಕೇವಲ 1.42 ಲಕ್ಷ ರೂ. ಮಾತ್ರ.
ಕಟ್ಟಡದಲ್ಲಿ ಹಲವು ವಿಶಾಲ ಹಾಗೂ ಎತ್ತರದ ಕೊಠಡಿಗಳಿದ್ದು, ಗಾಳಿ ಮತ್ತು ಬೆಳಕಿನ ಕೊರತೆಯಾಗದಂತೆ ನಿರ್ಮಿಸಿರುವ ಕಿಟಕಿಗಳು, ಕೊಠಡಿಯಿಂದ ಕೊಠಡಿಗೆ ತೆರಳಲು ಉತ್ತಮ ಸಂಪರ್ಕ ವ್ಯವಸ್ಥೆ, ಬೃಹತ್ ಕಂಬಗಳು, ನಾಜೂಕಾಗಿ ವ್ಯವಸ್ಥಿತವಾಗಿ ಹಾಕಲಾಗಿರುವ ಗಟ್ಟಿಮುಟ್ಟಾದ ಮೇಲ್ಛಾವಣಿ ಕಟ್ಟಡದ ವಾಸ್ತುಶಿಲ್ಪಿಯ ಜಾಣ್ಮೆಗೆ ಸಾಕ್ಷಿಯಾಗಿವೆ.
ಈಗಿನ ಕಟ್ಟಡಗಳ ಪರಿಸ್ಥಿತಿ:
ಆಧುನಿಕ ಕಾಲದ ಈ ದಿನಗಳಲ್ಲಿ ನಿರ್ಮಿಸಲಾಗುವ ಅನೇಕ ಕಟ್ಟಡಗಳು ಕೆಲವೇ ಕೆಲವು ವರ್ಷಗಳಲ್ಲೇ ಶಿಥಿಲಗೊಂಡು, ಕುಸಿಯುವುದು ಸಾಮಾನ್ಯ ಸಂಗತಿ. ಹೀಗಾಗಿ 157 ವರ್ಷಗಳ ಹಿಂದೆ ಕಟ್ಟಲಾದ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ಸುಸ್ಥಿತಿ ಹಾಗೂ ಗಟ್ಟಿಮುಟ್ಟು ನೋಡಿದರೆ, ಕಟ್ಟಡ ನಿರ್ಮಾಣದ ಗುಣಮಟ್ಟ ಎಂಥಾದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.
ಕಟ್ಟಡಕ್ಕೆ ಬಳಸಿದ ಸಾಮಗ್ರಿಗಳು:
ಇಡೀ ಕಟ್ಟಡವನ್ನು ಸಂಪೂರ್ಣ ಕಲ್ಲು, ಇಟ್ಟಿಗೆ, ಗಾರೆ, ತೇಗದ ಮರದ ದೊಡ್ಡ ದೊಡ್ಡ ಪಟ್ಟಿಗಳಿಂದ ಸುಭದ್ರವಾಗಿ ಅತಿ ಎತ್ತರದಲ್ಲಿ ನಿರ್ಮಾಣ ಮಾಡಲಾಗಿದೆ. ಇಟ್ಟಿಗೆ, ಗಾರೆ, ಕಲ್ಲಿನಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದರೂ ಕಡಪ ಕಲ್ಲಿನಲ್ಲಿ ಮೇಲ್ಛಾವಣಿ (ಆರ್ ಸಿಸಿ) ಹಾಕಲಾಗಿದೆ. ಮಂಗಳೂರು ಹೆಂಚಿನ ರೂಪ್ ಮತ್ತು ಕಟ್ಟಡಕ್ಕೆ ಬಹುತೇಕ ತೇಗ (ಟೀಕ್) ಮರದ ತೊಲೆ(ಪಟ್ಟಿ)ಗಳನ್ನು ಬಳಸಲಾಗಿದ್ದು ಇಂದಿಗೂ ಸುಭದ್ರ ಮತ್ತು ಸುಸ್ಥಿತಿಯಲ್ಲಿವೆ.
ನೆಲದಿಂದ ೧೮ ಅಡಿಯಷ್ಟು ಎತ್ತರದಲ್ಲಿ ಕಡಪ ಕಲ್ಲಿನ ಮೇಲ್ಛಾವಣಿ (ಆರ್ ಸಿಸಿ) ಹಾಕಿರುವುದರಿಂದ ಜಿಲ್ಲಾಧಿಕಾರಿಗಳ ಕಚೇರಿ ಸದಾ ತಂಪು-ತಂಪಾಗಿರುತ್ತದೆ. ಇಂತಹ ಕಟ್ಟಡದಲ್ಲಿ ನೂರಾರು ಜಿಲ್ಲಾಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದಾರೆ.
ಕಟ್ಟಡದ ವಿನ್ಯಾಸ:
ಭಾರತಾಂಗ್ಲ ಶಿಲ್ಪ ಕಲೆ ಹೊಲಿಕೆಯಂತಿರುವ ಕಟ್ಟಡದ ವಿನ್ಯಾಸ ಆಕರ್ಷಕ. ಭಾರತದ ಸಂಸ್ಕೃತಿ, ವಿದೇಶಗಳ ಮೇಲೆ ಪ್ರಭಾವ ಬೀರಿರುವಂತೆ, ವಿದೇಶಿಯರ ಕಲೆ ಮತ್ತು ವಾಸ್ತುಶಿಲ್ಪ, ಸಂಸ್ಕೃತಿ, ಪ್ರತ್ಯೇಕ ಮತ್ತು ಪರೋಕ್ಷವಾಗಿ ಕಟ್ಟಡದ ಮೇಲೆ ಪ್ರಭಾವ ಬೀರಿದ್ದು ಬಹುತೇಕ ಬ್ರಿಟಿಷರ ಕಾಲದ ಕಟ್ಟಡಗಳು ಭಾರತಾಂಗ್ಲ ಶಿಲ್ಪಕಲೆಯಲ್ಲಿ ನಿರ್ಮಾಣಗೊಂಡಿವೆ.
ಆಂಗ್ಲರು ತಮ್ಮ ಕಚೇರಿ, ವಾಸದ ಗೃಹಗಳನ್ನು, ಸಾರ್ವಜನಿಕ ಗೃಹಗಳು ಪ್ರವಾಸಿಮಂದಿರ, ಧರ್ಮಛತ್ರ, ಆಡಳಿತ ಕಟ್ಟಡಗಳನ್ನು ಭಾರತಾಂಗ್ಲ ಶೈಲಿಯಿಂದ ನಿರ್ಮಿಸಿದ್ದರು.
ವಾಸ್ತುಶಿಲ್ಪ ವಾಸ್ತವವಾಗಿ ಅಲಂಕಾರ ಪ್ರಮಾಣ ಕಡಿಮೆಯಾದರೂ ನೋಡುವ ನೋಟಕ್ಕೆ ಸೊಗಸಾಗಿದೆ. ಇವು ಒಂದೇ ಕಲ್ಲಿನಲ್ಲಿ ಕೆತ್ತಿದಂತೆ ಕಾಣುವ ಕಮಾನುಗಳು, ಇಟ್ಟಿಗೆ, ಗಾರೆ ಬಳಸಿದ ಕಂಬಗಳು, ಬುಡದಲ್ಲಿ ದಪ್ಪಗಿದ್ದು ಮೇಲೆ ಹೋದಂತೆ ತೆಳುವಾಗಿ ಕಾಣುತ್ತದೆ. ಕಟ್ಟಡದ ಕಂಬಗಳ ಮೇಲೆ ಕಿಟಕಿ, ಬಾಗಿಲು, ಕಮಾನುಗಳಿಂದ ಕೂಡಿದೆ. ಇಂಥಹ ಅದ್ಭುತ ಕಟ್ಟಡ ಪುನರುಜ್ಜೀವನಗೊಳಿಸಿ ಸಂರಕ್ಷಿಸಬೇಕಿದೆ.

